ಬರೆಹ ರೂಪದ ಬದುಕಿನ ಛಾಯೆಯೇ ಸಾಹಿತ್ಯ. ಪರಂಪರೆಯಿಂದಲೂ ಅನುಭವಗಳನ್ನು ಅಭಿವ್ಯಕ್ತಗೊಳಿಸುತ್ತಾ, ಮಾನವರೊಳಗೆ ಮಾನವತ್ವವನ್ನು ಜೀವಂತವಾಗಿರಿಸಿರುವ ಸಾಹಿತ್ಯ, ಬದುಕಿನ ಬಹು ಆಯಾಮಗಳಿಂದ ಮುಖ್ಯವೆನಿಸುತ್ತದೆ. ಇಂತಹದೊಂದು ಸಾಹಿತ್ಯ ವಲಯದ ಅಗತ್ಯ ಪ್ರಸ್ತುತ ಜನಮಾನಸಕ್ಕೆ ಅತ್ಯವಶ್ಯವಾಗಿದೆ.
ದೈನಂದಿನ ದಿನಗಳಲ್ಲಿ ಹೊಸ ಪರಂಪರೆ ಹೆಡಿತನ, ಒಂಟಿತನ ಮತ್ತು ಅತ್ಯಾಲೋಚನೆಗೆ ಒಳಗಾಗಿ, ಸಮಸ್ಯೆಗಳ ಸುಳಿವಿಗೆ ಸಿಲುಕಿ ಅದರಿಂದ ಹೊರಬರಲಾರದೆ ಕೆಟ್ಟನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವುದು, ದುಷ್ಟಟಗಳಿಗೆ ಬಲಿಯಾಗುತ್ತಿರುವುದು, ಅಹಿತಕರ ಸಂಗತಿಗಳಲ್ಲಿ ಭಾಗಿಯಾಗುತ್ತಿರುವುದು ಕಣ್ಣಮುಂದಿದೆ. ಅತ್ಯಂತ ಸೂಕ್ಷ್ಮಮನಸ್ಥಿತಿಯವರಾದ ಯುವಕರು ಸಾಹಿತ್ಯದ ಓದಿನ ಕೊರತೆಯಿಂದ ಬದುಕಿನ ಬಹುದೊಡ್ಡ ಬಲವನ್ನು ಕಳೆದುಕೊಂಡಂತಾಗಿದೆ. ಧೈರ್ಯನೀಡುವ, ಸಲಹೆನೀಡುವ, ಸಮಸ್ಯೆಗಳಿಗೆ ಪರಿಹಾರ ಓದಗಿಸುವ ಮತ್ತು ನೋವಿನಲಿ ಭರವಸೆಯ ಹೆಗಲ ನೀಡುವ ಸಾಹಿತ್ಯದ ಕೊರತೆಯ ಅರಿವು ಹೊಸ ಪರಂಪರೆಗೆ ತಿಳಿಯಬೇಕಿದೆ. ಹಾಗೆ ಮಾಡಲು ನಮ್ಮ ಬಳಿ ಎರಡು ಆಯುಧಗಳಿವೆ.
ಮೊದಲನೆಯದು ಬರಹ. ಹೊಸ ಪರಂಪರೆಯಲ್ಲಿ ಅಥವಾ ಯುವಜನತೆಯ ಅಂತರಾಳದಲ್ಲಿ ಅಡಗಿರುವ ಅದೆಷ್ಟೋ ಭಾವನೆಗಳಿಗೆ ಜೀವಂತ ರೂಪ ದೊರೆಯುವಂತೆ ಮಾಡುವುದು. ಅರ್ಥಾತ್ ಬರೆವಣಿಗೆಗೆ ಅಥವಾ ಸಾಹಿತ್ಯ ರಚನೆಗೆ ಪ್ರೇರೇಪಿಸುವುದು.
ಅನುಭವಗಳು ಎದೆಯನ್ನು ಭಾರವಾಗಿಸುತ್ತವೆ. ದಿನನಿತ್ಯ ಅದೆಷ್ಟೋ ನೋವಿಗೆ ಒಳಗಾಗುವ ಯುವಜನತೆ ಭಾವನೆಗಳ ಹೊರಹಾಕಲಾಗದೆ ಮಾನಸಿಕವಾಗಿ ಕುಗ್ಗಿಹೋಗುತ್ತಿದೆ. ಅಂತರಾಳದಲ್ಲಿ ನೋವಿದ್ದರೂ ನಗಬೇಕಾದ ಪರಿಸ್ಥಿತಿಯಲ್ಲಿದೆ. ಅದರ ಪರಿಣಾಮ ಭೀಕರ. ಅನುಭವಿಸಿದವರಿಗೆ ಮಾತ್ರ ಅದು ಗೊತ್ತು. ಹೀಗಿರುವಾಗ ಮನದಲ್ಲಿರುವ ಮರುಕವನ್ನು ಬರೆಹ ರೂಪಕ್ಕೆ ಇಳಿಸಲು ಅನುವಾದರೆ ಅದರಿಂದ ನೋವೂ ಕಡಿಮೆಯಾಗಬಹುದು. ಎದೆಯ ಭಾರವೂ ಇಳಿಯಬಹುದು. ಮಾನಸಿಕ ರೋಗಿಯಾಗ ಹೊರಟಿದ್ದ ಒಂದು ಜೀವ ಮೋಟಿವೇಷನ್ ಸ್ಪೀಕರ್ ಆಗಬಹುದೇನೊ?. ಗೊತ್ತಿಲ್ಲ. ಭವಿಷ್ಯದಲ್ಲಿ ಅರಿವಿಗೆ ಮೀರಿಯೂ ಬೆಳೆಯಬಹುದೇನೊ?. ಸಾಹಿತ್ಯ ಲೋಕ ನೀಡುವ ಪ್ರೇರಣೆ, ಸ್ಫೂರ್ತಿ, ಪ್ರೋತ್ಸಾಹ ಮುಂದಿನ ದಿನಗಳಲ್ಲಿ ಅನೇಕ ಜೀವಗಳಿಗೆ ಜೀವಾಳವಾಗಿಯೂ ಪರಿವರ್ತನೆಯಾಗಬಹುದು. ಕನ್ನಡದ ಆದಿಕವಿ ಪಂಪ, ಮಲೆನಾಡಿನ ಸೊಬಗನು ಅಕ್ಷರ ರೂಪಕ್ಕಿಳಿಸಿದ ಕನ್ನಡದ ರಾಷ್ಟ್ರಕವಿಯಾದ ಕುವೆಂಪು ಹಾಗೂ ಯುನಿಕ್ ಪರ್ಸನಾಲಿಟಿ ಮತ್ತು ರೈಟಿಂಗ್ ಮೂಲಕ ಯುವಜನತೆಯ ಮೆಚ್ಚುಗೆಗೆ ಪಾತ್ರರಾದ ಪೂರ್ಣಚಂದ್ರ ತೇಜಸ್ವಿಯಂತಹ ಪ್ರತಿಭೆಗಳೂ ಭವಿಸಬಹುದೇನೊ.
