
ಪ್ರತಿಭಾ ಕಾರಂಜಿ, ಕಲೋತ್ಸವ
ಕಂಪ್ಲಿ: “ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರನ್ನು ನಾಡಿನ ಆಸ್ತಿಯನ್ನಾಗಿ ರೂಪಿಸುವ ಹೊಣೆ ಶಿಕ್ಷಕರು ಮತ್ತು ಪೋಷಕರ ಮೇಲಿದೆ. ಮಕ್ಕಳು ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕೇ ಹೊರತು ಮಾರಕವಾಗಬಾರದು” ಎಂದು ಕಲ್ಯಾಣ ಚೌಕಿಮಠದ ಬಸವರಾಜ ಶಾಸ್ತ್ರಿ ಕರೆ ನೀಡಿದರು.
ಪಟ್ಟಣದ ಸಂತೆಮಾರುಕಟ್ಟೆ ಬಳಿಯ ಕಲ್ಯಾಣ ಚೌಕಿಮಠದ ಶಂಭುಲಿಂಗೇಶ್ವರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಶಾಲಾ ಶಿಕ್ಷಣ ಇಲಾಖೆ, ಕುರುಗೋಡು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಹಾಗೂ 8ನೇ ವಾರ್ಡ್ ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಈ ಕಲೋತ್ಸವವನ್ನು ಆಯೋಜಿಸಲಾಗಿತ್ತು.
“ಮಕ್ಕಳ ಸಹಜ ಬೆಳವಣಿಗೆಯು ಪ್ರಕೃತಿಯೊಂದಿಗೆ ಬೆಸೆದುಕೊಂಡಿರುತ್ತದೆ. ಸಾಹಿತ್ಯ, ಸಂಗೀತ, ಅಭಿನಯದಂತಹ ಕಲಾ ಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಮಕ್ಕಳನ್ನು ಬಾಲ್ಯದಲ್ಲೇ ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಬೇಕು” ಎಂದು ಶ್ರೀಗಳು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಿಆರ್ಪಿ ಎ. ಗಂಗಾಧರ, “ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆಯಾಗಿದೆ. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಪಾಲ್ಗೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ” ಎಂದರು.
ಸಂಸ್ಥೆಯ ಅಧ್ಯಕ್ಷ ಚನ್ನಮಲ್ಲಯ್ಯ ಶಾಸ್ತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗಾಗಿ ಛದ್ಮವೇಷ, ಭಾವಗೀತೆ, ದೇಶಭಕ್ತಿ ಗೀತೆ, ಕನ್ನಡ ಮತ್ತು ಹಿಂದಿ ಬಾಯಿಪಾಠ ಸೇರಿದಂತೆ 11ಕ್ಕೂ ಅಧಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಎನ್ಪಿಎಸ್ ರಾಜ್ಯಾಧ್ಯಕ್ಷ ನಾಗನಗೌಡ ಎಂ.ಎ., ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್. ದೊಡ್ಡಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತ, ಪ್ರಧಾನ ಕಾರ್ಯದರ್ಶಿ ಎಚ್. ಜಡೆಪ್ಪ, ಜಿಪಿಟಿ ಸಂಘದ ಅಧ್ಯಕ್ಷ ಮಂಜುನಾಥ, ಸಿಇಒ ಎಂ. ರೇವಣ್ಣ, ಉಪ ಪ್ರಾಚಾರ್ಯೆ ಸುಜಾತಾ, ಸಿಆರ್ಪಿಗಳಾದ ರೇಣುಕಾರಾಧ್ಯ, ಎ.ಎಸ್. ಭೂಮೇಶ್ವರ, ಪ್ರಭಾಕರ, ಕರುಣಾಕರ, ಶಿಕ್ಷಕರಾದ ರಮೇಶ ಸುಗ್ಗೇನಹಳ್ಳಿ, ರುದ್ರಪ್ಪ ನಾಯಕ್, ರೇವಣಸಿದ್ದೇಶ ಸೇರಿದಂತೆ ಮುಖ್ಯಗುರುಗಳು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















