ಶಿವಮೊಗ್ಗ : ನಬಾರ್ಡ್ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯ ಮಹಾಪ್ರಬಂಧಕರಾದ ಡಾ. ಸುರೇಂದ್ರ ಬಾಬು ಅವರು 2026ರ ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಶಿವಮೊಗ್ಗ ಜಿಲ್ಲೆಗೆ ಅಧಿಕೃತ ಭೇಟಿ ನೀಡಿ, ಜಿಲ್ಲೆಯ ಸಾಲ ಯೋಜನೆ, ಸಹಕಾರ ಸಂಸ್ಥೆಗಳ ಕಾರ್ಯಕ್ಷಮತೆ ಹಾಗೂ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ₹4,013 ಕೋಟಿ ಮೊತ್ತದ ಒಟ್ಟು ವ್ಯವಹಾರ ಹೊಂದಿರುವ ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ ₹406.90 ಕೋಟಿ ನಬಾರ್ಡ್ ಮರುಹಣಕಾಸು (Refinance) ಬೆಂಬಲ ಪಡೆದಿರುವ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (DCCB) ನ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ಅವರು, ಬ್ಯಾಂಕಿನ ನಿರ್ವಹಣೆಗೆ CASA ಅನುಪಾತದಲ್ಲಿನ ಕುಸಿತವನ್ನು ತಡೆಗಟ್ಟುವುದು, ಆಸ್ತಿ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ (PACS) ಗಣಕೀಕರಣವನ್ನು 2027ರ ಮಾರ್ಚ್ 31ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಜಿಲ್ಲಾ ಪ್ರವಾಸದ ವೇಳೆ ನಬಾರ್ಡ್ ಪ್ರೋತ್ಸಾಹದಡಿ ಜಾರಿಗೊಳಿಸಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಾದ ರೈತ ಉತ್ಪಾದಕರ ಸಂಸ್ಥೆಗಳ (FPOs) ಉತ್ತೇಜನ, ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಹಾಗೂ ಜಲಾನಯನ ವ್ಯಾಪ್ತಿಯಲ್ಲದ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನೂ ಅವರು ಪರಿಶೀಲಿಸಿದರು.
ಶಿಮುಲ್ (SHIMUL) ಆಡಳಿತ ಮಂಡಳಿಯೊಂದಿಗೆ ನಡೆದ ಸಭೆಯಲ್ಲಿ, ಹಾಲು ಸಂಗ್ರಹಣೆಯ ಪ್ರಮಾಣವನ್ನು ಹೆಚ್ಚಿಸುವ ಕಾರ್ಯತಂತ್ರಗಳ ಕುರಿತು ಚರ್ಚಿಸಿದ ಅವರು, ಹಾಲು ಸಂಸ್ಕರಣಾ ಘಟಕಗಳ ಆಧುನೀಕರಣಕ್ಕಾಗಿ ಪಶುಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ (AHIDF) ಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
₹188.93 ಲಕ್ಷ ವಹಿವಾಟು ದಾಖಲಿಸಿರುವ ಹೊಸನಗರ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ (FPCL) ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಯೋಜನೆ ಪೂರ್ಣಗೊಳ್ಳುವ ಮೊದಲು ಬಾಕಿ ಇರುವ ₹7.29 ಲಕ್ಷ ಈಕ್ವಿಟಿ ಅನುದಾನವನ್ನು ಪಡೆಯುವಂತೆ, ಅಡಿಕೆ ವ್ಯಾಪಾರ ಮತ್ತು ಮಸಾಲೆ ಉತ್ಪನ್ನಗಳ ಮೌಲ್ಯವರ್ಧನೆ ಚಟುವಟಿಕೆಗಳಿಗೆ ವಿಸ್ತರಣೆ ಮಾಡುವಂತೆ ಹಾಗೂ ಗುಣಮಟ್ಟ ಭರವಸೆ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ CFTRI ಯಂತಹ ಪ್ರತಿಷ್ಠಿತ ಸಂಸ್ಥೆಗಳ ಮಾರ್ಗದರ್ಶನ ಪಡೆಯುವಂತೆ ನಿರ್ದೇಶಕರ ಮಂಡಳಿಗೆ ಸಲಹೆ ನೀಡಿದರು.
ತೀರ್ಥಹಳ್ಳಿ ತಾಲ್ಲೂಕಿನ ಐತಿಹಾಸಿಕ ಕೋಣಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (PACS) ಗೆ ಭೇಟಿ ನೀಡಿದ ವೇಳೆ, ₹125 ಲಕ್ಷ ವೆಚ್ಚದ ವಾಣಿಜ್ಯ ಸಂಕೀರ್ಣದ ಮೂಲಕ ನಿಯಮಿತ ಬಾಡಿಗೆ ಆದಾಯ ಗಳಿಸುತ್ತಾ ಬಹುಸೇವಾ ಕೇಂದ್ರವಾಗಿ (Multi-Service Centre) ರೂಪಾಂತರಗೊಂಡಿರುವ ಸಂಘದ ಕಾರ್ಯವನ್ನು ಶ್ಲಾಘಿಸಿದರು. ಜೊತೆಗೆ, ವ್ಯಾಪಾರ ವಿಸ್ತರಣೆಗೆ ಒತ್ತು ನೀಡುವಂತೆ ಹಾಗೂ ಡೈನಾಮಿಕ್ ಡೇ-ಎಂಡ್ ಗಣಕೀಕರಣ ವ್ಯವಸ್ಥೆಯನ್ನು ಒಂದು ವಾರದೊಳಗೆ ಅಳವಡಿಸಿಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ನಬಾರ್ಡ್‌ನ ಸಹಾಯಕ ಮಹಾಪ್ರಬಂಧಕರಾದ ಶ್ರೀಮತಿ ಲೀನಾ ಶಂಕರ್ ಅವರು ಜಿಲ್ಲೆಯ ವಿವಿಧ PACS ಗಳ ಗಣಕೀಕರಣದಲ್ಲಿ ಎದುರಾಗುತ್ತಿರುವ ಸವಾಲುಗಳ ಕುರಿತು ಸ್ಥಳೀಯ ಸಹಕಾರ ಸಂಘಗಳ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ, ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ,/ ಮೈಸೂರು.


















