ರಾಜ್ಯದಲ್ಲಿನ 40 ರಿಂದ 45 ಲಕ್ಷ ಅನಧಿಕೃತ ಆಸ್ತಿಗಳಿಗೆ ದುಪ್ಪಟ್ಟು ತೆರಿಗೆ ಪಾವತಿಸಿಕೊಂಡು ಒಂದು ಬಾರಿ ಬಿ ಖಾತೆ ನೀಡುವ ಮಹತ್ವದ ಯೋಜನೆ ಸರಕಾರದ ಬೊಕ್ಕಸಕ್ಕಿಂತ ಇವರ ಜೇಬು ಹೆಚ್ಚು ತುಂಬಿಕೊಳ್ಳುತ್ತಿದ್ದಾರೆ.
ಕರ್ನಾಟಕ ಸರಕಾರ ಬಿ ಖಾತೆಗೆ ಮೂರು ತಿಂಗಳು (ಫೆಬ್ರವರಿ 10 ರಿಂದ ಮೇ 10) ರ ವರೆಗೆ ಗಡುವು ನೀಡಿತ್ತು, ಈಗ ಗಡುವು ಮುಕ್ತಾಯಗೊಳ್ಳುವ ದಿನಾಂಕ ಸನಿಹ ಬರುತ್ತಿರುವ ಹೊತ್ತಿನಲ್ಲಿ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಕರೆಯಿಸಿ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ಅಧಿಕಾರಿಗಳು ರಕ್ತ ಪಿಶಾಚಿಗಳಾಗಿ ಬಡ, ಮಾಧ್ಯಮ, ಮುಗ್ಧ ಜನರ ಹತ್ತಿರ ಬಿ ಖಾತೆ ಮಾಡಿಕೊಡಲು ನಾನಾ ಕಾರಣ ಕೊಟ್ಟು ಜನರನ್ನು ಗೊಂದಲಕ್ಕೆ ಗುರಿ ಮಾಡಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ.
ಸರಕಾರದ ಸೂಚನೆಯಂತೆ 1992 ರ ನಂತರ ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ಆಸ್ತಿಗಳು, ರಿಜಿಸ್ಟರ್ ಆಗಿರುವ ರೆವಿನ್ಯೂ ನಿವೇಶನಗಳು, ಸಕ್ಷಮ ಪ್ರಾಧಿಕಾರಗಳಿಂದ ಲೈಸೆನ್ಸ್ ಪಡೆಯದೆ ನಿರ್ಮಿಸಿಕೊಂಡಿರುವ ಆಸ್ತಿಗಳು, 2024 ರ ಸೆಪ್ಟೆಂಬರ್ 25 ರ ಹಿಂದಿನ ನೋಂದಣಿಯಾಗಿರುವ ಆಸ್ತಿಗಳು ಬಿ ಖಾತೆ ಪಡೆಯಲು ಅರ್ಹವಾಗಿವೆ, ಈಗಾಗಲೇ ಸಾಕಷ್ಟು ಅರ್ಜಿಗಳು ಸ್ವೀಕೃತಗೊಂಡಿವೆ.
ರಾಜ್ಯ ಸರಕಾರದಿಂದ ನಗರ ಪ್ರದೇಶ ವ್ಯಾಪ್ತಿಯಲ್ಲಿ ಅನಧಿಕೃತ ಸ್ವಯಂ ಆಸ್ತಿಗಳಿಗೆ ಬಿ-ಖಾತಾ ಪಡೆಯಲು ಅವಕಾಶ ನೀಡಿದರೆ, ನಗರ ವ್ಯಾಪ್ತಿಯಲ್ಲಿ ನೋಂದಣಿಗೆ ತೆರಿಗೆ ಪಾವತಿಯೊಂದಿಗೆ ಪ್ರತ್ಯೇಕವಾಗಿ ಹಣ ನೀಡಿದರೆ ಮಾತ್ರ ಸುಲಭವಾಗಿ ನೋಂದಣಿ ಕಾರ್ಯ ಆಗಲಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
ನೋಂದಣಿಗೆ ಬರುವ ಜನ ಹೆಚ್ಚುವರಿಯಾಗಿ ಹಣ ನೀಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಣ ನೀಡಿದರೆ ಮಾತ್ರ ಕಾರ್ಯ ಸುಲಭ ಎಂಬ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಜನ.
ಗಮನಿಸಬೇಕಾದ ವಿಷಯಗಳು
ನಿರ್ದಿಷ್ಟ ಆಸ್ತಿಯ ಅಥವಾ ಕಟ್ಟಡದ ಕನ್ವರ್ಷನ್ ಪ್ರಕ್ರಿಯೆಯಲ್ಲಿ, ನಿರ್ಮಾಣದಲ್ಲಿ ಅಥವಾ ಇತರ ಯಾವುದೇ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದ್ದರೆ ಬಿ ಖಾತಾ ನೀಡಲಾಗುತ್ತದೆ. ಸರಳವಾಗಿ ಹೇಳುವುದಾದರೆ, ನಾಗರಿಕ ಶುಲ್ಕಗಳು ಮತ್ತು ತೆರಿಗೆಗಳ ಪಾವತಿಯ ಹೊರತಾಗಿಯೂ ಸಂಪೂರ್ಣವಾಗಿ ಕಾನೂನು ಬದ್ಧವಲ್ಲದ ಆಸ್ತಿಯೇ ಬಿ ಖಾತಾ.
