
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಣ್ಣೇನಹಳ್ಳಿಯಿಂದ ಹೊಸಕೋಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಕ್ಕಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿದ್ದು, ಶೀಘ್ರದಲ್ಲೇ ರಸ್ತೆ ಒತ್ತುವರಿ ತೆರವುಗೊಳಿಸುವುದಾಗಿ ತಹಶೀಲ್ದಾರ್ ಮಂಜುನಾಥ್ ಭರವಸೆ ನೀಡಿದ್ದಾರೆ.
ಹೊಸಕೋಟೆ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ, ರಸ್ತೆ ಬದಿಯಲ್ಲಿ ಬೋರ್‌ವೆಲ್ ಕೊರೆಯಲು ಗ್ರಾಮಸ್ಥರು ಮುಂದಾಗಿದ್ದರು.
ಈ ವೇಳೆ ಅಕ್ಕಪಕ್ಕದ ಜಮೀನಿನವರು ಆಕ್ಷೇಪ ವ್ಯಕ್ತಪಡಿಸಿ, ಬೋರ್‌ವೆಲ್ ಕೊರೆಯಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.
ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಂಜುನಾಥ್ ಅವರು ಸ್ಥಳ ಪರಿಶೀಲನೆ ನಡೆಸಿ, ಮಾತನಾಡಿದ ಅವರು, ಸರ್ಕಾರದ ವತಿಯಿಂದ ಪಿಡಬ್ಲ್ಯೂಡಿ ಹಾಗೂ ಪಿಆರ್‌ಇಡಿ ಇಲಾಖೆಗಳ ಅಡಿಯಲ್ಲಿ ಈ ರಸ್ತೆ ನಿರ್ಮಾಣವಾಗಿದ್ದು, ನಿಯಮದ ಪ್ರಕಾರ ರಸ್ತೆ 12 ಮೀಟರ್ ಅಗಲ ಇರಬೇಕಾಗಿದೆ. ಆದರೆ ಅಕ್ಕಪಕ್ಕದ ಜಮೀನಿನವರು ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿದೆ. ಸಂಬಂಧಪಟ್ಟ ಪಿಡಬ್ಲ್ಯೂಡಿ ಇಲಾಖೆ ತಿಳಿಸಿ
ರಸ್ತೆ ಒತ್ತುವರಿಯನ್ನು ಶೀಘ್ರದಲ್ಲೇ ತೆರವುಗೊಳಿಸಿ, ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಲಾಗುವುದು ಎಂದು ತಹಶೀಲ್ದಾರ್ ಮಂಜುನಾಥ್. ಕೆ ಭರವಸೆ ನೀಡಿದರು.
ವರದಿ ಪ್ರಸನ್ನ ಕುಮಾರ್




















