
ಬಳ್ಳಾರಿ/ ಕಂಪ್ಲಿ : ದಸರಾ ಪ್ರಯುಕ್ತ ನಡೆಯುವ ಆಯುಧ ಪೂಜೆ ಮುನ್ನಾ ದಿನವಾದ ಮಂಗಳವಾರ ಕಂಪ್ಲಿ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು ಬೆಲೆ ಏರಿಕೆಯ ನಡುವೆಯೂ ಜನರು ಉತ್ಸಾಹದಿಂದ ಹೂವು ಹಣ್ಣು ಹಾಗೂ ಹಬ್ಬದ ಸಾಮಗ್ರಿಗಳನ್ನು ಖರೀದಿಸಿದರು.
ನಡುವಲ ಮಸೀದಿಯ ಅಕ್ಕಪಕ್ಕದ ರಸ್ತೆ ಬಳಿಯಲ್ಲಿರುವ ಮಾರುಕಟ್ಟೆ, ಮಾರೆಮ್ಮ ಗುಡಿ, ಪುರಸಭೆ ಮುಂಭಾಗದ ರಸ್ತೆ, ಡಾ. ರಾಜಕುಮಾರ ರಸ್ತೆ ಮಾರುಕಟ್ಟೆ ಸೇರಿ ಹಲವೆಡೆ ಬಾಳೆ ಕಂದು, ಬೂದುಗುಂಬಳಕಾಯಿಗಳ ಖರೀದಿ ಭರಾಟೆ ಕಂಡು ಬಂತು. ಪ್ರಮುಖ ರಸ್ತೆಗಳಲ್ಲಿ ಆಲಂಕಾರಿಕ ವಸ್ತುಗಳು, ಪೂಜೆ ಸಾಮಗ್ರಿಗಳಿಗೆ ಪ್ರತ್ಯೇಕವಾಗಿ ಅಂಗಡಿಗಳನ್ನು ತೆರೆಯಲಾಗಿತ್ತು.
ಬೆಲೆ ಏರಿಕೆಯಾದರೂ ಖರೀದಿ ಮಾತ್ರ ಕಡಿಮೆಯಾಗಲಿಲ್ಲ. ಮಧ್ಯಾಹ್ನ ವಿರಳ ಸಂಖ್ಯೆಯಲ್ಲಿದ್ದ ಜನರು ಸಂಜೆಯಾಗುತ್ತಿದ್ದಂತೆ ಹೆಚ್ಚಾಗಿ ಖರೀದಿಸಿದರು. ನಗರವಲ್ಲದೇ ಗ್ರಾಮೀಣ ಪ್ರದೇಶದ ಜನರೂ ಬಗೆ ಬಗೆಯ ವಸ್ತು ಖರೀದಿಸಲು ನಗರಕ್ಕೆ ಬಂದರು. ಹಬ್ಬದ ಹಿನ್ನೆಲೆಯಲ್ಲಿ ಕೆಲ ತರಕಾರಿಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿತು.
ಬಾಳೆದಿಂಡು ಒಂದು ಜೋಡಿಗೆ ರೂ.49, ಬೂದುಕುಂಬಳ 100 ರೂ, ಚೆಂಡುವು ಪ್ರತಿ ಕೆಜಿಗೆ 120 ರೂ. ಹೀಗೆ ಹೆಚ್ಚಿನ ಬೆಲೆಯ ನಡುವೆ ಜನರು ಹಬ್ಬದ ಸಂಭ್ರಮದಿಂದ ಆಚರಿಸಲು ಹೂ, ಹಣ್ಣು, ಬಾಳೆಕಂಬ ಸೇರಿದಂತೆ ನಾನಾ ಸಾಮಗ್ರಿಗಳನ್ನು ಖರೀದಿಸಿದರು. ವಾಹನಗಳಿಗೆ ಅಲಂಕಾರಕ್ಕಾಗಿ ವಿವಿಧ ವಿನ್ಯಾಸದ ಹೂವಿನ ಹಾರಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಿತ್ತು. ಸಣ್ಣ ಹಾರಗಳು 100ರಿಂದ ಆರಂಭವಾಗಿ ದೊಡ್ಡ ಹಾರಗಳು ೫೦೦ರವರೆಗೂ ಮಾರಾಟವಾದವು. ಕೆಲವರು ಹಣ್ಣುಗಳನ್ನು ಮಿಶ್ರಣ ಮಾಡಿ ಕೊಂಡುಕೊಳ್ಳುತ್ತಿದ್ದರು. ಒಂದು ಕೆ.ಜಿಗೆ 120ಕ್ಕೂ ಹೆಚ್ಚು ರೂ.ಗಳಿಗೆ ಬೆಲೆ ಇತ್ತು. ಬುಧವಾರದಂದು ಆಯುಧಪೂಜೆ ಇರುವುದಿಂದ ನಾಳೆ ಹಬ್ಬದ ನಿಮಿತ್ತ ಖರೀದಿಗೆ ಜನರು ಒಮ್ಮೆಲೆ ಧಾವಿಸಲಿದ್ದಾರೆ. ಒಟ್ನಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ದತೆಯೊಂದಿಗೆ ಸಾಮಗ್ರಿಗಳನ್ನು ಖರೀದಿಸಿ, ಹಬ್ಬದ ಆಚರಣೆಗೆ ಮುಂದಾಗಿರುವುದು ಕಂಡು ಬಂತು.
ವರದಿ : ಜಿಲಾನಸಾಬ್ ಬಡಿಗೇರ್




