2014 ರ ಡಿಸೆಂಬರ್ನಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಬಿ ಖಾತಾ ಆಸ್ತಿಗಳಿಗೆ ಸಂಪೂರ್ಣವಾದ ಕಾನೂನು ಮಾನ್ಯತೆ ಇಲ್ಲ. ಹಾಗೆಂದು ಅವುಗಳಿಗೂ ತೆರಿಗೆಗಳು ಅಥವಾ ನಾಗರಿಕ ಶುಲ್ಕಗಳ ಪಾವತಿ ಮಾಡಬೇಕಾಗುತ್ತದೆ. ಹೀಗೆ ಪಾವತಿಸುವುದರಿಂದ ಬಿ ಖಾತಾ ಆಸ್ತಿಯನ್ನು ಕಾನೂನುಬದ್ಧಗೊಳಿಸಿದಂತೆ ಆಗುವುದಿಲ್ಲ ಎಂಬುದನ್ನು ಗಮನಿಸಬೇಕಿದೆ.
ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಕಳೆದ ಎರಡು ವರ್ಷಗಳಲ್ಲಿ ವಿದ್ಯುತ್, ವಾಹನ ನೋಂದಣಿ ಶುಲ್ಕದಲ್ಲಿ ಹೆಚ್ಚಳ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ, ಹಾಗೆಯೇ ಮೆಟ್ರೋ ದರಗಳಲ್ಲಿ ಇತ್ತೀಚಿನ ಹೆಚ್ಚಳ, ಬಸ್ ದರಗಳು, ಕಸ ಸಂಗ್ರಹ ಶುಲ್ಕಗಳು ಮತ್ತು ವಿದ್ಯುತ್ ಸುಂಕಗಳು ಸೇರಿದಂತೆ ಹಲವಾರು ದರ ಮತ್ತು ತೆರಿಗೆ ಹೆಚ್ಚಳ ಮಾಡಿದ್ದು ಇನ್ನೂ ಯಾವ ತೆರಿಗೆ ಹೆಚ್ಚಾಗುತ್ತದೆ ಅನ್ನೋ ಭಯದಲ್ಲಿರುವ ಸಮಯದಲ್ಲಿ ಕರ್ನಾಟಕದಾದ್ಯಂತ ಬಿ ಖಾತೆ ಹೆಸರಿನಲ್ಲಿ ಸರಕಾರಕ್ಕೆ ದುಪ್ಪಟ್ಟು ತೆರಿಗೆ ಕಟ್ಟಿಸಿಕೊಂಡು ಹಾಗೆಯೇ ತಮ್ಮ ಜೇಬು ತುಂಬಿಕೊಳ್ಳುತ್ತಿರುವ ಅಧಿಕಾರಿಗಳು ಅವರಿಗೆ ಸಾಥ್ ನೀಡುತ್ತೀರುವ ಚುನಾಯಿತ ಸದಸ್ಯರು, ಮಧ್ಯವರ್ತಿಗಳು ಜನರ ಸಮಸ್ಯೆಗಳಿಗೆ ಇನ್ನಷ್ಟು ಹೊರೆ ಆಗಿದ್ದಂತೂ ನಿಜ.
ಸಾರ್ವಜನಿಕರ ವಲಯದಲ್ಲಿ ಒಂದು ಖಾತಾ ಮಾಡಿಸಲು ಈಗಾಗಲೇ ಸರಕಾರಕ್ಕೆ ತೆರಿಗೆ ರೂಪದಲ್ಲಿ ಹಣ ಪಾವತಿ ಮಾಡಿದ ಮೇಲೂ ಅಧಿಕಾರಿಗಳಿಗೆ ಸುಮಾರು 30,000 ರೂ. ಹಣ ನೀಡಲಾಗುತ್ತಿದೆ ಎಂದು ಅಲ್ಲಲ್ಲಿ ಮಾತು ಜೋರಾಗಿ ಕೇಳಿ ಬರುತ್ತಿದೆ.
ಇದಕ್ಕೆ ಕಡಿವಾಣ ಹಾಕುವುದು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದು ಒಂದೇ ಅನ್ನುವ ಹಾಗಾಗಿದೆ, ಡಿ ಗ್ರೂಪ್ ನೌಕರರಿಂದ ಹಿಡಿದು, ಸ್ಥಳೀಯ ಸದಸ್ಯರು, ಅಧಿಕಾರಿಗಳು ಎಲ್ಲರೂ ಲಂಚಕ್ಕೆ ಮಾರು ಹೋಗಿರುವಾಗ ಸಾಮಾನ್ಯರು ಈ ಕುರಿತಾಗಿ ಎಲ್ಲೂ ಹೇಳದ ಪರಿಸ್ಥಿತಿ ಎದುರಾಗಿದೆ.
- ಜಗದೀಶ್ ಕುಮಾರ್ ಭೂಮಾ



















