ಗದಗ : ರಾಜ್ಯದಲ್ಲಿ ಆರಂಭವಾದ ಜಾತಿಗಣತಿ ಸಮೀಕ್ಷೆಗೆ ನಿಖರವಾದ ಮಾಹಿತಿ ನೀಡಲು ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾದ ಗದಗ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಸುರೇಶ ವಾಯ್. ಚಲವಾದಿ ಅವರು ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ಆಯೋಗ ನೀಡಿರುವ ಮನವಿಯ ಅಂಗವಾಗಿ ರಾಜ್ಯ ಸರ್ಕಾರ ಇಂದಿನಿಂದ ಪರಿಶಿಷ್ಟ ಜಾತಿಯ ಜನರ ಜನಗಣತಿ ಮಾಡಲು ಆದೇಶ ಹೊರಡಿಸಿರುತ್ತದೆ. ಕಾರಣ ಪರಿಶಿಷ್ಟ ಜಾತಿಯ ಎಡ ಮತ್ತು ಬಲ ಸಮುದಾಯಗಳು ತಮ್ಮ ಜಾತಿ ಕಾಲಂನಲ್ಲಿ ನಿಖರವಾದ ಮಾಹಿತಿ ನೀಡಿ ಸಹಕರಿಸಬೇಕು. ಚಲವಾದಿ ಸಮುದಾಯದ ಜನತೆ ತಮ್ಮ ಜಾತಿ ಕಾಲಂ ನಲ್ಲಿ ಹೊಲೆಯ, ಚಲವಾದಿ, ಬಲಗೈ, ಮಾಲ, ಮಹರ್, ಅಥವಾ ಪರಯ್ಯವೆಂದು ನಮೂದಿಸಬೇಕು ಆದಿ ಕರ್ನಾಟಕ, ಆದಿ ದ್ರಾವಿಡವೆಂದು ನಮೂದಿಸಿದಲ್ಲಿ ಅದು ಸ್ಪಷ್ಟವಾದ ಮಾಹಿತಿಯಾಗುವದಿಲ್ಲವೆಂದು ಹೇಳಿದರು.
ಕಳೆದ ಮೂರು ದಶಕಗಳ ಕಾಲ ಅಸ್ಪ್ರಶ್ಯ ಸಮುದಾಯಗಳಾದ ಎಡ ಮತ್ತು ಬಲ ಸಮುದಾಯಗಳು ನಿವ್ರತ್ತ ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಶೋಷಿತ ಸಮುದಾಯಗಳ ನ್ಯಾಯಯುತ ಬೇಡಿಕೆಯಾದ ನಿವ್ರತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಸಾಕಷ್ಟು ಬಾರಿ ಹೋರಾಟಗಳನ್ನ ಪಾದಯಾತ್ರೆಗಳನ್ನು ಮಾಡಿ ಸರ್ಕಾರಕ್ಕೆ ಅಂಗಲಾಚಿ ಬೇಡಿಕೊಂಡರೂ ಸಹಿತ ಎಮ್ಮೆ ಚರ್ಮದ ರಾಜ್ಯ ಸರ್ಕಾರ ಇನ್ನೂ ಕೂಡಾ ಒಂದಿಲ್ಲ ಒಂದು ನೆಪಗಳನ್ನೊಡ್ಡುತ್ತಾ ಈ ರಾಜ್ಯದ ಬಹುಸಂಖ್ಯಾತರಾದ ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಅಸ್ಪೃಶ್ಯ ಸಮುದಾಯಗಳಾದ ಹೊಲೆಯ ಮತ್ತು ಸಹೋದರ ಸಮುದಾಯವಾದ ಮಾದಿಗ ಸಮುದಾಯಗಳಿಗೆ ವಂಚನೆ ಮಾಡುತ್ತಾ ಬಂದಿರುತ್ತದೆ, ರಾಜ್ಯದಲ್ಲಿ ನಿವೃತ್ತ ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗದ ವರದಿಯನ್ನ ಯಥಾವತ್ತಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರದ ವಿರುದ್ದ ದೊಡ್ಡಮಟ್ಟದ ಹೋರಾಟ ನಡೀತಾನೆ ಇದೆ. ಆದರೆ ಸರ್ಕಾರ ಮಾತ್ರ ಮತ್ತೆ ಜಾತಿಗಣತಿಯ ನೆಪವೊಡ್ಡಿ ಅನ್ಯಾಯವೆಸಗಿದೆ.
ಸರ್ಕಾರಕ್ಕೆ ಕೊನೆಯ ಅವಕಾಶವನ್ನ ಕೊಡುವುದರ ಜೊತೆಗೆ ಸರ್ಕಾರ ಹೊರಡಿಸಿರುವ ಜಾತಿ ಗಣತಿಯಲ್ಲಿ ಚಲವಾದಿ ಹಾಗೂ ಮಾದಿಗ ಸಮುದಾಯದ ಜೊತೆಗೆ 101 ಉಪಜಾತಿಯ ಸಮುದಾಯಗಳು ತಮ್ಮ ಜಾತಿಯನ್ನು ಸ್ಪಷ್ಟವಾಗಿ ನಮೂದಿಸಿ ಜಾತಿ ಗಣತಿಯನ್ನ ಯಶಸ್ವಿಯಾಗಿ ನಡೆಸಿಕೊಡುವದರ ಜೊತೆಗೆ ಜನಸಂಖ್ಯೆಗನುಗುಣವಾಗಿ ಒಳಮೀಸಲಾತಿಯ ಲಾಭವನ್ನು ಪಡೆಯುವಲ್ಲಿ ನಾವೆಲ್ಲರೂ ಪಾಲುದಾರರಾಗೋಣವೆಂದು ಹೇಳಿದರು.
ಜಾತಿ ಜನಗಣತಿ ಮುಗಿದ ಕೂಡಲೆ ಸರ್ಕಾರ ವರದಿಯನ್ನು ಪಡೆದು ಕೂಡಲೆ ಜಾತ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಶೋಷಿತ ಸಮುದಾಯಗಳ ಪರವಾಗಿ ವಿನಂತಿಸಿಕೊಳ್ಳುತ್ತೇನೆ, ಒಂದು ವೇಳೆ ಸರ್ಕಾರ ಮತ್ತೇನಾದರೂ ಕುಂಟು ನೆಪಗಳನ್ನೊಡ್ಡಿ ಒಳ ಮೀಸಲಾತಿಯನ್ನು ಜಾರಿಗೊಳಿಸದೇ ಹೋದಲ್ಲಿ ಮುಂದಿನ ದಿನಮಾನಗಳಲ್ಲಿ ನೊಂದಿರುವ ಅಸ್ಪೃಶ್ಯ ಸಮುದಾಯ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತವೆ ಎಂದು ಎಚ್ಚರಿಸಿದರು.
- ಕರುನಾಡ ಕಂದ




