ಎರಡನೆಯ ಆಯುಧವೂ ಬರೆಹವೆ. ಅಂದರೆ, ಸಾಹಿತ್ಯ ರಚನೆಯಲ್ಲಿ ಹೊಸ ಪರಂಪರೆಗೆ ಅವಶ್ಯವಾದ ರಚನೆಯನ್ನು ಮಾಡುವುದು.
ಸಾಹಿತ್ಯ ಮನದ ನೆಮ್ಮದಿಗೆ, ಬದುಕಿನ ಶಿಸ್ತಿಗೆ, ಮಾನವತ್ವಕ್ಕೆ, ಸಂಸ್ಕಾರಕ್ಕೆ, ಉತ್ತಮ ಭವಿಷ್ಯಕ್ಕೆ ಮಾರ್ಗದರ್ಶಕ. ಬದುಕು ಮತ್ತು ಸಮಾಜ ಎರಡರಲ್ಲೂ ಬದಲಾವಣೆಯನ್ನು ತರಬಹುದಾದ ಸಾಮರ್ಥ್ಯ ಸಾಹಿತ್ಯಕ್ಕಿದೆ. ಒಂಟಿತನಕ್ಕೆ ಒಳಗಾಗಿ ಸ್ನೇಹಿತರನ್ನು ಮೊಬೈಲ್ ಆಪ್ಗಳಲ್ಲಿ ಹುಡುಕ ಹೊರಟಿರುವವರಿಗೆ, ಪ್ರಯಾಣದಲ್ಲಿ ಜೊತೆಯಲ್ಲಿರಲೆಂದು ದಿನಕ್ಕೆ ಹತ್ತುಸಾವಿರ ಹಣವನ್ನು ನೀಡಿ ಸ್ನೇಹಿತರನ್ನು ಇಲ್ಲವೆ ಮಾರ್ಗದರ್ಶಕರನ್ನು ಬುಕ್ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪುಸ್ತಕವನ್ನು ಸ್ನೇಹಿತರಂತೆ ಭಾವಿಸಿ ಓದಿಗೆ ಒತ್ತುನೀಡಿ ಅರಿವನ್ನು ಹೆಚ್ಚಿಸಿಕೊಳ್ಳುತ್ತಿದ್ದ ಪರಿಸ್ಥಿತಿಯಿಂದ ಇಂತಹದೊಂದು ಪರಿಸ್ಥಿತಿಗೆ ತಲುಪಿರಲು ಅನೇಕ ಕಾರಣಗಳಿವೆ. ಅದರಲ್ಲಿ ಸಾಹಿತ್ಯವೂ ಒಂದು. ಇದು ನನ್ನ ಆರೋಪವಲ್ಲ. ಆದರೆ, ಹೊಸ ಪರಂಪರೆಯ ಅಗತ್ಯಗಳನ್ನು, ಆಸಕ್ತಿಗಳನ್ನು ಅರಿತು ಸಾಹಿತ್ಯ ಕೃತಿಗಳನ್ನು ರಚಿಸುವಲ್ಲಿನ ಕೊರತೆ ಹೊಸ ಪರಂಪರೆಯನ್ನು ಓದಿನಿಂದ, ಸಾಹಿತ್ಯ ಲೋಕದಿಂದ ದೂರವಿಟ್ಟಿದೆ ಎಂದರೆ ತಪ್ಪಾಗಲಾರದು. ಇದನ್ನರಿತು ಹೊಸ ಪರಂಪರೆಯ ಅಭಿರುಚಿಗೆ ಅನುಗುಣವಾಗಿ ಸಾಹಿತ್ಯವನ್ನು ರಚಿಸಿದ್ದೇ ಆದಲ್ಲಿ, ನವೋದಯ, ನವ್ಯದಂತಹ ಸಾಹಿತ್ಯ ಸಂಭ್ರಮ ಮರುಕಳಿಸಬಹುದು. ಮತ್ತೆ ಸಾಹಿತ್ಯಪರ್ವ ಆರಂಭವಾಗಬಹುದು. ಒಟ್ಟಿನಲ್ಲಿ ಬರೆಹ ಸಾಧನವಾಗಬೇಕಪ್ಪ.
ಲೇಖಕಿ ಡಾ.ಲೋಹಿತೇಶ್ವರಿ ಎಸ್.ಪಿ.
ಚಳ್ಳಕೆರೆ, ಚಿತ್ರದುರ್ಗ.


















