ನಂಜನಗೂಡು: ಸೆಪ್ಟಂಬರ್ 11ರ ಶುಕ್ರವಾರ ಶ್ರೀಮತಿ ಕಮಲಮ್ಮ ಗುರುಮಲ್ಲಪ್ಪ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಂದನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಎಲ್ಲಾ ಗಣ್ಯರು ಉದ್ಘಾಟಿಸಿದರು.
ನಂತರ ಸಮಾರಂಭದಲ್ಲಿ ಮೊದಲಿಗೆ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರನ್ನು ಶಾಲು ಹಾರ ಹಾಕಿ ನೆನಪಿನ ಕಾಣಿಕೆ ಮತ್ತು ಗುಲಾಬಿ ಹೂ ನೀಡುವುದರ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಭಾಷಣಕಾರರಾಗಿ ರಮೇಶ್ ಶಿಕ್ಷಕರು ಮಾತನಾಡಿ ಈ ದೇಶದ ಮಾಜಿ ರಾಷ್ಟ್ರಪತಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಇವರು ಮಹಾನ್ ತತ್ವಜ್ಞಾನಿ ಶ್ರೇಷ್ಠ ಶಿಕ್ಷಕರಾಗಿದ್ದರು ಶಿಕ್ಷಕರು ಕೇವಲ ಪಾಠವನ್ನು ಕಲಿಸುವುದಷ್ಟೇ ಅಲ್ಲ ನಮ್ಮ ತಪ್ಪುಗಳನ್ನು ತಿದ್ದುತ್ತಾರೆ. ಪ್ರತಿಭೆಗಳನ್ನು ಗುರುತಿಸಿ ಆತ್ಮವಿಶ್ವಾಸವನ್ನು ಬೆಳೆಸುತ್ತಾರೆ ಜೀವನದಲ್ಲಿ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಾರೆ, ಉತ್ತಮ ಶಿಕ್ಷಕರು ವಿದ್ಯಾರ್ಥಿಯ ಜೀವನವನ್ನೇ ಬದಲಾಯಿಸುತ್ತಾರೆ ಎಂದರು.
ಜನಪ್ರಿಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಮಾತನಾಡಿ ಒಬ್ಬ ವಿದ್ಯಾರ್ಥಿಗೆ ಶಿಕ್ಷಣವನ್ನು ಕೊಟ್ಟು ತಿದ್ದಿ ಒಬ್ಬ ಉತ್ತಮ ಪ್ರಜೆಯನ್ನಾಗಿ ಮಾಡುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದರು. ಶಾಸಕರಿಗೆ ಶಿಕ್ಷಕರ ಸಂಘದಿಂದ ಗುರುಭವನ ನಿವೇಶನ ಮಂಜೂರು ಮಾಡಿ ಕೊಡುವಂತೆ ಮನವಿ ಸಲ್ಲಿಸಲಾಯಿತು.
ನಂತರ ನಿವೃತ್ತ ಶಿಕ್ಷಕರಿಗೆ ಹಾಗೂ ತಾಲೂಕು ಮಟ್ಟದ ಉತ್ತಮ ಶಿಕ್ಷಕರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಳಲೆ ಕೇಶವಮೂರ್ತಿ ಮಾಜಿ ಶಾಸಕರು,
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್,
ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಂಗನಾಥ್, ಡಾ. ದೀಪು, ಮಹೇಶ್, ಧರ್ಮ ರತ್ನಾಕರ, ಶ್ರೀಪತಿ, ಕಲ್ಪನಾ ಸೇರಿದಂತೆ ಇನ್ನೂ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.




















