ಬಳ್ಳಾರಿ/ ಕಂಪ್ಲಿ: ತಾಲ್ಲೂಕಿನ ಸಣಾಪುರ ಗ್ರಾಮದಲ್ಲಿ ಹಲವಾರು ರೈತರಿಂದ ಭತ್ತವನ್ನು ಖರೀದಿಸಿ ಹಣವನ್ನು ನೀಡದೇ ಊರು ಬಿಟ್ಟು ಹೋಗಿರುವುದಲ್ಲದೆ, ಭತ್ತವನ್ನು ಮಾರಿದ ರೈತರ ಮೇಲೆಯೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ರೈತರಿಗೆ ನ್ಯಾಯಾಲಯದಿಂದ ನೋಟೀಸ್ ನೀಡಿರುವ ಘಟನೆ ಜರುಗಿದ್ದು, ನ್ಯಾಯಾಲಯದ ನೋಟೀಸ್ಗೆ ಹೆದರಿದ ರೈತರು ಇಂದು ಶಾಸಕ ಜೆ.ಎನ್.ಗಣೇಶ್ ಅವರಿಗೆ ಮನವಿ ಸಲ್ಲಿಸಿ ಭತ್ತದ ವ್ಯಾಪಾರಿಯಿಂದ ತಮಗೆ ನ್ಯಾಯಕೊಡಿಸುವಂತೆ ಕೋರಿದರು.
ಸಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಾಯಣಸ್ವಾಮಿ ಕ್ಯಾಂಪಿನ ನಿವಾಸಿಗಳಾದ ಕೊಂಡಯ್ಯ ಹಾಗೂ ಮಕ್ಕಳಾದ ರಾಘವಯ್ಯ, ರಾಮುಬಾಬು ಅವರುಗಳು ಗ್ರಾಮದಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರಿಂದ ಸುಮಾರು 2.99.ಕೋಟಿ ರೂಗಳ ಮೌಲ್ಯದ ಭತ್ತವನ್ನು ಖರೀದಿಸಿದ್ದು, ಭತ್ತದ ಹಣವನ್ನು ನಂತರ ಕೊಡುವುದಾಗಿ ನಂಬಿಸಿದ್ದಾನೆ. ಆದರೆ ಭತ್ತ ಖರೀದಿಸಿ ತಿಂಗಳುಗಳೇ ಕಳೆದರೂ ಸಹಿತ ವ್ಯಾಪಾರಿಗಳು ರೈತರಿಗೆ ಹಣವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮದ ರೈತರು ಹಾಗೂ ಮುಖಂಡರು ಭತ್ತದ ವ್ಯಾಪಾರಿಗಳನ್ನು ಕರೆಸಿ ಸಮಾಲೋಚನೆ ಮಾಡಿದ ಮೇಲೆ ಒಂದು ತಿಂಗಳ ನಂತರ ರೈತರಿಗೆ ಹಣವನ್ನು ಕೊಡುವುದಾಗಿ ಭರವಸೆಯನ್ನು ನೀಡಿದ್ದರು. ಈ ವ್ಯಾಪಾರಿಗಳು ಗ್ರಾಮದ ರೈತರಿಗೆ 34 ರೈತರಿಗೆ 49 ಲಕ್ಷರೂಗಳಿಂದ 1 ಲಕ್ಷದವರೆಗೆ ಅಂದರೆ ಸುಮಾರು 2.99.ಕೋಟಿ.ರೂಗಳನ್ನು ಕೊಡಬೇಕಾಗಿದೆ.
