ಬಳ್ಳಾರಿ / ಕಂಪ್ಲಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಯಿ ಮತ್ತು ಶಿಶು ಸಾವಿಗೆ ಕಾರಣರಾಗಿರುವ ವೈದ್ಯರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ವಿಜಯ ಕರುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಬರೆದ ಪತ್ರವನ್ನು ತಹಶೀಲ್ದಾರ್ ಕಚೇರಿಯ ಶಿರಸ್ತೆದಾರ್ ಎಸ್. ಕೆ. ರಮೇಶ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ. ವಿರುಪಾಕ್ಷಿ ಯಾದವ್ ಮಾತನಾಡಿ ರಾಮಸಾಗರ ಗ್ರಾಮದ ಗರ್ಭಿಣಿ ಚಂದ್ರಮ್ಮಳನ್ನು ಹೆರಿಗೆಗಾಗಿ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು ಅಂದು ಸಂಜೆ ಹೆರಿಗೆಯಾಗಿ ನವಜಾತ ಶಿಶು ಸಾವನಪ್ಪಿದೆ ನಂತರ ಬಾಣಂತಿಗೆ ತೀವ್ರತರವಾದ ರಕ್ತಸ್ರಾವವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ ಗೆ ದಾಖಲಿಸಿದ್ದು ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿ ಚಂದ್ರಮ್ಮ ಮೃತಪಟ್ಟಿದ್ದಾಳೆ ಎಂದು ಆರೋಪಿಸಿದರು.
ತಾಯಿ ಮತ್ತು ಶಿಶುವಿನ ಸಾವಿಗೆ ಕಾರಣರಾದ ವೈದ್ಯರು ಮತ್ತು ಸಿಬ್ಬಂದಿಯ ಕರ್ತವ್ಯ ಲೋಪವೇ ಕಾರಣವಾಗಿದ್ದು ತಪ್ಪು ಮಾಡಿದ್ದ ವೈದ್ಯರು ಮತ್ತು ನರ್ಸ್ ಅವರನ್ನು ಕೇವಲ ವರ್ಗಾವಣೆ ಮಾಡಿದರೆ ಸಾಲದು ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೆದಾರ್ ಎಸ್. ಕೆ. ರಮೇಶ ಪ್ರತಿಭಟನಾಕಾರರ ಮನವಿ ಪತ್ರವನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಸಲ್ಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಜಯ ಕರುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಬಿ. ಮಂಜುಳ, ಎಸ್. ಕೆ. ಗೋಪಾಲ್ ಯಾದವ್, ಸಂತೋಷ್ ಕುಮಾರ್, ಜಗದೀಶ್ ಪೂಜಾರ, ಬಳೆ ಮಾಧವ, ಮುಕ್ಕಣ್ಣ, ಗಂಗಮ್ಮ, ಈರಮ್ಮ, ಪಾರ್ವತಮ್ಮ, ಹುಲಿಗೆಮ್ಮ, ಶಿವಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















