ಸಮಗ್ರ ಕೃಷಿ ಪದ್ಧತಿಯಿಂದ ಆರ್ಥಿಕ ಪ್ರಗತಿ ಸಾಧ್ಯ: ಡಾ. ಸದಾಶಿವ ಉಪ್ಪಾರ
ಬಳ್ಳಾರಿ: ರೈತರು ಕೇವಲ ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗದೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ಎರೆಹುಳು ಗೊಬ್ಬರ ತಯಾರಿಕೆಯಂತಹ ಪೂರಕ ಚಟುವಟಿಕೆಗಳನ್ನು ಒಳಗೊಂಡ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಸದಾಶಿವ ಉಪ್ಪಾರ ಹೇಳಿದರು.
ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್ಸೆಟಿ) ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ 13 ದಿನಗಳ ಉಚಿತ ‘ಕೃಷಿ ಉದ್ಯಮಿ’ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕು ಮಟ್ಟದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳು ಮತ್ತು ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಇದೇ ವೇಳೆ ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಬಿ. ಕೊಳ್ಳೂರುಮಠ ಮಾತನಾಡಿ, ” ನಮ್ಮ ಸಂಸ್ಥೆಯಲ್ಲಿ ಕೃಷಿ ತಾಂತ್ರಿಕತೆಯ ಜೊತೆಗೆ ಶಿಬಿರಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ವೃದ್ಧಿ ಹಾಗೂ ಸಂವಹನ ಕೌಶಲ್ಯಗಳ ತರಬೇತಿಯನ್ನು ನೀಡಲಾಗುತ್ತದೆ. ಇದು ಅವರು ವೃತ್ತಿ ಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಸಹಕಾರಿಯಾಗಲಿದೆ ” ಎಂದರು.
ಕೆನರಾ ಬ್ಯಾಂಕ್ನ ಜಿಲ್ಲಾ ಲೀಡ್ ವ್ಯವಸ್ಥಾಪಕ ಗಿರೀಶ್ ವಿ. ಕುಲಕರ್ಣಿ ಅವರು ಕೃಷಿ ಮತ್ತು ಸ್ವ-ಉದ್ಯೋಗ ಕೈಗೊಳ್ಳಲು ವಿವಿಧ ಬ್ಯಾಂಕ್ಗಳಲ್ಲಿ ಲಭ್ಯವಿರುವ ಸಾಲ ಸೌಲಭ್ಯಗಳು ಹಾಗೂ ಆರ್ಥಿಕ ನೆರವಿನ ಕುರಿತು ವಿಸ್ತೃತ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ, ಜಿಲ್ಲಾ ಪಂಚಾಯತ್ ಎನ್ಆರ್ಎಲ್ಎಂ ಸಿಬ್ಬಂದಿ, ಉಪನ್ಯಾಸಕರಾದ ಜಡೆಪ್ಪ, ಸಿದ್ದಲಿಂಗಮ್ಮ, ಸಂತೋಷ್ ಕುಮಾರ್, ಪರಮೇಶ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ 35 ಶಿಬಿರಾರ್ಥಿಗಳು ಈ ಉಚಿತ ವಸತಿ ಸಹಿತ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















