ಬಳ್ಳಾರಿ / ಕಂಪ್ಲಿ : ಶಾಲೆಗಳಲ್ಲಿ ಸಾಮಾನ್ಯವಾಗಿ ಆಟ-ಪಾಠದ ಜೊತೆಗೆ ಕೆಲವು ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಆದರೆ, ಮಕ್ಕಳನ್ನು ಗದ್ದೆಗೆ ಇಳಿಸಿ ಭತ್ತ ನಾಟಿ ಮಾಡಿಸುವ ಮೂಲಕ ಕೃಷಿಯ ಮಹತ್ವ ತಿಳಿಸುವ ಕೆಲಸ ಮಾಡಿದೆ.
ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಾ ತಲ್ಲೀನರಾಗುತ್ತಿದ್ದ, ಕಂಪ್ಲಿ ತಾಲ್ಲೂಕಿನ ನಂ.1 ಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಭತ್ತದ ಸಸಿ ನಾಟಿ ಮಾಡಿಸುವ ಮೂಲಕ ಮಂಗಳವಾರ ಕೃಷಿ ಶಿಕ್ಷಣ ನೀಡಲಾಯಿತ. ಶಾಲೆಯ ಮಕ್ಕಳನ್ನು ಶಾಲೆಯ ಪಕ್ಕದಲ್ಲೇ ಇರುವ ಗದ್ದೆ ಕರೆದೊಯ್ದು ಗದ್ದೆ ಎಂದರೆ ಏನು?, ಬೇಸಾಯ ಎಂದರೆ ಹೇಗೆ?, ನಾಟಿ ಹೇಗೆ ಮಾಡಬೇಕು ಎಂದೆಲ್ಲಾ ಮಾಹಿತಿ ನೀಡುತ್ತಾ ಕೃಷಿ ಚಟುವಟಿಕೆಯಲ್ಲಿ ತೊಡಗಿಸಲಾಯಿತು. ಸ್ವತಃ ಮಕ್ಕಳೇ ಭತ್ತ ನಾಟಿ ಮಾಡಿ ಸಂತಸ ವ್ಯಕ್ತಪಡಿಸಿದರು.
‘ಗದ್ದೆಯಲ್ಲಿ ಇಳಿದು ಸಸಿ ನಾಟಿ ಮಾಡಿರುವುದು ನಮಗೆ ವಿಶೇಷ ಅನುಭವ ನೀಡಿದೆ. ಕೃಷಿಯಲ್ಲಿ ಕೆಲಸ ಮಾಡುವ ರೈತರ ಪರಿಶ್ರಮವನ್ನು ಶಿಕ್ಷಕರು ನಮಗೆ ತಿಳಿಸಿ ಕೊಟ್ಟಿದ್ದಾರೆ. ಗದ್ದೆಯಲ್ಲಿ ನಾವೆಲ್ಲರೂ ಖುಷಿಯಿಂದ ಭತ್ತದ ಸಸಿಗಳನ್ನು ನೆಟ್ಟಿದ್ದೇವೆ. ಇದರಿಂದ ರೈತರು ಎಷ್ಟು ಕಷ್ಟಪಡುತ್ತಾರೆ ಎಂಬುದು ಅರಿವಿಗೆ ಬಂದಿದೆ’ ಎಂದು ವಿದ್ಯಾರ್ಥಿಗಳಾದ ಕೆ. ಶಾರದಾ, ಕೆ. ವೀರೇಶ, ಹುಲಿಹೈದರ ಬಾರಿಮ್‍ಸಾಬ್, ಕೀರ್ತನಾ ಅನುಭವ ಹಂಚಿಕೊಂಡರು.
ಮುಖ್ಯಶಿಕ್ಷಕ ಚಂದ್ರಯ್ಯ ಸೊಪ್ಪಿಮಠ, ಸಹ ಶಿಕ್ಷಕರು ಸವಿತಾ ಎಂ ಆರ್ ಶ್ರೀಮತಿ ಸುಧಾ , ಬಸವರಾಜ್ ಸಂತೋಷ್ ಕುಮಾರ್ , ರೇಷ್ಮಾ , ಗಾಯತ್ರಿ ಹಾಗೂ ಅನಿತಾ ಇದ್ದರು.
ವರದಿ: ಜಿಲಾನಸಾಬ್ ಬಡಿಗೇರ್



















