ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ಯ ಲೇಖನ
ಯೋಗ ಭಾರತದ ಸನಾತನ ಧರ್ಮದ ಕೊಡುಗೆಯಾಗಿದ್ದು ಮನುಷ್ಯ ಪರಿಪೂರ್ಣ ಆರೋಗ್ಯವಂತ ವ್ಯಕ್ತಿಯಾಗಲು ಯೋಗ ತುಂಬಾ ಸಹಕಾರಿಯಾಗಿದೆ.
ಬಲವಾದ ಜೀವನ ಶೈಲಿ (life style) ಒತ್ತಡದ (stress life) ಬದುಕಿನ ಇಂದಿನ ಯುಗದಲ್ಲಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ, ಆರೋಗ್ಯವೇ (health) ಭಾಗ್ಯ ಕೇವಲ ಮಾತಿನಲ್ಲಷ್ಟೆ ಅಲ್ಲ ಕಾರ್ಯರೂಪಕ್ಕೆ ತರಬೇಕಾದ ಸಂಕಲ್ಪ ಪ್ರತಿಯೊಬ್ಬರೂ ಮಾಡಬೇಕಾಗಿದೆ.
ಮಾನವ ಕುಲವೊಂದೇ ಧರ್ಮ ಜಾತಿಯೆಂದು ಭೇದ ಮಾಡದೆ ಎಲ್ಲರನ್ನೂ ಸಮನಾಗಿ ತಿಳಿದು ಯಾವುದೇ ಪ್ರತಿಫಲ ಬಯಸದೆ ” ಯೋಗವೇ ಜೀವ ಜೀವನವೇ ಯೋಗ ” ವಾಗಿಸಿದ ಸುಮಾರು ಜನರಿಗೆ ಯೋಗವನ್ನು ಹೇಳಿಕೊಟ್ಟು ಅವರ ಆರೋಗ್ಯ ಬದುಕಿಗೆ ಅಡಿಪಾಯ ಹಾಕೋ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವರಲ್ಲಿ ಒಬ್ಬರಾದ ಯೋಗ ಶಿಕ್ಷಕ ಯೋಗೇಂದ್ರ ಯದಲಾಪುರೇಯವರು.

ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಯದಲಾಪುರ ಗ್ರಾಮದ ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಯೋಗೇಂದ್ರ ಯದಲಾಪುರೆಯವರು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ, ಪ್ರೌಢ ಶಿಕ್ಷಣವನ್ನು ಸಮೀಪದ ಕಮಠಾಣ ಶಾಲೆಯಲ್ಲಿ,ಹಾಗು ಮುಂದಿನ ಅಭ್ಯಾಸವನ್ನು ಬೀದರನಲ್ಲಿ ಮುಗಿಸಿ ನಂತರ ಶಾಲಾ ಶಿಕ್ಷಕರಾಗಿ ನೇಮಕಗೊಂಡು ಸೇವೆ ಸಲ್ಲಿಸುವ ಜೊತೆಗೆ ಬಾಬಾ ರಾಮದೇವ ಆಶೀರ್ವಾದ ಹಾಗು ಖ್ಯಾತ ವರಿಷ್ಠ ದಕ್ಷಿಣ ಭಾರತ ಪತಂಜಲಿಯ ಯೋಗ ಸಮಿತಿ ಪ್ರವಾರಿಗಳಾದ ಪೂಜ್ಯ ಭವರಲಾಲ ಆರ್ಯ ಅವರ ಮಾರ್ಗದರ್ಶನದಲ್ಲಿ ಯೋಗ ಶಿಬಿರಗಳನ್ನು ನಿತ್ಯ ನಿರಂತರ ಬೀದರ ಜಿಲ್ಲೆಯಾದ್ಯಂತ ಕಳೆದ ಎರಡು ದಶಕಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅದೇ ರೀತಿ ನಗರದ ವಿವಿಧ ಶಾಲೆ ಕಾಲೇಜುಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಉಚಿತವಾಗಿ ಯೋಗ ಶಿಬಿರಗಳನ್ನು ನಡೆಸುವ ಮೂಲಕ ಜನರಲ್ಲಿ ಉತ್ತಮ ಆರೋಗ್ಯ ಜೀವನಶೈಲಿ ಸ್ವಾಭಿಮಾನ, ಸಮಾಜದ ಬಗ್ಗೆ ಕಳಕಳಿ ಹಾಗೂ ಯುವ ಸಮುದಾಯದಲ್ಲಿ ದೇಶಭಕ್ತಿಯ ಬೀಜವನ್ನು ಬಿತ್ತುವ, ಆಯುರ್ವೇದಿಕ ಗಿಡಮೂಲಿಕೆಗಳ ಉಪಯೋಗ ಜೀವನ ಕ್ರಿಯೆ ಬಗ್ಗೆ ವಿಶೇಷ ಉಪನ್ಯಾಸ ನೀಡುವ ಮೂಲಕ ಜನರಲ್ಲಿ ಆರೋಗ್ಯ ಅರಿವು ಜಾಗೃತಿಯನ್ನು ಮೂಡಿಸುವ ಪಣವನ್ನು ತೊಟ್ಟು ಅದನ್ನು ಶ್ರೀಯುತರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

ದಿನಾಲು ಮುಂಜಾನೆ ಸುಪ್ರಭಾತದ ಸಮಯದಲ್ಲಿ, ಆಹ್ಲಾದಕರ ವಾತಾವರಣ ತಣ್ಣನೆಯ ಪರಿಶುದ್ಧ ಗಾಳಿ ಪ್ರಶಾಂತ ಪರಿಸರದ ಮಧ್ಯೆ ಬೀದರ್ ನಗರದ ಬಿ. ವಿ. ಬಿ ಮಹಾವಿದ್ಯಾಲಯದ ಆವರಣದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವ್ಯಾಪಾರಿಗಳಿಗೆ ಸರ್ಕಾರಿ ನೌಕರರಿಗೆ ಯುವತಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಾಣಾಯಾಮ, ಧ್ಯಾನ ಯೋಗ ಕಲಿಸುವುದರ ಮುಖಾಂತರ ಜನಮಾನಸ ದಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.
