ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಸರ್ವಧರ್ಮ ದ ಜನಾಂಗದವರು ಪಾಲುಗೊಂಡಿದ್ದನ್ನು ಕಂಡು ಸರ್ವಧರ್ಮ ಸಮನ್ವಯತೆಯ ಪ್ರತೀಕ ಶ್ರೀ ಕ್ಷೇತ್ರ ಧರ್ಮಸ್ಥಳ ಎಂದು ಶ್ರೀ ಗುರು ಬಸವ ಮಠ ಸಿರುಗುಪ್ಪದ ಶ್ರೀ ಬಸವ ಭೂಷಣ ಸ್ವಾಮೀಜಿಗಳು ಹೇಳಿದರು.
ಅವರು ಇಂದು ಸಿರುಗುಪ್ಪ ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಸಿರುಗುಪ್ಪ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ವಿಜಯನಗರ ವಲಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಹಾಗೂ ಗ್ರಾಮ ಸುಭಿಕ್ಷೆಗಾಗಿ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ದೇವರು ನಮ್ಮಲ್ಲಿಯೇ ಇದ್ದಾನೆ ಆದರೆ ನಾವು ಮರೆತಿದ್ದೇವೆ. ಪೂಜೆಗಳನ್ನು ಮಾಡುವುದರ ಮೂಲಕ ನಮಗೆ ಹತ್ತಿರವಾಗುತ್ತಾನೆ ಎಂದು ಪೂಜ್ಯ ಡಾ. ಡಿ. ವೀರೇಂದ್ರ ಹೆಗಡೆಯವರು ಹೇಳಿದ ಹಾಗೆ ಈ ದಿನ ನಮ್ಮ ಸಿರುಗುಪ್ಪ ನಗರದ ಎಲ್ಲಾ ಜನರು ಸೇರಿ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿ ಪುನೀತರಾಗಿದ್ದೀರಿ ಈ ರೀತಿಯ ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಾಡಲು ಮಾತ್ರ ಸಾಧ್ಯ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕರಾದ ಪೂರ್ಣಿಮಾ ಅಕ್ಕನವರು ಮಾತನಾಡಿ ಇವತ್ತಿನ ದಿವಸ ಸಾಮೂಹಿಕವಾಗಿ ಜನರನ್ನ ಸೇರಿಸಿ ಪೂಜೆ ಪುನಸ್ಕಾರಗಳನ್ನು ಮಾಡುವುದು ತುಂಬಾ ಕಷ್ಟದ ಕೆಲಸ ಇವತ್ತು ಯಾರನ್ನು ಕೇಳಿದರೂ ಕೂಡ ಪುರುಸೊತ್ತಿಲ್ಲ ಎನ್ನುವ ಜನರ ಮಧ್ಯದಲ್ಲಿ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಶ್ರೀ ಸತ್ಯನಾರಾಯಣನನ್ನು ಒಲಿಸಿಕೊಳ್ಳುವಂತ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿರೋದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ಹೇಳಲು ಹೆಮ್ಮೆ ಅನ್ನಿಸುತ್ತದೆ ಎಂದರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ 65 ಜೋಡಿ ವ್ರತಧಾರಿಗಳು ಪೂಜೆಯಲ್ಲಿ ಕುಳಿತುಕೊಂಡಿದ್ದರು. ಎಲ್ಲಾ ವ್ರತಧಾರಿಗಳಿಗೆ ಪೂಜಾ ವಿಧಿ ವಿಧಾನಗಳನ್ನು ಚನ್ನಬಸವ ಸ್ವಾಮಿ, ಪ್ರಹ್ಲಾದ ಸ್ವಾಮಿ, ರಂಜಿತ್ ಕುಮಾರ್ ಇವರುಗಳು ಮಂತ್ರ ಪಠಣ ಮಾಡುತ್ತಾ ಸತ್ಯನಾರಾಯಣ ಸ್ವಾಮಿಯ ಕಥೆಯನ್ನು ಹೇಳಿ ಎಲ್ಲಾ ವ್ರತಧಾರಿಗಳನ್ನು ಪೂಜೆಯಲ್ಲಿ ಭಕ್ತಿ ಪರವಶರಾಗುವಂತೆ ಮಾಡಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ, ಮುಸಲ್ಮಾನ್ ಸಮುದಾಯದ ಹಿರಿಯ ಚೌದ್ರಿ ಕಾಯ್ಸಾಬ್, ಸಿರುಗುಪ್ಪ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ಷೇತ್ರ ಯೋಜನಾಧಿಕಾರಿ ವಸಂತ ಎಸ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಆರ್ ನಾಗರಾಜ್, ಬಿ ಕಿರಣ್ ಕುಮಾರ್ ಜೈನ್, ಮುತ್ಯಾಲಯ್ಯ ಶೆಟ್ಟಿ, ನಗರಸಭೆ ಸದಸ್ಯ ಗಣೇಶ್ ಹಂಡಿ, ಕೃಷಿ ಮೇಲ್ವಿಚಾರಕ ವೀರೇಶ್, ಜ್ಞಾನವಿಕಾಸ ಸಮಾನಾಧಿಕಾರಿ ಪ್ರಿಯ, ವಲಯ ಮೇಲ್ವಿಚಾರಕಿ ರೇಣುಕಾ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಮಿತಿಯ ಅಧ್ಯಕ್ಷ ಶಿವಶಂಕರ್ ರೆಡ್ಡಿ, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















