ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಕೊಪ್ಪಳ/ ಕಾರಟಗಿ : ತಾಲೂಕಿನ ಗುಂಡೂರು ಗ್ರಾಮ
ಪಂಚಾಯಿತಿ ವ್ಯಾಪ್ತಿಯ ಸಿಂಗನಾಳ ಗ್ರಾಮದ ಒಂದನೇ ವಾರ್ಡ್ ದ್ಯಾಮಮ್ಮನಗುಡಿ ಹತ್ತಿರ ಕಳೆದ ಸುಮಾರು ಐದು ತಿಂಗಳಿಂದ ಬೀದಿ ದೀಪ ಇಲ್ಲದೆ ಸಾರ್ವಜನಿಕರು ರಾತ್ರಿ ವೇಳೆ ಕತ್ತಲಲ್ಲಿ ಸಂಚರಿಸುವಂತಾಗಿದೆ. ಈ ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರಾದ ನಿಂಗನಗೌಡ ಪೊಲೀಸ್ ಪಾಟೀಲ್ ಹಾಗೂ ಯಮನೂರ ಮಡಿವಾಳ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಒಂದನೇ ವಾರ್ಡ್ ದ್ಯಾಮಮ್ಮನಗುಡಿ ಸುತ್ತಮುತ್ತ ಬೀದಿ ದೀಪದ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಸಾರ್ವಜನಿಕರು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾತ್ರಿ ಸಮಯದಲ್ಲಿ ಹುಳು-ಹುಪ್ಪಟೆಗಳು ಹೆಚ್ಚಾಗುತ್ತಿದ್ದು, ಕತ್ತಲಿನಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಐದು ತಿಂಗಳಾದರೂ ಸಮಸ್ಯೆಗೆ ಪರಿಹಾರವಿಲ್ಲ !
ಗ್ರಾಮದಲ್ಲಿ ಬೀದಿ ದೀಪ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಗ್ರಾಮ ಪಂಚಾಯಿತಿಯ ಮೂಲಭೂತ ಕರ್ತವ್ಯವಾಗಿದೆ. ಆದರೆ, ದ್ಯಾಮಮ್ಮನಗುಡಿ ಸಮೀಪದ ಬೀದಿ ದೀಪದ ಸಮಸ್ಯೆ ಹಲವು ತಿಂಗಳುಗಳಿಂದ ಅಧಿಕಾರಿಗಳು ಮುಂದುವರೆದಿದ್ದರೂ ಗಮನಹರಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.
ರಾತ್ರಿ ವೇಳೆ ಮಹಿಳೆಯರು, ವೃದ್ಧರು ಹಾಗೂ ಸಾರ್ವಜನಿಕರು ಸಂಚರಿಸಲು ತೊಂದರೆಯಾಗುತ್ತಿದ್ದು, ಯಾವುದೇ ಅನಾಹುತ ಸಂಭವಿಸುವ ಮುನ್ನ ಗ್ರಾಮ ಪಂಚಾಯಿತಿ ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ತಕ್ಷಣ ಬೀದಿ ದೀಪ ಅಳವಡಿಸಲು ಆಗ್ರಹ
ಸಿಂಗನಾಳ ಗ್ರಾಮದ ಒಂದನೇ ವಾರ್ಡ್ನ ದ್ಯಾಮಮ್ಮನಗುಡಿ ಹತ್ತಿರ ತಕ್ಷಣ ದೀಪದ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ನಿಂಗನಗೌಡ ಪೊಲೀಸ್ ಪಾಟೀಲ್, ಯಮನೂರ ಮಡಿವಾಳ ಸೇರಿದಂತೆ ಸ್ಥಳೀಯರು ಆಗ್ರಹಿಸಿದ್ದಾರೆ.




















