
ವೀರಶೈವ ಲಿಂಗಾಯತ ಸಮಾಜದ ವತಿಯಿಂದ ದಸರಾ ಆಚರಣೆ.
ಗುರುಮಠಕಲ್: ಅ.2 ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ವೀರಭದ್ರ ಸ್ವಾಮಿಗೆ ಪೂಜೆ ಸಲ್ಲಿಸಿ ಮಂಗಳವಾದ್ಯಗಳೊಂದಿಗೆ ಖಾಸಾಮಠಕ್ಕೆ ತೆರಳಲಾಯಿತು.
ಪರಂಪರಾಗತವಾಗಿ ಮೊದಲಿನಿಂದ ವೀರಶೈವ ಲಿಂಗಾಯತ ಸಮಾಜ ಭಾಂದವರು ಸಣ್ಣಮಠದ ಲಿಂಗೈಕ್ಯ ಸೋಮೇಶ್ವರ ಶಿವಾಚಾರ್ಯರ ಗದ್ದುಗೆಗೆ ಪೂಜೆ ಸಲ್ಲಿಸಿ ಖಾಸಾಮಠಕ್ಕೆ ತೆರಳಿ ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಲಾಯಿತು.
ಖಾಸಾಮಠದ ಆವರಣದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಪೂರ್ವ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ ಸಂಗಮೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಅಥಿತಿಗಳಾದ ಆನಂದಶೇಖರ ಹಿರೇಮಠ ಮತ್ತು ಅಖಂಡೇಶ್ವರ ಹಿರೇಮಠರವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕಾರ್ಯಕ್ರಮದ ಕುರಿತಾಗಿ ವಿಜಯರಾಜ ಶಾಸ್ತ್ರಿ ನಿವೃತ್ತ ಶಿಕ್ಷಕರು ಮಾತನಾಡಿ ಪೂರ್ವ ಭಾರತದಲ್ಲಿ ಆಚರಿಸಲಾಗುವ ದುರ್ಗಾ ಪೂಜಾ ಹಬ್ಬದ 10 ನೇ ದಿನವಾದ ವಿಜಯದಶಮಿಯೊಂದಿಗೆ ದಸರಾ ಹಬ್ಬವು ಸೇರಿಕೊಳ್ಳುತ್ತದೆ ಎಂದು ಅಚಾರಣೆ ಕುರಿತು ವಿವರಣೆ ನೀಡಿದರು.
ತದ ನಂತರ ಮಾತನಾಡಿದ ಕಾರ್ಯಕ್ರಮದ ಅಥಿತಿಗಳಾದ ಅಖಂಡೇಶ್ವರ ಹಿರೇಮಠರವರು ಕರ್ನಾಟಕದಲ್ಲಿ ದಸರಾ ಇತಿಹಾಸವು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಶ್ರೀಕೃಷ್ಣದೇವರಾಯನಿಂದ ಆರಂಭಗೊಂಡು, ಮೈಸೂರು ಒಡೆಯರ ಆಳ್ವಿಕೆಯೊಂದಿಗೆ ಮೈಸೂರು ದಸರಾವಾಗಿ , ಚಿನ್ನದ ಅಂಬಾರಿ ಹೊತ್ತ ಚಾಮುಂಡೇಶ್ವರಿ ಮೆರವಣಿಗೆ, ಜಂಬೂಸವಾರಿ, ಮತ್ತು ಬನ್ನಿ ಮಂಟಪದಲ್ಲಿ ಶಮಿ ಪೂಜೆಯೊಂದಿಗೆ ವೈಭವಯುತವಾಗಿ ಬೆಳೆಯಿತು. ಇದು ದುರ್ಗಾ ಪೂಜೆಯೊಂದಿಗೆ ಸಂಬಂಧ ಹೊಂದಿದ ನವರಾತ್ರಿ ಹಬ್ಬದ ಒಂದು ಭಾಗವಾಗಿದ್ದು, ವಿಜಯದಶಮಿ ದಿನದಂದು ಒಂಬತ್ತು ದಿನಗಳ ಪೂಜೆಯ ನಂತರ ಅಂತಿಮ ವಿಜಯವನ್ನು ಸೂಚಿಸುತ್ತದೆ ಎಂದು ತಿಳಿಸಿದರು.
ಶಮೀ ಮರಕ್ಕೆ ಪೂಜೆ ಸಲ್ಲಿಸಿ
ಹಿರಿ-ಕಿರಿಯರೆಲ್ಲಾ ಪರಸ್ಪರ ಬನ್ನಿ ಹಂಚಿಕೊಂಡು ‘ಬನ್ನಿ ತಗೊಂಡು ಬಂಗಾರದಂಗ ಇರೋಣ..’ ಎಂದು ಹರಸುತ್ತ, ಆಶಿಸುತ್ತ ದಸರಾ ಮಹೋತ್ಸವಕ್ಕೆ ತೆರೆ ಎಳೆದರು.
ಈ ಶಮೀವೃಕ್ಷ ಪೂಜೆಯಲ್ಲಿ ಎಲ್ಲಾ ವೀರಶೈವ ಲಿಂಗಾಯತ ಸಮಾಜ ಹಿರಿ ಕಿರಿಯರು ಭಾಗವಹಿಸಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















