
ಜೆಡಿಎಸ್ – ಕಾಂಗ್ರೆಸ್ ಕಾರ್ಯಕರ್ತರ ಮಾತಿನ ಜಟಾಪಟಿ
ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ತಮ್ಮ ಸಹಕಾರ ಅಗತ್ಯ ಶರಣಗೌಡ ಕಂದಕೂರ.
ನಮ್ಮದೇ ಸರಕಾರ ಅಭಿವೃದ್ಧಿಗೆ ಸದಾ ಸಿದ್ಧ : ಬಾಬುರಾವ್ ಚಿಂಚನಸೂರ.
ಯಾದಗಿರಿ/ ಗುರುಮಠಕಲ್: ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಹಾಗೂ ಕಂದಾಯ ಇಲಾಖೆಯ ಸಹಭಾಗಿತ್ವದಲ್ಲಿ 8.60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪ್ರಜಾ ಸೌಧ ತಾಲ್ಲೂಕಾ ಆಡಳಿತ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಗುರುಮಠಕಲ್ ಶಾಸಕರು ಒಂದು ವರ್ಷದಲ್ಲಿ ಕಟ್ಟಡ ಪೂರ್ಣಗೊಳ್ಳಲಿದ್ದು, ಇಲ್ಲಿಯೇ ಹಲವಾರು ಸರ್ಕಾರ ಇಲಾಖೆಗಳ ಕಚೇರಿಗಳು ಆರಂಭಗೊಳ್ಳಲಿವೆ ಇದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ. ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಮುಖ್ಯವಾಗಿ ಕಾರಣೀಭೂತರಾದ ಜಿಲ್ಲಾ ಉಸ್ತುವಾರಿ ಸಚಿವ ಶರಣ ಬಸಪ್ಪ ದರ್ಶನಾಪೂರ ಮತ್ತು ಆಗಿನ ಜಿಲ್ಲಾಧಿಕಾರಿ ಸುಶೀಲ ಅವರಿಗೆ ಧನ್ಯವಾದ ತಿಳಿಸಿದರು. ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಿ ಎಂದು ಸೂಚಿಸಿ, ಪಟ್ಟಣದಲ್ಲಿ 50 ಬೆಡ್ಗಳ ಸರ್ಕಾರಿ ಆಸ್ಪತ್ರೆಯನ್ನು 100 ಬೆಡ್ ಗಳಿಗೆ ಮೇಲ್ದರ್ಜೆಗೆ ಏರಿಸಲು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರಿಗೆ ಗುರುಮಠಕಲ್ ಅಭಿವೃದ್ಧಿಗೆ ತಮ್ಮ ಸಹಕಾರ ನೀಡಲು ಕೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯಕರ್ತರ ತಮ್ಮ ತಮ್ಮ ನಾಯಕರ ಪರ ಜಯಘೋಷಗಳು ಮಾತಿನ ಚಕಮಕಿ ಮಧ್ಯದಲ್ಲಿ ಜರುಗಿದರೂ ಇಬ್ಬರು ನಾಯಕರು ಮತ್ತು ಪೊಲೀಸ್ ಇಲಾಖೆ ಎಲ್ಲಾ ಕಾರ್ಯಕರ್ತರನ್ನು ಶಾಂತಗೊಳಿಸಿದರು.
ನೂತನ ತಾಲ್ಲೂಕಾ ಕೇಂದ್ರವಾಗಿರುವ ಗುರುಮಠಕಲ್ ಪಟ್ಟಣದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ, ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಹಣಕಾಸು ಖಾತೆ ನಿರ್ವಹಣೆ ಮಾಡುವ ಮೂಲಕ ವಿಧಾನ ಸಭಾ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿರುವ ಭರವಸೆಯಂತೆ ಪಂಚ ಗ್ಯಾರಂಟಿಗಳಿಗೆ ಅನುಧಾನ ಒದಗಿಸುವ ಜೊತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸೂಕ್ತ ಅನುದಾನ ತಂದು ಕ್ಷೇತ್ರ ಪ್ರಗತಿಗೆ ಶ್ರಮಿಸುವದಾಗಿ ಮಾಜಿ ಶಾಸಕ ಹಾಗೂ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಗೃಹ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಯೋಜನೆ ಮಾಹಿತಿ ನೀಡಿದರು. ತಹಶೀಲ್ದಾರ್ ಶಾಂತಗೌಡ ಬಿರಾದಾರ, ಪುರಸಭೆ ಅಧ್ಯಕ್ಷೆ ಜಯಶ್ರೀ ಪೋ ಪಾಟೀಲ,ಮುಖ್ಯಾಧಿಕಾರಿ ಭಾರತೀ ದಂಡೋತಿ, ಗೃಹಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಗಿರೀಶ್, ಸೇರಿದಂತೆ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಷ ಪಾಟೀಲ, ಸಿಡಿಪಿಓ ಶರಣಬಸಪ್ಪ, ಹಲವರು ಉಪಸ್ಥಿತರಿದ್ದರು.
ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಡಿ :
” ನಾನು ಇಲ್ಲಿ ಆಯ್ಕೆಯಾಗಿ ಬಂದಿರುವುದು ಗುರುಮಠಕಲ್ ಅಭಿವೃದ್ಧಿಯ ವಿಷಯವನ್ನಿಟ್ಟುಕೊಂಡು ಚುನಾವಣೆ ಸಮಯದಲ್ಲಿ ಕೇವಲ 15 ದಿನ ಮೊದಲು ನಾನು ರಾಜಕೀಯ ಮಾಡುತ್ತೇನೆ. ಎಲ್ಲರೂ ಅಷ್ಟೇ ಚುನಾವಣೆ ಸಮಯದಲ್ಲಿ ರಾಜಕೀಯ ಮಾಡಿ, ಅದು ಬಿಟ್ಟು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಡಿ, ಎಲ್ಲರೂ ಜನರ ಒಳಿತಾಗಿಯೇ ಕೆಲಸ ಮಾಡಬೇಕಿದೆ “.
- ಶರಣಗೌಡ ಕಂದಕೂರ, ಗುರುಮಠಕಲ್ ಶಾಸಕರು.
ವರದಿ: ಜಗದೀಶ್ ಕುಮಾರ್ ಭೂಮಾ



















