
ಬಳ್ಳಾರಿ / ಕಂಪ್ಲಿ : ಇವಿಎಂ ತೆಗೆದು ಬ್ಯಾಲೇಟ್ ಪೇಪರ್ ಮೂಲಕ ಚುನಾವಣೆ ನಡೆಸಿದರೆ, ಬಿಜೆಪಿ ಅಸಲಿ ಬಣ್ಣ ಬಟಾಬಯಲು ಆಗಲಿದೆ ಎಂದು ಕೆಪಿಸಿಸಿ ಎಸ್ ಸಿ ಘಟಕದ ರಾಜ್ಯಾಧ್ಯಕ್ಷ ಆರ್. ಧರ್ಮಸೇನಾ ಹೇಳಿದರು.
ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಶಾಸಕರ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಎಸ್ ಸಿ ವಿಭಾಗದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಾಂಗ್ರೆಸ್ ಬೆನ್ನಿಗೆ ಪರಿಶಿಷ್ಟ ಜಾತಿ ಮತಗಳಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಯಿಸುತ್ತಿದೆ. ಇದರಿಂದ ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಜನರ ಮನೆ ಬಾಗಿಲಿಗೆ ಮುಟ್ಟಿವೆ ಎಂಬುದನ್ನ ಅರಿಯಬೇಕಾಗಿದೆ. ಮತ್ತು ಎಸ್ಸಿ ಘಟಕದ ಪ್ರತಿಯೊಂದು ಆಗು ಹೋಗುಗಳನ್ನು ಖುದ್ದಾಗಿ ಪರಿಶೀಲಿಸಲಾಯಿತು. ಜಿಲ್ಲಾ ಎಸ್ ಸಿ ಸಮಿತಿಯ ಜಿಲ್ಲಾಧ್ಯಕ್ಷ ವೀರಾಂಜನೀಯಲು ನೇತೃತ್ವದಲ್ಲಿ ಪಕ್ಷವನ್ನು ಮತ್ತುಷ್ಟು ಬಲಿಷ್ಠಗೊಳಿಸುವ ಜೊತೆಗೆ ಸರ್ಕಾರ ಜಾರಿಗೆ ತಂದಿರುವ ಪಂಚ ಯೋಜನೆಗಳ ಬಗ್ಗೆ ಜನರಲ್ಲಿ ಮನದಟ್ಟು ಮಾಡಬೇಕು. ಕಾಂಗ್ರೆಸ್ ಬಡವರ ಪರ ಪಕ್ಷ. ಬಡವರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ, ಮೋದಿ ಬಂಡವಾಳಶಾಹಿ ಪರ ನಿಂತಿದ್ದಾರೆ. ಅವರು ಭಾರತದ ಅಭಿವೃದ್ಧಿ ಎಂದರೆ ಬಂಡವಾಳ ಶಾಹಿಗಳ ಅಭಿವೃದ್ಧಿ ಎಂದುಕೊಂಡಿದ್ದಾರೆ ಎಂದು ಗುಡುಗಿದರು.
ನಂತರ ಶಾಸಕ ಜೆ.ಎನ್.ಗಣೇಶ ಮಾತನಾಡಿ, ಉನ್ನತ ಶಿಕ್ಷಣ ಕೊಡಿಸಿದರೆ, ಎಸ್ಸಿ ಸಮಾಜದ ಮಕ್ಕಳಿಗೆ ಉದ್ಯೋಗ ಹೊಂದುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗಬಲ್ಲರು. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಪ್ರೋತ್ಸಾಹಿಸಿದರೆ, ಕಾಂಗ್ರೆಸ್ಗೆ ಮತ್ತಷ್ಟು ಬಲ ಬರಲಿದೆ. ಮುಂದಿನ ದಿನದಲ್ಲಿ ಕಾಂಗ್ರೆಸ್ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಜಿಲ್ಲಾ ಎಸ್ ಸಿ ಸಮಿತಿಯ ಪದಾಧಿಕಾರಿಗಳು ಪಕ್ಷವನ್ನು ಸಂಘಟಿಸಲು ಶ್ರಮಿಸಬೇಕಾಗಿದೆ ಎಂದರು.
ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ವೀರಾಂಜನೀಯಲು ಮಾತನಾಡಿ, ಕಾಂಗ್ರೆಸ್ ಪಕ್ಷವು ನೀಡಿದ ಜವಾಬ್ದಾರಿಯಂತೆ ಪಕ್ಷದ ಏಳಿಗೆಗೆ ಹಗಲಿರುಳು ಶ್ರಮಿಸಲಾಗುತ್ತಿದೆ. ಸಮಿತಿಯ ಪದಾಧಿಕಾರಿಗಳ ಸಹಕಾರದೊಂದಿಗೆ ಸರ್ಕಾರದ ಯೋಜನೆಗಳನ್ನು ಜನತೆಗೆ ಮನದಟ್ಟು ಮಾಡಲಾಗುತ್ತಿದೆ ಎಂದರು.
ತದನಂತರ ಗ್ರಾಮೀಣ ಭಾಗದಲ್ಲಿ ಸಾಮೂಹಿಕ ಶೌಚಾಗೃಹ ನಿರ್ಮಿಸಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚುವರಿಯಾಗಿ ಅವಕಾಶ ಮಾಡಿಕೊಡಬೇಕು. ನಿಗಮದಿಂದ ಬರುವಂತಹ ಅನುದಾನವನ್ನು ಹೆಚ್ಚಿಸಬೇಕು. ಹೀಗೆ ಹಲವು ವಿಚಾರಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಶ್ರೀನಿವಾಸರಾವ್, ಚನ್ನಬಸವರಾಜಗೌಡ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಕಂಪ್ಲಿ ಎಸ್ ಸಿ ಬ್ಲಾಕ್ ಅಧ್ಯಕ್ಷ ಆರ್.ಎಂ.ರಾಮಯ್ಯ, ಮುಖಂಡರಾದ ಕನ್ನಿರಾಂ ರಾಥೋಡ್, ನಾಗರಾಜ, ಸೈಯದ್ ಉಸ್ಮಾನ್, ಲೊಡ್ಡು ಹೊನ್ನೂರವಲಿ, ಕೆ.ಮನೋಹರ, ಮಸ್ತಾನ್, ಹೆಚ್.ಜಗದೀಶ, ನಾಗರಾಜ ಡೆಕೋರೇಷನ್, ಗೋಪಾಲ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