ಡಾ. ವಿಜಯ ಸಂಕೇಶ್ವರ ಪ್ರೇರಣೆ
ಸಮಾಜಕ್ಕೆ ಏನಾದರೂ ಕೊಡಗೆ ನೀಡಬೇಕು ಎಂಬುದು ನನ್ನ ಆಶಯವಿತ್ತು ಅದನ್ನು ಯೋಗದ ರೂಪದಲ್ಲಿ ನನ್ನ ಅಳಿಲು ಸೇವೆ ಸಲ್ಲಿಸುತ್ತಿರುವೆ ಅನ್ನುವ ಸಾರ್ಥಕತೆ ಭಾವನೆಯನ್ನು ವ್ಯಕ್ತಪಡಿಸಿರುವ ಶ್ರೀಯುತರಿಗೆ ವಿ ಆರ್ ಎಲ್ ಸಮೂಹ ಸಂಸ್ಥೆಯ ಅಧ್ಯಕ್ಷರು ಡಾ. ವಿಜಯ ಸಂಕೇಶ್ವರ ಅವರ ಪ್ರೋತ್ಸಾಹ ನುಡಿಗಳಾದ “ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ನಿತ್ಯ ಕೆಲಸ ಮಾಡಿದ ವ್ಯಕ್ತಿ ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಅನ್ನುವ ಅವರ ಮಾತು ಸದಾ ಸ್ಫೂರ್ತಿದಾಯಕವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಶ್ರೀಯುತ ಯೋಗೇಂದ್ರರವರು ಯು. ಎ. ಈ. ಮತ್ತು ಅಭುದಾಬಿಯಲ್ಲಿ ಕೂಡಾ ಪ್ರವಾಸ ಮಾಡಿ ಅಲ್ಲಿ ಕೂಡಾ ಯೋಗ ಶಿಬಿರವನ್ನು ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಭಾರತದ ಸಂಸ್ಕೃತಿ ಆಚಾರ ವಿಚಾರ ಮತ್ತು ಯೋಗದ ಮಹತ್ವದ ಕುರಿತು ತಮ್ಮ ಅಸ್ಮಿತೆಯನ್ನು ಮೆರೆದಿರುವ ಧನ್ಯತಾ ಭಾವವನ್ನು ವ್ಯಕ್ತಪಡಿಸುತ್ತಾರೆ.
ಪರಿಸರ ಪ್ರೇಮಿ
ಯೋಗೇಂದ್ರ ಯದಲಾಪುರೆಯವರು ಪರಿಸರ ಪ್ರೇಮಿ ಕೂಡ ಆಗಿದ್ದು ಮಕ್ಕಳಿಗೆ ಶಿಕ್ಷಣ ಮತ್ತು ಯೋಗದ ಜೊತೆ ಜೊತೆಗೆ ಪರಿಸರ ಸಂರಕ್ಷಣೆ ಜಾಗೃತಿಯನ್ನು ಮೂಡಿಸುವ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಾಲೆಗಳಲ್ಲಿ ವಿವಿಧ ರೀತಿ ತರಕಾರಿ ಗಿಡಮರಗಳನ್ನು ಬೆಳೆದು ಪೋಷಿಸಿ ತಾವೇ ಬೆಳಸಿದ ತಾಜಾ ತರಕಾರಿಯನ್ನು ಶಾಲಾ ಮಕ್ಕಳ ಬಿಸಿಯೂಟಕ್ಕೆ ಬಳಸುತ್ತಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳೊಂದಿಗೆ ನಿಕಟವಾದ ಸಂಭಂದ ಹೊಂದಿರುವ ಇವರು ಇದುವರೆಗೆ ವಿವಿಧಡೆ ಸಾವಿರಾರು ಗಿಡಮರಗಳನ್ನು ಹಚ್ಚಿ ಪರಿಸರ ಪ್ರಜ್ಞೆ ಮೆರೆದಿದ್ದಾರೆ.
