
ಗುರುಮಠಕಲ್: ತಾಲ್ಲೂಕಿನ ಯೆಲ್ಹೇರಿ ಗ್ರಾಮದಲ್ಲಿ ಸೆ.25(ಗುರುವಾರ) ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಶತಮಾನೋತ್ಸವ ವರ್ಷ ಹಾಗೂ ಸಂಘದ ಪ್ರಾರಂಭಗೊಂಡ ವಿಜಯದಶಮಿ ಉತ್ಸವ ಅಂಗವಾಗಿ ಸ್ವಯಂಸೇವಕರ ಪಥಸಂಚಲನ ಜರುಗಿತು.
ಗ್ರಾಮದ ಪ್ರಮುಖ ರಸ್ತೆಗಳ, ಬೀದಿಗಳಲ್ಲಿ ಆರ್.ಎಸ್.ಎಸ್ ಪಥಸಂಚಲನ ಸಾಗುವ ವೇಳೆ ‘ಭಾರತ್ ಮಾತಾಕೀ ಜೈ’ ಎನ್ನುವ ದೇಶ ಭಕ್ತಿಯ ಮತ್ತು ಭಾರತ ಮಾತೆಯ ಜಯಕಾರದ ಘೋಷಗಳೊಂದಿಗೆ ಸ್ವಯಂಸೇವಕರ ಮೇಲೆ ಪುಷ್ಪವೃಷ್ಟಿಯ ಮೂಲಕ ಮಾತೆಯರು ಪಥಸಂಚಲನಕ್ಕೆ ಸ್ವಾಗತ ಕೋರಿದ್ದು ಆಕರ್ಷಕವಾಗಿತ್ತು.
ದೇಶದ ಅತಿದೊಡ್ಡ ಸಂಘಟನೆಯಾಗಿರುವ ಆರ್.ಎಸ್.ಎಸ್. ಪ್ರಾರಂಭಗೊಂಡು ನೂರು ವರ್ಷಗಳು ಪೂರೈಸಿದ್ದು, ಸಂಘದ ವಿಚಾರಗಳನ್ನು ಪ್ರತಿ ಗ್ರಾಮದ ಮನೆಗಳಿಗೆ ತಲುಪಿಸುವ ಕಾರ್ಯ ಮತ್ತು ಜಾತಿ ಬೇಧದ ಮೇಲು-ಕೀಳು ಭಾವನೆಗಳನ್ನು ತೊರೆದು ರಾಷ್ಟ್ರ ರಕ್ಷಣೆಗೆ ಒಗ್ಗೂಡುವ ಸಂದೇಶವನ್ನು ಕಾರ್ಯಕ್ರಮದ ವಕ್ತಾರರಾದ ಗಿರೀಶ್ ಹೆಬ್ಬಾರ್ ರವರು ನೀಡಿದರು.
ಭಗವದ್ ಧ್ವಜಕ್ಕೆ ಗೌರವ ಸಲ್ಲಿಸುವ ಮೂಲಕ ಪಥಸಂಚಲನ ಸಂಪನ್ನಗೊಂಡಿತು.
ವರದಿ: ಜಗದೀಶ್ ಕುಮಾರ್ ಭೂಮಾ



















