
“ಕುರಿತೋದದೆಯಂ ಕಾವ್ಯ
ಪ್ರಯೋಗ ಪರಿಣಿತ ಮತಿಗಳ್”
ಕನ್ನಡ ಸಾಹಿತ್ಯದ ಪ್ರಪ್ರಥಮ ಲಕ್ಷಣ ಕಾವ್ಯ ಕೃತಿಯಾದ ಶ್ರೀ ವಿಜಯ ಕವಿಯಿಂದ ಒಂಬತ್ತನೇ ಶತಮಾನದಲ್ಲಿ ರಚಿಸಲ್ಪಟ್ಟ ” ಕವಿರಾಜ ಮಾರ್ಗ” ಕೃತಿಯಲ್ಲಿ ಉಲ್ಲೇಖವಾದ ಸಾಲುಗಳಿವು.
ಈ ಸಾಲುಗಳ ತಾತ್ಪರ್ಯವೇನೆಂದರೆ, ಕನ್ನಡ ನಾಡಿನ ಜನಪದರು ಅವಿದ್ಯಾವಂತರಾದರೂ, ಸ್ವತಃ ಕಾವ್ಯಗಳ ಅಭ್ಯಾಸ ಮಾಡದಿದ್ದರೂ ಕಾವ್ಯವನ್ನು ಅರ್ಥಮಾಡಿಕೊಳ್ಳುವ ಮತ್ತು ಸ್ವತಃ ಕಾವ್ಯವನ್ನು ಕಟ್ಟುವ ಬುದ್ಧಿ, ಸಾಮರ್ಥ್ಯ ಉಳ್ಳವರು ಎಂಬುದಾಗಿದೆ.
ಕಾವ್ಯದ ಈ ಸಾಲುಗಳು ಈ ವರ್ಷದ ಅಂದರೆ 2026ನೇ ಸಾಲಿನ, ಕರ್ನಾಟಕ ಸರಕಾರದ
ಜಾನಪದ ಅಕಾಡೆಮಿಯ ವಿಶೇಷ ಗೌರವ ಪ್ರಶಸ್ತಿ, ಪುರಸ್ಕಾರಕ್ಕೆ ಭಾಜನರಾಗಿರುವ ಕುಷ್ಟಗಿ ತಾಲೂಕಿನ ಹಿರೇ ಗೊಣ್ಣಾಗರ ಗ್ರಾಮದ ಶ್ರೀಮತಿ ಮುದುಕವ್ವ ಗಂಜಾಳರಿಗೂ ಅನ್ವಯಿಸುತ್ತವೆ.
ಮುದುಕವ್ವ ಗಂಜಾಳ ಅವರನ್ನು ಸಂದರ್ಶಿಸುವ ಅವಕಾಶ ನನಗೆ ದೊರೆತಾಗ, ಅವರ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ, ಅವರ ಪರಿಚಯ ಲೇಖನ ಬರೆಯುವ ಮೂಲಕ,
ಮೊದಲಿಗೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇ ಗೊಣ್ಣಾಗರ ಗ್ರಾಮದ ಮುದುಕಪ್ಪ ಮತ್ತು ದ್ಯಾಮವ್ವ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಕೊನೆಯ ಮಗಳಾಗಿ ದಿ. ೧. ೧. ೧೯೬೭ರಲ್ಲಿ ಜನಿಸಿದ, ಮುದುಕವ್ವ ಅವರಿಗೆ, ಮನೆಯಲ್ಲಿ ತೀರಾ ಬಡತನದ ಕಾರಣದಿಂದಾಗಿ ಶಾಲೆಯ ಮೆಟ್ಟಿಲನ್ನು ಹತ್ತಲಾಗಲಿಲ್ಲ. ಆದರೆ ಬಾಲ್ಯದ ದಿನಗಳಿಂದಲೇ
ನಾಟಕ, ಜನಪದ ಕಥೆ, ಜಾನಪದ ಹಾಡುಗಳ ಕಡೆ ಆಸಕ್ತಿ ಹೊಂದಿ, ತಾನೂ ಆ ಹಾಡುಗಳನ್ನು ಹಾಡಬೇಕೆಂದು, ಗ್ರಾಮದ ಸಮಾನ ಆಸಕ್ತರನ್ನು ಕೂಡಿಸಿ, ತಮ್ಮದೇ ಆದ ತಂಡ ಕಟ್ಟಿ,
ಗೀ ಗೀ ಪದಗಳನ್ನು ಹಾಡುವ ಮೂಲಕ ಜನಮನ ರಂಜಿಸುವುದರ ಜೊತೆಗೇ ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಜೀವಂತವಾಗಿಡುವ ಕಾರ್ಯದಲ್ಲಿ ತೊಡಗಿರುವರು.
ಇವರ ಆಸಕ್ತಿಯನ್ನು ಗಮನಿಸಿದ ಫಕೀರಪ್ಪ ಇಳಕಲ್, ಎಂಬುವವರು ಮುದುಕವ್ವ ನವರಿಗೆ ಹಾಡುಗಾರಿಕೆಯ ವಿದ್ಯೆ ಕಲಿಸುವ ಗುರುಗಳಾಗಿ ಸಿಕ್ಕಿದ್ದರಿಂದ ಮತ್ತು ಇವರೂ ಕೂಡ ಬಹಳ ಶೃದ್ಧೆ, ಭಕ್ತಿಯಿಂದ, ಹಾಡುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು
ಇಂದು ತಾಲೂಕಾ ಮಟ್ಟ, ಜಿಲ್ಲಾ ಮಟ್ಟ, ಅಷ್ಟೇ ಅಲ್ಲ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ನೀಡುವ ಮಟ್ಟಿಗೆ ಬೆಳೆದಿರುವುದು, ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ.

