
ಬಳ್ಳಾರಿ / ಕಂಪ್ಲಿ : ಓದುವ ಹವ್ಯಾಸಗಳನ್ನು ರೂಢಿಸಿಕೊಂಡು, ಉನ್ನತ ಶಿಕ್ಷಣದೊಂದಿಗೆ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಜಾಗೃತಿವಹಿಸಬೇಕು ಎಂದು ಪ್ರಾಚಾರ್ಯ ಡಾ.ಶ್ರೀನಿವಾಸ್ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ 2025-26ನೇ ಸಾಲಿನ ಗ್ರಂಥ ಗ್ರಂಥಾಲಯ ಪರಿಚಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಮಾನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಒಳ್ಳೆಯ ಶಿಕ್ಷಣದೊಂದಿಗೆ ಸರ್ಕಾರಿ ಹುದ್ದೆಗಳನ್ನು ಪಡೆದು, ಪೋಷಕರ ಆಸೆ ಈಡೇರಿಸಲು ಮುಂದಾಗಬೇಕು. ಯಾವುದೇ ಶಿಕ್ಷಣ ಸಂಸ್ಥೆಯ ಗ್ರಂಥಾಲಯವು ಅವಿಭಾಜ್ಯ ಅಂಗವಾಗಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದು ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕು ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಬಾಲಾಜಿ ಎಂಪಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ಗೀಳಿನಿಂದ ಹೊರಬಂದು ಪುಸ್ತಕಗಳ ನಂಟುಬೆಳೆಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಲು ಕರೆ ನೀಡಿದರು.
ಗ್ರಂಥಪಾಲಕ ಎ. ಜಿ. ವೀರಭದ್ರಪ್ಪ ಅವರು ಮಾತನಾಡಿ, ಕಾಲೇಜಿನಿಂದ ಗ್ರಂಥಾಲಯದಲ್ಲಿ ಲಭ್ಯವಿರುವ ಸೇವೆಗಳು ಹಾಗೂ ಸವಲತ್ತುಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಚಂದ್ರಶೇಖರ, ಡಾ.ಅನ್ನಪೂರ್ಣ ಗುಡದೂರು, ರಾಜ್ಮಾ ಟಿ.ಎಂ.ಅರ್. ಕಲೀಲ್, ಅಧೀಕ್ಷಕಿ ನಾಗಮ್ಮ, ಸಹಾಯಕ ಸಿದ್ಧರೂಢ ಬಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















