ಬಾಗಲಕೋಟೆ/ ಹುನಗುಂದ : ಸತತವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನಾದ್ಯಂತ ಅತಿವೃಷ್ಟಿ ಸಂಭವಿಸಿ ಈರುಳ್ಳಿ ಬೆಳೆ ಹಾಳಾಗಿ ನೆಲಕಚ್ಚಿ ಹೋಗಿದೆ. ಅಲ್ಪಸ್ವಲ್ಪ ರೈತರ ಕೈ ಸೇರಿದ ಈರುಳ್ಳಿಯನ್ನು ಸರ್ಕಾರ ತಕ್ಷಣವೇ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಒತ್ತಾಯಿಸಿ ತಾಲೂಕಿನ ರೈತರು ತಹಶೀಲ್ದಾರ ಕಚೇರಿ ಮುಂದೆ ಪ್ರತಿಭಟಿಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರತಿಭಟನಾ ನಿರತ ರೈತ ಮುಖಂಡರಾದ ಬಿ.ಎಸ್.ಬಡ್ಡಿ ಮತ್ತು ಮಹಾಂತೇಶ ನಾಡಗೌಡರ ಮಾತನಾಡಿ ತಾಲೂಕಿನ ರೈತರು ಸಾಲ ಮಾಡಿ ಈರುಳ್ಳಿ ಬಿತ್ತನೆ ಮಾಡಿ ಉತ್ತಮ ಫಸಲು ಬರುವ ಮುಂಚೆ ಬಿಟ್ಟೂಬಿಡದೇ ಸುರಿದ ಮಳೆಗೆ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅತಿವೃಷ್ಟಿ ಹಸಿಬರದಿಂದ ಈರುಳ್ಳಿ ಬೆಳೆ ನೀರಲ್ಲಿ ಕೊಳೆತು ಅಲ್ಪಸ್ವಲ್ಪ ಬೆಳೆ ರೈತನಿಗೆ ಕೈ ಸೇರಿದರೂ ಕೂಡಾ ಮಾರುಕಟ್ಟೆಯಲ್ಲಿ ಈರುಳ್ಳಿಯ ದರ ಕುಸಿದು ಹೋಗಿ ರೈತರು ಮತ್ತಷ್ಟು ಸಂಕಷ್ಟ ಸ್ಥಿತಿ ಅನುಭವಿಸುವಂತಾಗಿದೆ. ಇದರಿಂದ ಈರುಳ್ಳಿಗೆ ರೈತರು ಖರ್ಚು ಮಾಡಿರುವ ಹಣ ಬರದಂತಾಗಿದೆ. ತಕ್ಷಣ ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಬಲ ಬೆಲೆಯಲ್ಲಿ ಈರುಳ್ಳಿಯನ್ನು ಪ್ರತಿ ಕ್ವಿಂಟಲ್ಗೆ ಕನಿಷ್ಠ ೫ ಸಾವಿರದಂತೆ ಪ್ರತಿ ಎಕರೆಗೆ ೬೦ ಕ್ವಿಂಟಾಲ್ ಈರುಳ್ಳಿಯನ್ನು ಖರೀದಿಸಬೇಕು. ಅದರ ಜೊತೆಗೆ ಈರುಳ್ಳಿ ಬೆಳೆ ಹಾನಿ ಪರಿಹಾರವನ್ನು ಕೂಡಾ ತಕ್ಷಣವೇ ಘೊಷಿಸಿ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಶಿಕಾಂತ ತಿಮ್ಮಾಪೂರ, ಸಂಗಮೇಶ ಆನೆಹೊಸೂರ, ಮಹಾಂತೇಶ ಹಳಪೇಟಿ, ಬಸಪ್ಪ ಜಗ್ನ, ರೆಹಮಾನಸಾಬ್ ಮುಲ್ಲಾ, ಶ್ರೀಕೃಷ್ಣ ಜಾಲಿಹಾಳ, ಕುಮಾರಸ್ವಾಮಿ ಮಠ, ನೀಲಪ್ಪ ವಾಲಿಕಾರ, ಸಂಗಪ್ಪ ಚಿಕ್ಕೋಡಿ, ಮುದಕಪ್ಪ ಬೇನಾಳ, ಗಿರಮಲಪ್ಪ ಹಳಪೇಟಿ, ಮಹಾಂತೇಶ್ ವಾಲಿಕಾರ, ಪ್ರಕಾಶ ಹೋಳಿ ಸೇರಿದಂತೆ ಅನೇಕರು ಇದ್ದರು.
- ಕರುನಾಡ ಕಂದ



















