ಬಳ್ಳಾರಿ/ ಕಂಪ್ಲಿ : ಪಟ್ಟಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮಗಳಿಂದ ಆಚರಣೆ ಮಾಡಲಾಗುವುದು ಎಂದು ರಾಷ್ಟಿಯ ಹಬ್ಬಗಳ ದಿನಾಚರಣೆ ಸಮಿತಿ ಅಧ್ಯಕ್ಷರು ಹಾಗೂ ತಹಸಿಲ್ದಾರರಾದ ಜೂಗಲ್ ಮಂಜುನಾಯಕ ತಿಳಿಸಿದರು.
ಅವರು ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಆ. 15ರಂದು ಬೆಳಿಗ್ಗೆ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ರಾಷ್ಟಿಯ ಧ್ವಜಾರೋಹಣವನ್ನು ನೆರವೇರಿಸಿ ನಂತರ ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪಿ. ಯು. ಕಾಲೇಜ್ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.
ಸಮಾರಂಭದಲ್ಲಿ ಶಾಸಕರಾದ ಜೆ. ಎನ್. ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ತಹಶೀಲ್ದಾರ ಜೂಗಲ್ ಮಂಜುನಾಯಕ ರಾಷ್ಟಿಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಪೊಲೀಸ್, ವಿದ್ಯಾರ್ಥಿಗಳಿಂದ ಧ್ವಜವಂದನೆ ಸ್ವೀಕರಿಸಲಿದ್ದಾರೆ. ನಂತರ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಜರುಗಲಿದ್ದು, ಕೊನೆಯಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಸಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ. ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪಟ್ಟಣದ ಎಲ್ಲಾ ಸರ್ಕಾರಿ ಕಚೇರಿಗಳನ್ನು, ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕೆಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಗಣ್ಯರು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಮಾತನಾಡಿ ತಾಲ್ಲೂಕಿನ ವಿವಿಧ ಗ್ರಾಮಗಳ ಸಮಾಜ ಸೇವಕರು, ಸಾಧಕರನ್ನು ಸನ್ಮಾನ ಮಾಡುವುದು ಕುರಿತಂತೆ ಅನೇಕ ಸಲಹೆ ಸೂಚನೆಗಳನ್ನು ನೀಡಿದರಲ್ಲದೆ, ತಾಲ್ಲೂಕಿನ ಸಾಧಕರಿಗೆ ಪ್ರಥಮ ಆದ್ಯತೆ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ತಾ. ಪಂ. ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ, ಗಣ್ಯರಾದ ಕೆ.ಎಂ.ಹೇಮಯ್ಯಸ್ವಾಮಿ, ಸಿ.ಎ.ಚನ್ನಪ್ಪ, ಕೊಟ್ಟೂರು ರಮೇಶ್, ಬಳೆ ಮಲ್ಲಿಕಾರ್ಜುನ, ಎಚ್.ಗುಂಡಪ್ಪ, ಹಾದಿಮನಿ ಕಾಳಿಂಗವರ್ಧನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















