ಬಾಗಲಕೋಟೆ/ ಜಮಖಂಡಿ :ದಿ. 29/06/2025 ನಮ್ಮ ನಾಡಿನ ಶ್ರೇಷ್ಠ ತತ್ವಜ್ಞಾನಿಗಳಾದ ಶ್ರೀಮನ್ ನಿಜಗುಣ ಶಿವಯೋಗಿಗಳ ಸಪ೯ಭೂಷಣ ಶಿವಯೋಗಿಗಳ, ಮಹಾಲಿಂಗರಂಗರ, ದಾಸ ಶ್ರೇಷ್ಠರಾದ ಕನಕ-ಪುರಂದರರ ಪದ್ಯಗಳನ್ನು ಕೇಳುಗರಿಗೆ ಮುಟ್ಟುವಂತೆ ಹಾಡಿದ ಗಮಕಿ ಕಲಾವಿದ ಗಾನ ಸುಧಾಕರ ಮಹಾದೇವಪ್ಪ ಹುಲ್ಯಾಳ ಅವರು ಶಿವ ಭಜನಾ ಕ್ಷೇತ್ರದ ಒಬ್ಬ ಪಂಡಿತ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು ಬಣ್ಣಿಸಿದರು.
ಅವರು ಜಮಖಂಡಿ ತಾಲೂಕಿನ ಗೋಠೆ-ಗದ್ಯಾಳ ಗ್ರಾಮದ ಹತ್ತಿರ ಶರಣಶ್ರೀ ಶಿವಲಿಂಗ ಚಪ್ಪರ ಅವರ ತೋಟದಲ್ಲಿ ನೂತನವಾಗಿ ನಿರ್ಮಿಸಿದ ಮಹಾದೇವಪ್ಪ ಹುಲ್ಯಾಳ ಕಲಾಭವನದಲ್ಲಿ ನಡೆದ ಪ್ರಥಮ ಪುಣ್ಯ ಸ್ಮರಣೋತ್ಸವ- ಹಾಗೂ ಸಂಗೀತೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬಸವ ಶಾಸ್ತ್ರಿಗಳು ಮಹಾದೇವಪ್ಪನವರು ಶಿವ ಭಜನಾ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ ಮತ್ತು ಎಂದೂ ಮರೆಯಲಾಗದ್ದು ಎಂದು ಪ್ರಶಂಶಿಸಿದ ಅವರು ಶಿವ ಭಜನಾ ಕ್ಷೇತ್ರದ ಧುರೀಣನರಾದ ಮಧುರಖಂಡಿಯ ಸ್ವಾಮಿ ಶಿದ್ಧಗಿರಿಶ್ರೀಗಳು,ಗುಜನಟ್ಟಿಯ ರಾಮಚಂದ್ರಪ್ಪ ಮುಕ್ಕನವರ, ಹುಲ್ಯಾಳದ ತಬಲಾಪಟು ಅಯ್ಯಪ್ಪ ಮಾಸ್ಟರ್, ನಿಂಗನೂರಿನ ಸತ್ಯಪ್ಪ ಮಾಸ್ತರ,ತೇರದಾಳದ ರಾಯಪ್ಪ ಕುಚನೂರು,ಹಣಮಂತಪ್ಪ ಅಲಬಾಳ, ಹಾರ್ಮೋನಿಯಂ ವಾದಕ ಮಲ್ಲಪ್ಪ ಬುದ್ನಿ ಅವರು ಸದಾ ಸ್ಮರಣೀಯರು ಎಂದರು. ವೇದಿಕೆ ಮೇಲಿದ್ದ ಪೂಜ್ಯರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಹೆಸರಾಂತ ಸಂಗೀತ ಗಾಯಕ ರವೀಂದ್ರ ಸೋರಗಾಂವಿ ಅವರಿಗೆ ಗಾನ ಸುಧಾಕರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಡರಕೊಪ್ಪದ ಪೂಜ್ಯರಾದ ದಯಾನಂದ ಸರಸ್ವತಿ ಮಹಾಸ್ವಾಮೀಜಿಯವರು ಸಭೆಯ ಸಾನಿಧ್ಯವನ್ನು ವಹಿಸಿದ್ದರು. ಭೂಕೈಲಾಸ ಆಶ್ರಮದ ಮಹದೇವ ಮಹಾರಾಜರು. ಹುಬ್ಬಳ್ಳಿ ಸಿದ್ಧಾರೂಢ ಮಠದ ಧರ್ಮದರ್ಶಿಗಳಾದ ಶಾಮಾನಂದ ಪೂಜಾರಿ. ಬಿದರೊಳ್ಳಿಯ ಅಜಿತ್ ಮಹಾಸ್ವಾಮಿಗಳು. ಮಾಜಿ ಶಾಸಕ ಮಹೇಶ್, ಕುಮಟಳ್ಳಿ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರ್ಜುನ್ ದಳವಾಯಿ. ಸೇರಿದಂತೆ ಅನೇಕ ಧುರೀಣರು ಉಪಸ್ಥಿತರಿದ್ದರು. ಗೋಠೆ ಗ್ರಾಮದ ಮಲ್ಲಿಕಾರ್ಜುನ ಶಾಸ್ತ್ರಿಗಳು ಕಾರ್ಯಕ್ರಮ ನಿರ್ವಹಿಸಿದರು. ಕಲಾವಿದರಾದ ಶಿವಲಿಂಗಪ್ಪ ಮಂಕಣಿ. ಸಿದ್ದು ಉಪ್ಪಲದಿನ್ನಿ. ಚಂದ್ರಶೇಖರ ತೋಳಮಟ್ಟಿ. ಸೇವಾ ಕಾರ್ಯದಲ್ಲಿ ತೊಡಗಿದ್ದರು. ಭೂದಾನಿ ಗುರು ಸೇವಾಧುರೀಣ ಶಿವಲಿಂಗಪ್ಪ ಚಪ್ಪರ ಅವರನ್ನು ಅನೇಕ ಅಭಿಮಾನಿಗಳು ಗೌರವಿಸಿದರು. ವಿವಿಧ ಕಲಾ ತಂಡಗಳಿಂದ ಭಜನಾ ಸೇವೆ ಮತ್ತು ಸಂಗೀತ ಸೇವೆ ಜರುಗಿತು.
- ಕರುನಾಡ ಕಂದ



















