ಬಳ್ಳಾರಿ / ಕಂಪ್ಲಿ : ಕೆಸಿಸಿ ಮತ್ತು ಬಿಡಿಪಿ ಸೇರಿದಂತೆ ವಿವಿಧ ಯೋಜನೆಯಲ್ಲಿ ಪಡೆದಂತಹ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಮತ್ತು ಸಂಘದ ಹಾಲಿ ನಿರ್ದೇಶಕ ಪಿ. ಮೂಕಯ್ಯಸ್ವಾಮಿ ಹೇಳಿದರು.
ತಾಲೂಕಿನ ಸಣಾಪುರ ಗ್ರಾಮದ ನಾರಾಯಣಸ್ವಾಮಿ ಕ್ಯಾಂಪ್ ಬಳಿಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಕೆ.ವೆಂಕಟರಾಮರಾಜು ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ 7ನೇ ವಾರ್ಷಿಕ ಮಹಾಜನ ಸಭೆ ಉದ್ಘಾಟಿಸಿ ಮಾತನಾಡಿ, ಸಣಾಪುರ, ಇಟಗಿ ಸೇರಿದಂತೆ ಐದು ಗ್ರಾಮಗಳನ್ನೊಳಗೊಂಡಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿ, ಈಗ ಏಳನೇ ವರ್ಷಕ್ಕೆ ಕಾಲಿಟ್ಟಿದೆ. ಕೆಲವೊಂದು ಹಳೆಯ ಸಂಘಗಳು ಸಾಲದಲ್ಲಿ ಕೈತೊಳೆಯುವ ಮಧ್ಯದಲ್ಲಿ ನಮ್ಮ ಸಂಘವು ಸ್ಥಾಪನೆಗೊಂಡು ಕೆಲ ವರ್ಷದಲ್ಲೇ ಅಭಿವೃದ್ಧಿಯ ಹೆಜ್ಜೆ ಇಟ್ಟಿದೆ. ಈಗಾಗಲೇ ಸಹಕಾರ ಸಂಘದಿಂದ ರೈತರಿಗೆ ಸಮರ್ಪಕವಾಗಿ ಸಾಲದ ಯೋಜನೆಗಳನ್ನು ನೀಡಲಾಗುತ್ತಿದೆ. ಮುಂದಿನ ದಿನದಲ್ಲಿ ಗೋದಾಮು ನಿರ್ಮಿಸಲಾಗುವುದು ಎಂದರು.
ಮುಖ್ಯ ಕಾರ್ಯನಿರ್ವಾಹಕ ಎ.ಶಿವಕುಮಾರ ವಾರ್ಷಿಕ ವರದಿಯೊಂದಿಗೆ ಮಾತನಾಡಿ, ಸಂಘವು 2018ನೇ ಸಾಲಿನಲ್ಲಿ ಸ್ಥಾಪನೆಗೊಂಡಿದ್ದು. 5 ಹಳ್ಳಿಗಳ ಕಾರ್ಯವ್ಯಾಪ್ತಿ ಹೊಂದಿದೆ. ಸಂಘವು 1230 ಸದಸ್ಯರೊಂದಿಗೆ, ಸುಮಾರು 75.01 ಲಕ್ಷ ಷೇರು ಬಂಡವಾಳ ಇದ್ದು, ಕೆಸಿಸಿ ಅಲ್ಪಾವಧಿ ಬೆಳೆ ಸಾಲವನ್ನು 267 ಜನರಿಗೆ ಸುಮಾರು 264.74 ಲಕ್ಷ ವಿತರಣೆ ಮಾಡಿದ್ದು, ಶೇ. 100% ಸಾಲ ವಸೂಲಾತಿ ಆಗಿರುತ್ತದೆ. 25.86 ಲಕ್ಷದ ಬಿಡಿಪಿ ಸಾಲವನ್ನು 66 ಜನಕ್ಕೆ ಕಲ್ಪಿಸಿದ್ದು, ಶೇ.93% ಸಾಲ ವಸೂಲಾತಿ ಆಗಿದೆ. ಸಂಘದಲ್ಲಿ ಬೆಳೆ ಸಾಲ ಪಡೆದಂತಹ ರೈತರಿಗೆ ವೈಯಕ್ತಿಕ ಅಪಘಾತ ವಿಮೆ ಯೋಜನೆ ಅಳವಡಿಸಲಾಗಿದೆ. ಸಂಘವು ಸುಮಾರ 86.04 ಲಕ್ಷ ಪತ್ತೇತರ ವ್ಯವಾಹಾರ ಮಾಡಿ, 0.75 ಲಕ್ಷ ವ್ಯವಹಾರ ಲಾಭ ಗಳಿಸಿದೆ. ಸಂಘದಲ್ಲಿ ಸುಮಾರು 27.33 ಲಕ್ಷ ಠೇವಣಿ ಇದೆ. 2024-25ನೇ ಸಾಲಿನಲ್ಲಿ ಸಂಘವು ಸುಮಾರು 2 ಲಕ್ಷ 27 ಸಾವಿರ ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ ಅಧ್ಯಕ್ಷ ಟಿ. ರಮಣಯ್ಯ, ಸಂಘದ ಉಪಾಧ್ಯಕ್ಷ ಡಿ. ಹನುಮಯ್ಯ, ನಿರ್ದೇಶಕರಾದ ಸಿ.ಯಂಕಪ್ಪ, ಜಿ.ವೀರೇಶಪ್ಪ, ಪಿ.ಚೊಕ್ಕರಾವ್, ವಿ.ವೆಂಕಟೇಶ, ಜಾಲಹಳ್ಳಿ ಶಮೀಬ್‌ಸಾಬ್, ಹಗೆದಾಳ್ ವೀರೇಶ್, ಗೌಡ್ರು ಚನ್ನವೀರ, ವೈ.ರೇಣುಕಮ್ಮ, ವೈ.ಈಶ್ವರಿ, ಕಂಬಳಿ ಚನ್ನಪ್ಪ, ಬಿಡಿಸಿಸಿ ಬ್ಯಾಂಕಿನ ಕ್ಷೇತ್ರಾಧಿಕಾರಿ ಚಂದ್ರರೆಡ್ಡಿ, ಕಂಪ್ಲಿ ತಾಲೂಕು ಮಾರ್ಕೇಟಿಂಗ್ ಸೊಸೈಟಿ ಅಧ್ಯಕ್ಷ ಕೆ.ಭಾಸ್ಕರ್‌ರೆಡ್ಡಿ, ಸಣಾಪುರ ನೀರು ಬಳಕೆದಾರರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ, ಮುಖಂಡರಾದ ಟಿ.ಶರಣಗೌಡ, ಕೃಷ್ಣಂರಾಜ್, ಎಂ.ಪ್ರಸಾದ್, ಕೆ.ರಾಮಕೃಷ್ಣ, ಕೆ.ವಿರೇಶ, ಕಲ್ಯಾಣ ದೊಡ್ಡಬಸಪ್ಪ, ಇಟಗಿ ರುದ್ರಪ್ಪ, ಶಿವುಕುಮಾರ, ಆರ್.ನರಸಿಂಹಲು, ವಿ.ಅಪಲ್‌ರಾಜ್, ಭೀಮಪ್ಪ, ಪ್ರವೀಣ್ ಸೇರಿದಂತೆ ರೈತರು ಹಾಗೂ ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















