ಬಳ್ಳಾರಿ / ಕಂಪ್ಲಿ : ಪೌರ ಕಾರ್ಮಿಕರು ದಿನನಿತ್ಯದ ದುಡಿಮೆ ಜೊತೆಗೆ ಸ್ವಚ್ಚತೆಯೊಂದಿಗೆ ಆರೋಗ್ಯ ಕಾಪಾಡಲು ಜಾಗೃತಿವಹಿಸಬೇಕು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಹಾಗೂ ಪುರಸಭೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರ ಸನ್ಮಾನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿ, ಪೌರ ಕಾರ್ಮಿಕರಿಗೆ ನಿವೇಶನ ಜೊತೆಗೆ ಸೂರಿನ ಸೌಲಭ್ಯಗಳನ್ನು ಒದಗಿಸಲಾಗುವುದು. ಈಗಾಗಲೇ ಶಿಬಿರದಿನ್ನಿ (ಮಾರುತಿನಗರ) ದಲ್ಲಿರುವ ಸಿಎ ಸೈಟ್ನಲ್ಲಿ ಸುಮಾರು 29 ಲಕ್ಷ ರೂ.ಗಳ ವೆಚ್ಚದಲ್ಲಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಿ ಕೊಡಲು ಶಂಕುಸ್ಥಾಪನೆ ನೆರವೇರಿಸಲಾಯಿತು. ಪೌರ ಕಾರ್ಮಿಕರ ಶೈಕ್ಷಣಿಕ, ಅರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಮಕ್ಕಳಿಗೆ ಮೊಬೈಲ್ ಕೊಡುವ ಬದಲು ಪುಸ್ತಕ ನೀಡಿದಾಗ ಜ್ಞಾನ ಸಂಪಾದನೆ ಸಾಧ್ಯ. ಸಮುದಾಯ ಬದಲಾವಣೆ ಶಿಕ್ಷಣ ಮುಖ್ಯವಾಗಿದೆ. ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಪಾಲಕರ ಪಾತ್ರವಾಗಿದೆ. ಪೌರರು ದುಶ್ಚಟದಿಂದ ದೂರ ಉಳಿಯುವ ಮೂಲಕ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಪುರಸಭೆ ಅಧ್ಯಕ್ಷ ಭಟ್ಟಪ್ರಸಾದ ಮಾತನಾಡಿ, ನಗರದ ಸ್ವಚ್ಚತೆಗೆ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪುರಸಭೆ ಅಡಳಿತ ಮಂಡಳಿಯು ಸಿದ್ದವಿದೆ. ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಮಕ್ಕಳ ಭವಿಷ್ಯದ ಕಡೆಗೆ ಗಮನ ಹರಿಸಬೇಕು ಎಂದರು.
ಪೌರ ಕಾರ್ಮಿಕರಿಗೆ ಪೌರ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಸಿ.ಆರ್.ಹನುಮಂತ, ಕೆ.ಎಸ್.ಚಾಂದ್ಬಾಷಾ, ವೀರಾಂಜನೇಯ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಕಂದಾಯ ಅಧಿಕಾರಿ ಪ್ರಶಾಂತ್, ಪರಿಸರ ಅಭಿಯಾಂತರ ಶರಣಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶಬಾಬು, ಕಿರಿಯ ಆರೋಗ್ಯ ನಿರೀಕ್ಷಕ ಜೀವನ್ ಸ್ವಾತಿ, ಲೆಕ್ಕಿ ರಮೇಶ ಬೆಳಂಕರ್, ನೈರ್ಮಲ್ಯ ಮೇಲ್ವಿಚಾರಕ ಓಬಳೇಶ, ವೆಂಕಟೇಶ, ಯುವ ಮುಖಂಡ ಆಟೋ ರಾಘವೇಂದ್ರ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