ಸಾಹಿತಿಗಳಾಗಿ
ನಾಡು ನುಡಿ ಜಲ ಶಾಂತಿ ಸೌಹಾರ್ದತೆ ವಿಷಯವಾಗಿ ಅಪಾರ ಕಾಳಜಿ ಹೊಂದಿರುವ ಶ್ರೀಯುತರು ತಮ್ಮ ವೃತ್ತಿ ಶಿಕ್ಷಣ ಜೊತೆಗೆ ಮಕ್ಕಳಲ್ಲಿ ಸಾಹಿತ್ಯ, ಸಂಸ್ಕಾರ ದೇಶಾಭಿಮಾನದ ಅರಿವು ಮೂಡಿಸುತ್ತಿರುವ ಜೊತೆ ಜೊತೆಗೆ ಕಥೆ, ಕವನ, ಲೇಖನ, ಚುಟುಕುಗಳು ಬರೆಯುವ ಮೂಲಕ ಒಬ್ಬ ಸೃಜನಶೀಲ ಬರಹಗಾರರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ, ಕವಿಗಳಾಗಿ ಸಾಹಿತಿಗಳಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕೂಡಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸೇವೆಗಳು
ಶ್ರೀ ಯೋಗೇಂದ್ರ ಯದಲಾಪುರೆಯವರು ಸದ್ಯ ಬೀದರ ಜಿಲ್ಲಾ ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಜೊತೆಗೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರು, ಜ್ಞಾನ ವಿಜ್ಞಾನ ಸಮಿತಿಯ ಕೋಶಾಧ್ಯಕ್ಷರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು, ಜಾನಪದ ಪರಿಷತ್ ನಗರ ಘಟಕದ ಅಧ್ಯಕ್ಷರು, ಇಂಟರ್ನ್ಯಾಷನಲ್ ನ್ಯಾಚುರೋಪತಿ ಆರ್ಗನೈಜೇಷನ್ ಜಿಲ್ಲಾ ಉಪಾಧ್ಯಕ್ಷರು ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಕಾರ್ಯ ಚಟುವಟಿಕೆಯನ್ನು ನಿಭಾಯಿಸುತ್ತಿದ್ದಾರೆ.
ಪ್ರಶಸ್ತಿ ಮತ್ತು ಪುರಸ್ಕಾರಗಳು
ಶ್ರೀ ಯೋಗೇಂದ್ರರವರ ಅವಿರತ ಸಮಾಜ ಮುಖಿ ಸೇವೆಯನ್ನು ಗುರುತಿಸಿ ಕನ್ನಡ ಪರ ಸಂಘಟನೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಗೌರವ ಪುರಸ್ಕಾರ ನೀಡಿ ಗೌರವಿಸಿವೆ. ಆದರ್ಶ ಶಿಕ್ಷಕ ಪ್ರಶಸ್ತಿ, ರೋಟರಿ ಕ್ಲಬ್ ನ್ಯಾಷನಲ್ ಬಿಲ್ಡರ್ ಪ್ರಶಸ್ತಿ, ಯೋಗರತ್ನ ಪ್ರಶಸ್ತಿ, ಉತ್ತಮ ಸಮಾಜ ಸೇವಕ ಪ್ರಶಸ್ತಿ, ಪ್ರಶಸ್ತಿ, ಯೋಗಿರಾಜ ಪ್ರಶಸ್ತಿ ಹಾಗೂ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಇವರಿಗೆ ವಿವಿಧ ಮಠಾಧೀಶರು, ಗಣ್ಯರು ಸನ್ಮಾನಿಸಿ ಗೌರವಿಸಿ ಬೆನ್ನು ತಟ್ಟಿದ್ದಾರೆ.
ಇಂತಹ ನಿಷ್ಕಲ್ಮಶ, ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಯೋಗೇಂದ್ರ ಯದಲಾಪುರೆಯವರಿಗೆ ಸಮಾಜ, ಸರ್ಕಾರ ಬೆನ್ನು ತಟ್ಟಿ ಇನ್ನೂ ಉನ್ನತ ಮಟ್ಟದ ಪ್ರಶಸ್ತಿ ಪುರಸ್ಕಾರ ನೀಡಲೆಂದು ಹಾರೈಸುತ್ತೇನೆ.

- ಓಂಕಾರ ಪಾಟೀಲ, ಕಾರ್ಯದರ್ಶಿಗಳು
ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ
ಮೊ:೬೩೬೦೪೧೩೯೩೩.



















