ನಾಡ ಗುಡಿಯ ಅಂಗಳದಲ್ಲಿ
ಸಂಭ್ರಮ ಸಡಗರ ನೋಡಿಲ್ಲಿ
ಕನ್ನಡ ಡಿಂಡಿಮ ಸದ್ದಿನಲ್ಲಿ
ನಮ್ಮತನದ ಸದ್ದು ಕೇಳಿಲ್ಲಿ
ರನ್ನ ಪಂಪರ ಬರಹದಲ್ಲಿ
ಸರ್ವಜ್ಞ ಬಸವರ ವಚನದಲ್ಲಿ
ವಿಜಯನಗರ ಮೈಸೂರು ಚಾಲುಕ್ಯರಲ್ಲಿ
ಕನ್ನಡ ಮೆರೆದಿದೆ ಉತ್ತುಂಗದಲ್ಲಿ
ಮಠ ಮಂದಿರ ಮಸೀದಿಗಳಲ್ಲಿ
ಸೌಹಾರ್ದತೆಯ ಕನ್ನಡ ಕರುಳಿನಲ್ಲಿ
ಚಲಿಸುವ ರಥಗಳ ಚಿತ್ತಾರದಲ್ಲಿ
ಕನ್ನಡ ಸಾಗುತಿದೆ ಗಾಂಭೀರ್ಯದಲ್ಲಿ
ಕುಂಕುಮ ಅರಿಶಿಣದ ನಿಶಾನೆಯಲ್ಲಿ
ಅಭಿಮಾನ ಹಾರಾಡಿ ಬಾನೆತ್ತರದಲ್ಲಿ
ಭುವನೇಶ್ವರಿ ಕರದ ಲೇಖನಿಯಲ್ಲಿ
ಕನ್ನಡ ಹಸಿರಾಗಿದೆ ಉಸಿರಿನಲ್ಲಿ
ಕನ್ನಡ ನುಡಿದ ಕಾಯಗಳಿಲ್ಲಿ
ತಾರೆಗಳಾಗಿ ಹೊಳೆಯುತಿವೆ ಜಗದಲ್ಲಿ
ಬಾನ ತಾರೆಗಳೂ ಕರುನಾಡಿನಲ್ಲಿ
ಕನ್ನಡಿಗರಾಗಲು ಇಳಿದುಬರುತಿವೆ ಅಭಿಮಾನದಲ್ಲಿ
- ಕಲ್ಲಪ್ಪ ಕವಳಕೇರಿ ಮಂಗಳೂರು✍️
(ಕೊಪ್ಪಳ ಜಿಲ್ಲೆ )




