ಆದರೆ ಮಾತುಕೊಟ್ಟಂತೆ ವ್ಯಾಪಾರಿಗಳು ರೈತರಿಗೆ ಹಣವನ್ನು ಕೊಡದೇ ವಂಚಿಸಿದ್ದಾರೆ. ಜೊತೆಗೆ ರೈತರು ತಮಗೆ ಕಿರುಕುಳ ನೀಡುತ್ತಿದ್ದಾರೆಂದು ತಾವೇ ಹೊಸಪೇಟೆಯ 3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ಕಟ್ಟೆ ಏರಿದ್ದು, ಭತ್ತವನ್ನು ಕೊಟ್ಟಂತಹ ರೈತರಿಗೆ ನೋಟೀಸ್ಗಳನ್ನು ನೀಡಿದ್ದಾರೆ
ಇದರಿಂದ ಹೆದರಿದ ರೈತರು ಮುಂದೇನು ಎಂದು ತಲೆಮೇಲೆ ಕೈಹೊತ್ತು ಕುಳಿತಿದ್ದಾರಲ್ಲದೆ, ಕೋಟ್ಯಾಂತರ ರೂ.ಗಳ ಮೌಲ್ಯದ ಭತ್ತವನ್ನು ಮಾರಾಟ ಮಾಡಿ ತಪ್ಪಿತಸ್ಥರಂತೆ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಸಣಾಪುರ ಗ್ರಾಮದ ರೈತರು ಮುಂದೇನು ಎಂದು ತೋಚದೆ ಇಂದು ಶಾಸಕ ಜೆ.ಎನ್.ಗಣೇಶ ಅವರನ್ನು ಭೇಟಿಯಾಗಿ ತಮಗಾಗಿರುವ ಅನ್ಯಾಯದ ಬಗ್ಗೆ ವಿವರಿಸಿದರಲ್ಲದೆ, ಇದರಿಂದ ತಮಗೆ ನ್ಯಾಯ ಹಾಗೂ ಹಣವನ್ನು ಕೊಡಿಸುವಂತೆ ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿದ ಶಾಸಕ ಜೆ.ಎನ್.ಗಣೇಶ ಅವರು ಕಂಪ್ಲಿ ತಾಲ್ಲೂಕಿನಲ್ಲಿ ಪ್ರತಿ ವರ್ಷ ರೈತರನ್ನು ಒಬ್ಬರಾದರೂ ಯಾಮಾರಿಸುತ್ತಿರುವುದನ್ನು ನೋಡಿದರೆ ರೈತರ ಬಗ್ಗೆ ಅನುಕಂಪ ಮೂಡುತ್ತಿದೆ ಲಕ್ಷಾಂತರ ರೂ.ಗಳನ್ನು ವ್ಯಯಿಸಿ ಉತ್ತಮ ಬೆಳೆಯನ್ನು ಬೆಳೆದು ನಾಲ್ಕು ಕಾಸು ಬರುತ್ತದೆ ಎಂದು ಮಾರಾಟ ಮಾಡುತ್ತಾರೆ ಆದರೆ ರೈತರನ್ನು ನಂಬಿಸುವ ವ್ಯಾಪಾರಿಗಳು ರೈತರಿಗೆ ಪಂಗನಾಮ ಹಾಕುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಹಾಗೂ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸುವುದಾಗಿ ತಿಳಿಸಿದರು.
ನಂತರ ಸಣಾಪುರ ಗ್ರಾಮದ ಸುಮಾರು 30ಕ್ಕೂ ಅಧಿಕ ರೈತರು ತಮಗಾಗಿರುವ ಅನ್ಯಾಯದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಪಿ.ಮೂಕಯ್ಯಸ್ವಾಮಿ, ವೆಂಕಟರಾಮರಾಜು, ಟಿ.ಶರಣಪ್ಪ, ಕನಕಗಿರಿ ರೇಣುಕಗೌಡ, ಬಿ.ಕೊಂಡಯ್ಯ,ಕೆ.ವಿಜಯಕುಮಾರ್,ಕಂಬಳಿವಸಂತ, ಉಮೇಶಗೌಡ,ಬುರುಗಪಲ್ಲಿ ಸುರೇಶ್,ರಾಜಕುಮಾರ್ ಸೇರಿದಂತೆ ಅನೇಕ ರೈತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















