ಕುರುಗೋಡು ಸ್ವತಂತ್ರ ಎಪಿಎಂಸಿ ಮಾಡಲು ಶೀಘ್ರ ಕ್ರಮ : ಮಿನಿ ವಿಧಾನಸೌಧ ಶೀಘ್ರದಲ್ಲೇ ಲೋಕಾರ್ಪಣೆ.
ಕಂಪ್ಲಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿರುವ ತಹಶೀಲ್ದಾರ್ ಕಚೇರಿ ಮುಂಭಾಗದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್. ಗಣೇಶ್ ಗುರುವಾರ ಭೂಮಿ ಪೂಜೆ ನೆರವೇರಿಸಿದರು.
2025-26ನೇ ಸಾಲಿನ ಮಾರುಕಟ್ಟೆ ಅಭಿವೃದ್ಧಿ ನೆರವು ನಿಧಿ ಮತ್ತು ಸಮಿತಿ ನಿಧಿ ಯೋಜನೆಯಡಿ ಸುಮಾರು ₹1.17 ಕೋಟಿ (117 ಲಕ್ಷ) ವೆಚ್ಚದಲ್ಲಿ ಈ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಜೆ.ಎನ್.ಗಣೇಶ್, “ಎಪಿಎಂಸಿ ಅಭಿವೃದ್ಧಿಗಾಗಿ ಈಗಾಗಲೇ ₹10 ಕೋಟಿ ಅನುದಾನ ನೀಡಲಾಗಿದೆ. ರೈತರಿಗೆ ಮತ್ತು ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪ್ರತಿ ಹಂತದಲ್ಲೂ ಆದ್ಯತೆ ನೀಡಲಾಗುತ್ತಿದೆ. ಹಿಂದೆ ಹೊಸಪೇಟೆ ಎಪಿಎಂಸಿ ವ್ಯಾಪ್ತಿಯಲ್ಲಿದ್ದ ಕಂಪ್ಲಿ ಉಪ ಮಾರುಕಟ್ಟೆ ಈಗ ಸ್ವತಂತ್ರಗೊಂಡು ಬಳ್ಳಾರಿ ವ್ಯಾಪ್ತಿಗೆ ಸೇರಿದೆ. ಅದೇ ಮಾದರಿಯಲ್ಲಿ ಕುರುಗೋಡು ಎಪಿಎಂಸಿಯನ್ನೂ ಸಹ ಅತಿ ಶೀಘ್ರದಲ್ಲಿ ಸ್ವತಂತ್ರ ಮಾರುಕಟ್ಟೆಯನ್ನಾಗಿ ಮಾಡಲಾಗುವುದು,” ಎಂದರು.
ರೈತ ಭವನ ಮತ್ತು ಮಿನಿ ವಿಧಾನಸೌಧ:
“ರೈತರ ಅನುಕೂಲಕ್ಕಾಗಿ ‘ರೈತ ಭವನ’ ನಿರ್ಮಿಸಲು ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಸ್ಥಳ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಕಂಪ್ಲಿಯ ಮಿನಿ ವಿಧಾನಸೌಧದ ಮುಖ್ಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಕಾಂಪೌಂಡ್, ಚರಂಡಿಯಂತಹ ಸಣ್ಣಪುಟ್ಟ ಕೆಲಸಗಳು ಮುಗಿದ ತಕ್ಷಣ, ಅದನ್ನು ಅದ್ದೂರಿಯಾಗಿ ಉದ್ಘಾಟಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು,” ಎಂದು ತಿಳಿಸಿದರು.
ಚುನಾವಣೆಗೆ ಕಾಂಗ್ರೆಸ್ ಸಿದ್ಧ :
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಿದ್ಧವಾಗಿದೆ ಎಂದ ಶಾಸಕರು, ಇಂದೇ ಚುನಾವಣೆ ಘೋಷಣೆಯಾದರೂ ಎದುರಿಸಲು ಸಿದ್ಧರಿದ್ದೇವೆ. ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರಲಾಗುವುದು ಎಂದರು. ಇದೇ ವೇಳೆ, ಬಸ್ ಮತ್ತು ಹಾಲಿನ ದರ ಏರಿಕೆ ಕುರಿತು ಪ್ರತಿಕ್ರಿಯಿಸಿ, ಜನರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಂಪ್ಲಿ ಸೇತುವೆ ಕನಸು ನನಸಿಗೆ ಸಹಕರಿಸಿ:
ಕಂಪ್ಲಿ ಸೇತುವೆ ನಿರ್ಮಾಣದ ಕನಸು ನನಸಾಗುವ ದಿನ ಹತ್ತಿರ ಬಂದಿದೆ. ಸೇತುವೆಗಾಗಿ ರೈತರ ಜಮೀನುಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲೇ ಖರೀದಿಸಲಾಗುವುದು. ಈ ನಿಟ್ಟಿನಲ್ಲಿ ರೈತರೊಂದಿಗೆ ಸಭೆ ನಡೆಸಿ, ಜಮೀನು ನೀಡಲು ಮನವಿ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಎನ್. ಹಬೀಬ್ ರೆಹಮಾನ್ ಮಾತನಾಡಿದರು. ವೇದಿಕೆಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಶ್ರೀನಿವಾಸರಾವ್, ಎಪಿಎಂಸಿ ಉಪಾಧ್ಯಕ್ಷ ಇಟ್ಟಾಗಿ ಶರಣಬಸವ, ಸದಸ್ಯರಾದ ಗೌಡ್ರು ಅಂಜಿನಪ್ಪ, ಈ. ದೊಡ್ಡರ್ರಿಸ್ವಾಮಿ, ಪಂಪಾಪತಿ, ಕೆ. ಕಾಸಿಂಸಾಬ್, ಚನ್ನಬಸಪ್ಪ ಹಾಗೂ ಪ್ರಮುಖರಾದ ಬಿ. ನಾರಾಯಣಪ್ಪ, ಡಿ. ಮೌನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