ಕುಷ್ಟಗಿ, ಕೊಪ್ಪಳ, ಗಜೇಂದ್ರಗಡ, ಮುಧೋಳ, ಗದಗ, ಕಿತ್ತೂರು, ಇಟಗಿ, ಮುಂತಾದ ಕಡೆಗಳಲ್ಲಿ ಗೀ ಗೀ ಪದಗಳನ್ನು ಹಾಡಿ ಜಾನಪದ ಹಾಡುಗಾರ್ತಿಯಾಗಿ ಹೆಸರು ವಾಸಿಯಾಗಿದ್ದಾರೆ.
ಮುದುಕವ್ವ ಗಂಜಾಳ ಅವರು ಈವರೆಗೆ ಆನೆಗುಂದಿ ಉತ್ಸವ, ಇಟಗಿ ಉತ್ಸವ, ಕೊಪ್ಪಳ ಜಿಲ್ಲಾ ಉತ್ಸವ, ಕಿತ್ತೂರು ಉತ್ಸವಗಳಂತಹ ರಾಜ್ಯಮಟ್ಟದ ಸಮಾರಂಭಗಳಲ್ಲಿ ತಮ್ಮ ಸುಮಧುರ ಕಂಠದಿಂದ ಗೀ ಗೀ ಪದಗಳನ್ನು ಹಾಡಿ ಅನೇಕ ಸಂಘ ಸಂಸ್ಥೆ ಗಳಿಂದ ಪ್ರಶಸ್ತಿ ಮತ್ತುಸನ್ಮಾನಗಳನ್ನು ಪಡೆದುಕೊಂಡಿದ್ದಾರೆ.
ಮುದುಕವ್ವ ಗಂಜಾಳ ಅವರ ಹಾಡುಗಾರಿಕೆಯ ಮತ್ತೊಂದು ವಿಶೇಷತೆ ಏನೆಂದರೆ ಕೈಯಲ್ಲೊಂದು ಡಪ್ಪು (ಹಲಗೆ) ಯನ್ನು ಹಿಡಿದುಕೊಂಡು ರಾಗಬದ್ಧವಾಗಿ ಗೀ ಗೀ ಪದಗಳನ್ನು ಹಾಡುವ ಇವರ ಗೀಗೀ ಪದಗಳಿಗೆ ಗುಂಗು ಹಿಡಿಸುವ ಶಕ್ತಿ ಇದೆ.
ನಮ್ಮ ಜಾನಪದ ಸಂಸ್ಕೃತಿಯ ಕಲಾ ಪ್ರಕಾರಗಳಲ್ಲಿ ಒಂದಾದ ಗೀ ಗೀ ಪದಗಳನ್ನು ಹಾಡುವ ಮೂಲಕ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳನ್ನು ಶ್ರೀಮಂತಗೊಳಿಸುವ ತನ್ಮೂಲಕ ಜೀವಂತವಾಗಿರಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಅಪ್ಪಟ
ಗ್ರಾಮೀಣ ಪ್ರತಿಭೆಯಾಗಿರುವ ಶ್ರೀಮತಿ ಮುದುಕವ್ವ ಗಂಜಾಳ ಅವರ ಹಾಡುಗಾರಿಕೆಯ ಪ್ರತಿಭೆಯನ್ನು ಗುರುತಿಸಿದ ಕರ್ನಾಟಕ ಸರಕಾರದ ಜಾನಪದ ಅಕಾಡೆಮಿಯು ಇವರಿಗೆ 2026ನೇ ಸಾಲಿನ ವಿಶೇಷ ಗೌರವ ಪ್ರಶಸ್ತಿ ನೀಡಿ ಗೌರವಿಸಿದ್ದು ಸೂಕ್ತವೇ ಆಗಿದೆ.
ನಮ್ಮ ಜಾನಪದ ಸಾಹಿತ್ಯದ, ಬೀಸುವ ಪದಗಳು, ಸೋಬಾನೆ ಪದಗಳು,ಜನಪದ ಗೀತೆಗಳು,ಗೀ ಗೀ ಪದಗಳು ಇಂದಿಗೂ ಜೀವಂತಿಕೆಯನ್ನು
ಉಳಿಸಿಕೊಂಡಿರುವುದಕ್ಕೆ ಮುದುಕವ್ವ ಗಂಜಾಳ ರಂತವರು ಉದಾಹರಣೆಯಾಗಿದ್ದಾರೆ,
ಇಂದಿನ ಯುವ ಪೀಳಿಗೆಗೆ, ಮಾರ್ಗದರ್ಶನ ಮಾಡಿ ಮಾದರಿಯಾಗಲಿ, ಇವರಿಗೆ
ಮತ್ತಷ್ಟು ಅವಕಾಶಗಳು ಸಿಗಲೆಂದು ಆಶಿಸುತ್ತಾ ನನ್ನ ಈ ಪರಿಚಯ ಬರಹಕ್ಕೆ ವಿರಾಮ ಹೇಳುವೆ.
- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು.
ಸ. ಪ್ರ. ದ. ಕಾಲೇಜು,
ಕೊಪ್ಪಳ. ೫೮೩೨೩೧.
ಮೊಬೈಲ್ : ೭೯೯೬೭೯೦೧೮೯.




















