ಬಳ್ಳಾರಿ/ ಸಂಡೂರು : ರಸ್ತೆ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳೊಂದಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಈ.ಅನ್ನಪೂರ್ಣ ತುಕಾರಾಂ ಹೇಳಿದರು.
ತಾಲೂಕು ಸಮೀಪದ ದರೋಜಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ, ಇಲ್ಲಿನ ರಸ್ತೆ, ಶಾಲಾ ಕಟ್ಟಡ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಳೇ ದರೋಜಿ ಗ್ರಾಮದ ಸ.ಹಿ.ಪ್ರಾ ಶಾಲೆಯಲ್ಲಿ ಕೆಕೆಆರ್ಡಿಬಿಯ 49.50 ಲಕ್ಷ ವೆಚ್ಚದ 3 ಶಾಲಾ ಕೊಠಡಿ ಕಾಮಗಾರಿ ಮತ್ತು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕೆಪಿಟಿಸಿಎಲ್ ಸಿಎಸ್ಆರ್ ಅನುದಾನದ ಸುಮಾರು 40 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ಹಾಗೂ ಕೆಕೆಆರ್ಡಿಬಿಯ ಸುಮಾರು 75 ಲಕ್ಷ ವೆಚ್ಚದ ಸಿಸಿ ರಸ್ತೆ ಮತು ಚರಂಡಿ ಮತ್ತು ವಡ್ಡು ಗ್ರಾಮದಲ್ಲಿ ಸುಮಾರು 50 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಹಾಗೂ ಹೊಸ ದರೋಜಿಯಲ್ಲಿ 5054-ಎಸ್ಸಿಪಿಯ ಸುಮಾರು 75 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಪೂಜೆ ಸಲ್ಲಿಸಿದ್ದು, ಗುತ್ತಿಗೆದಾರರು ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿಗೆ ಮಾಡಬೇಕು ಎಂದರು.
ಇಲ್ಲಿನ ಹೊಸ ದರೋಜಿಯಲ್ಲಿ ಸಂತೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ ಹಾಗೂ ಸ. ಹಿ. ಪ್ರಾ. ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿ. ಪಂ ಮಾಜಿ ಸದಸ್ಯ ವಿ.ಜನಾರ್ಧನ, ಗ್ರಾ. ಪಂ ಮಾಜಿ ಉಪಾಧ್ಯಕ್ಷ ಗುರುಮೂರ್ತಿ, ಗ್ರಾ. ಪಂ ಹಾಲಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಗೌರಮ್ಮ, ಪಿಡಿಒ ಪಕ್ಕೀರಪ್ಪ, ಜೆಇ ದೇವರಾಜ, ಮುಖಂಡರಾದ ವಿಶ್ವೇಶ್ವರಯ್ಯ, ಪಿ.ಎಸ್.ಲಿಂಗಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















