ಬಾಗಲಕೋಟೆ/ ಜಮಖಂಡಿ: ಅಡುಗೆ ಮನೆ ನಿರ್ಮಾಣ ಕಾಮಗಾರಿಯನ್ನು ಮುಂದಿನ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳಿಸಿ ಉದ್ಘಾಟನೆ ನೆರವೇರಿಸಬೇಕು ರೋಟರಿ ಭವನ ಮತ್ತು ಅಡುಗೆ ಮನೆಯ ಸೌಲಭ್ಯಗಳು ಬಡವರು, ದೀನ ದಲಿತರಿಗೆ ಪ್ರಯೋಜನ ದೊರಕಿಸಿಕೊಡಬೇಕು ಎಂದು ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ವಿಜಯಪುರ ರಸ್ತೆಯ ಪಕ್ಕದಲ್ಲಿರುವ ರೋಟರಿ ಭವನ ಆವರಣದಲ್ಲಿ ರೋಟರಿ ಸಂಸ್ಥೆಯ ರೋಟರಿ ಸೇವಾ ಸಂಸ್ಥೆಯ ನೆರವಿನಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಡುಗೆ ಮನೆಯ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಓಲೆಮಠದ ಆನಂದ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಘಟಾನುಘಟಿ ವ್ಯಕ್ತಿಗಳು ಇರುವುದರಿಂದ ಅಡುಗೆ ಮನೆ ನಿರ್ಮಿಸುವ ಹಾಗೂ ರೋಟರಿ ಭವನ ಆವರಣದಲ್ಲಿ ಇರುವ ಖುಲ್ಲಾ ಜಾಗೆಯನ್ನು ದುರುಪಯೋಗ ಪಡಿಸಿಕೊಳ್ಳುವ ದೊಡ್ಡ ಹೆಜ್ಜೆ ಇಟ್ಟಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ. ಅದರ ಪ್ರಯೋಜನ ಸರ್ವರಿಗೂ ದೊರೆಯುವಂತಾಗಲಿ ಎಂದು ಆಶೀರ್ವಚನ ನೀಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಕೋವಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಶ್ರೀಶೈಲ ಮಾದಣ್ಣವರ ಅಧ್ಯಕ್ಷರಾಗಿದ್ದಾಗ ೨೦ ಗುಂಟೆ ಜಾಗೆ ಸಂಸ್ಥೆಗೆ ದೇಣಿಗೆ ರೂಪದಲ್ಲಿ ಒಲಿದು ಬಂದಿತ್ತು. ಏಗಪ್ಪ ಸವದಿ ಅವರು ಅಧ್ಯಕ್ಷರಾಗಿದ್ದಾಗ ಐದು ವರ್ಷಗಳ ಹಿಂದೆ ರೋಟರಿ ಭವನ ನಿರ್ಮಿಸಲಾಗಿದೆ. ಈಗ ಅದರ ಆವರಣದಲ್ಲಿ ಅಡುಗೆ ಮನೆ ಹಾಗೂ ವಾಣಿಜ್ಯ ಅಂಗಡಿಯನ್ನು ನಿರ್ಮಿಸಲಾಗುತ್ತದೆ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿ ಶಿವಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಬಸವರಾಜ ಬಳಗಾರ, ರಾಜಶೇಖರ ಕೋವಳ್ಳಿ, ಆನಂದ ದೇವರು, ಡಾ.ಆರ್.ವಿ. ಮೆಟಗುಡ್ಡ, ಡಾ.ಕೆ.ಐ. ಗುರಮಠ ಇದ್ದರು.
ಡಾ.ಆರ್.ವಿ. ಮೆಟಗುಡ್ಡ, ಡಾ.ಕೆ.ಐ. ಗುರಮಠ, ರೋಟರಿ ಸಂಸ್ಥೆಯ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸದಸ್ಯರು ಇದ್ದರು. ಬಸವರಾಜ ಬಳಗಾರ ಸ್ವಾಗತಿಸಿ ನಿರೂಪಿಸಿದರು. ಗೋಪಾಲಕೃಷ್ಣ ಪ್ರಭು ವಂದಿಸಿದರು.
- ಕರುನಾಡ ಕಂದ



















