ಸರ್ವರ್ ಸಮಸ್ಯೆ ಬಗೆಹರಿಸುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ತಹಶೀಲ್ದಾರ್ ಅವರಿಗೆ ಮನವಿ
ಕೊರಟಗೆರೆ: ರಾಜ್ಯ ಸರ್ಕಾರದ ಆದೇಶದಂತೆ ಪಡಿತರ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದ್ದು, ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿ ಮಾಡಲು ಸಮಸ್ಯೆ ಆಗುತ್ತಿದ್ದು ಅದನ್ನು ಸರಿಪಡಿಸಿ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಗ್ರೇಡ್-೨ ತಹಸೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೊರಟಗೆರೆ ತಾಲೂಕಿನಲ್ಲಿ ಒಟ್ಟು ೮೨ ನ್ಯಾಯಬೆಲೆ ಅಂಗಡಿಗಳಿದ್ದು, ಪ್ರತಿ ದಿನ ನೂರಾರು ಪಡಿತರದಾರರು ಪಡಿತರ ಪಡೆಯಲು ಆಗಮಿಸುತ್ತಾರೆ. ಆದರೆ ಪಡಿತರ ವಿತರಣೆಗೆ ಮುನ್ನ ರಾಜ್ಯ ಸರ್ಕಾರದ ಆದೇಶದಂತೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಸರ್ವರ್ ಸಮಸ್ಯೆಯಿಂದಾಗಿ ಅಂಗಡಿಗಳ ಮುಂದೆ ಜನರು ಕೆಲಸ ಕಾರ್ಯ ಬಿಟ್ಟು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಡಿತರ ಅಂಗಡಿಯ ಮಾಲೀಕ ರಮೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರು ಕೂಲಿ ಕಾರ್ಮಿಕರು ತಮ್ಮ ಕೆಲಸಗಳನ್ನು ಬಿಟ್ಟು ಇ-ಕೆವೈಸಿ ಮಾಡಿಸಲು ಆಗಮಿಸುತ್ತಾರೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ತುಂಬಾ ನಿಧಾನವಾಗಿ ಕೆಲಸ ಮಾಡುತ್ತಿದೆ. ಒಂದು ಕಾರ್ಡ್ ನಲ್ಲಿರುವ ನಾಲ್ಕು ಜನ ಸದಸ್ಯರ ಇ-ಕೆವೈಸಿ ಮಾಡಲು ಕೆಲವೊಮ್ಮೆ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಪಡಿತರದಾರರು ಗಂಟೆಗಟ್ಟಲೆ ಕಾಯಬೇಕಾಗಿದ್ದು, ನಮ್ಮ ಮೇಲೆಯೂ ಒತ್ತಡ ಹಾಕುತ್ತಾರೆ. ಸರ್ಕಾರ ಕೂಡಲೇ ಸರ್ವರ್ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯ ಮಾಡಿದರು.
ಪಡಿತರ ಅಂಗಡಿಯ ಮಾಲೀಕ ಆನಂದ್ ಮಾತನಾಡಿ ಕಳೆದ ಬಾರಿ ಪಡಿತರದಾರರಿಗೆ ಇ-ಕೆವೈಸಿ ಮಾಡಿಕೊಡುವ ಕೆಲಸವನ್ನು ನಾವು ಮಾಡಿದ್ದೇವೆ. ಆದರೆ ಅದಕ್ಕೆ ಸರ್ಕಾರದಿಂದ ಬರಬೇಕಾದ ಹಣ ಇನ್ನೂ ಬಿಡುಗಡೆಯಾಗಿಲ್ಲ. ಕೊರಟಗೆರೆ ತಾಲೂಕಿನ ೮೨ ನ್ಯಾಯಬೆಲೆ ಅಂಗಡಿ ಮಾಲೀಕರಿಗೂ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ನಾವು ಮಾಡಿರುವ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಣ ನೀಡಬೇಕು. ಈ ತಿಂಗಳ ಒಳಗೆ ಇ-ಕೆವೈಸಿ ಮುಗಿಸಬೇಕು ಎಂದು ಸರ್ಕಾರ ಆದೇಶ ಮಾಡಲಾಗಿದೆ. ೨೦ ರ ನಂತರ ಪಡಿತರ ವಿತರಣೆ ಮಾಡಬೇಕು. ಇ-ಕೆವೈಸಿ ಸಮಸ್ಯೆ ಹೀಗೆಯೇ ಮುಂದುವರೆದರೆ ಇ-ಕೆವೈಸಿ ಮಾಡಲು ಸಮಸ್ಯೆ ಆಗುತ್ತದೆ ಸರ್ಕಾರ ಈ ಸಮಸ್ಯೆಯನ್ನು ಸರಿಪಡಿಸಿ ಎಂದು ಒತ್ತಾಯಿಸಿದರು.
ಮಾಲೀಕ ನಾಗೇಂದ್ರ ಮಾತನಾಡಿ, ಪಡಿತರ ಸಾಮಾಗ್ರಿಗಳು ಪ್ರತಿ ತಿಂಗಳ ಆರಂಭದಲ್ಲೇ ನ್ಯಾಯಬೆಲೆ ಅಂಗಡಿಗಳಿಗೆ ತಲುಪಬೇಕು. ಆದರೆ ಹಲವು ಬಾರಿ ತಿಂಗಳ ಕೊನೆಯಲ್ಲಿ ಪಡಿತರ ಬರುತ್ತಿರುವುದರಿಂದ ಪಡಿತರ ವಿತರಣೆ ಮಾಡಲು ತೊಂದರೆಯಾಗುತ್ತಿದೆ. ಒಂದು ಕಡೆ ಇ-ಕೆವೈಸಿ ಸರ್ವರ್ ಸಮಸ್ಯೆ, ಮತ್ತೊಂದು ಕಡೆ ಪಡಿತರ ಸಾಮಗ್ರಿಗಳ ವಿಳಂಬ. ನಮ್ಮ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ನೀಡಬೇಕು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಯ ಮಾಲೀಕರ ಸಂಘದ ಕಾರ್ಯದರ್ಶಿ ನಾಗೇಶ್ಕುಮಾರ್, ಖಜಾಂಚಿ ಮಲ್ಲಿಕಾರ್ಜುನ, ಜಯಣ್ಣ, ರಮೇಶ್, ಕೆ.ಎಲ್.ಆನಂದ್, ಸ್ವಾಮಿ, ರಂಗಶಾಮಯ್ಯ, ಹರೀಶ್, ನರಸಿಂಹಮೂರ್ತಿ, ಮಂಜುನಾಥ್, ಸಿದ್ದಲಿಂಗಯ್ಯ, ಹನುಮಂತರೆಡ್ಡಿ, ರಂಗರಾಜು ಸೇರಿದಂತೆ ಇತರರು ಇದ್ದರು.
ಕೊರಟಗೆರೆ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿ ಮಾಡಲು ಸಮಸ್ಯೆ ಆಗುತ್ತಿದ್ದು ಅದನ್ನು ಸರಿಪಡಿಸಿ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಗ್ರೇಡ್-೨ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವರದಿ ಪ್ರಸನ್ನಕುಮಾರ್. ಎಸ್. ಕೊರಟಗೆರೆ




















