ಬಾಗಲಕೋಟೆ/ ಹುನಗುಂದ: ವಿಭಿನ್ನ ಆಲೋಚನೆ ಹೊಂದಿ ಸಾಮಾನ್ಯ ಮನುಷ್ಯರ ಜೀವನ ಕ್ರಮಕ್ಕಿಂತ ಬೇರೆಯದೆ ಆದ ಸಮಾಜ ಸುಧಾರಣೆಗೆ ಆದ್ಯತೆ ನೀಡುವಂತಹವರು ಶರಣರು, ಅಂಥವರ ಸಾಲಿಗೆ ಅಥಣಿ ಮುರುಘೇಂದ್ರ ಶಿವಯೋಗಿಗಳು ಸೇರುತ್ತಾರೆ ಎಂದು, ಚಿತ್ತರಗಿಯ ಗುರುಮಹಾಂತ ಶ್ರೀಗಳು ಹೇಳಿದರು.
ಹುನಗುಂದ ತಾಲೂಕಿನ ಚಿತ್ತರಗಿಯ ಪರಮ ತಪಸ್ವಿ ಲಿಂಗೈಕ್ಯ ಮಹಾಂತ ಶಿವಯೋಗಿಗಳವರ ಈ ವರ್ಷದ ಜಾತ್ರಾ ಮಹೋತ್ಸವದ ನಿಮಿತ್ಯ ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಚಿತ್ತರಗಿಯ ಮೂಲ ಮಠದಲ್ಲಿ ಆಥಣಿ ಮುರುಕೇಂದ್ರ ಶಿವಯೋಗಿಗಳ ಪುರಾಣ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿವಯೋಗಿಗಳವರ ಬದುಕು ಬಸವಮಯ ಆಗಿತ್ತು. ಅವರ ಜೀವನ ನೋಡಿದರೆ ಅಲ್ಲಿ ಬಸವತತ್ವದ ಅನುಷ್ಠಾನವೇ ಗೋಚರಿಸುತ್ತಿತ್ತು. ಅಷ್ಟರ ಮಟ್ಟಿಗೆ ಬಸವಣ್ಣನವರ ವಿಚಾರಧಾರೆಗಳನ್ನು ಅಪ್ಪಿಕೊಂಡಿದ್ದರು ಎಂದರು. ಸಜ್ಜು ಸಮತಾವಾದ ಮತ್ತು ಜಾತ್ಯಾತೀತ ನಿಲುವಿನ ವಿಚಾರವಾದಿಯಾಗಿದ್ದಶ್ರೀಗಳು, ಹರ್ಡೇಕರ್ ಮಂಜಪ್ಪನಂಥವರನ್ನು ಸಾಮೀಪ್ಯಕ್ಕೆ ಕರೆದುಕೊಂಡು ಅವರು ಬಸವತತ್ವ ಪರಿಪಾಲನೆಗೆ ಪ್ರೇರಣೆಯಾದರು ಎಂದು ತಿಳಿಸಿದರು. ದೂರದೃಷ್ಟಿ, ಚಿಕಿತ್ಸಕತನ ಶಿವಯೋಗಿಗಳಲ್ಲಿತ್ತು ಭೌತಿಕ ವಿಚಾರಗಳತ್ತ ಗಮನಹರಿಸದೆ ಬೌದ್ಧಿಕ ವಿಚಾರಕ್ಕೆ ಮಹತ್ವ ಕೊಟ್ಟವರು, ದಯೆ, ಮಾನವೀಯತೆ ಅವರ ಮೇರುಗುಣಗಳಾಗಿದ್ದವೆಂದು ಅವರ ಬಹುಮುಖ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ವಿವರಿಸಿದರು. ಅವರು, ಬಸವಾದಿ ಶಿವಶರಣರ ಜೀವನ ಮೌಲ್ಯವನ್ನು ಅರ್ಥ ಮಾಡಿಕೊಂಡಿದ್ದ ಶಿವಯೋಗಿಗಳು ಅದರಂತೆ ನಡೆದು ಮಾದರಿ ಜೀವನ ನಡೆಸಿದರು. ಅವರ ಬದುಕು ತೆರೆದ ಪುಸ್ತಕದಂತೆ ಇತ್ತು ಎಂದು ನುಡಿದರು. ಮುಂದುವರೆದು ಚಿತ್ರಗಿಯ ವಿಜಯ ಮಹಾಂತ ಶಿವಯೋಗಿಗಳು ಹಾಗೂ ಅಥಣಿಯ ಮುರುಗೇಂದ್ರ ಶಿವಯೋಗಿಗಳು ಸಮಕಾಲೀನರಾಗಿದ್ದು ಇಬ್ಬರು ಬಸವ ತತ್ವವನ್ನು ಮೈಗೂಡಿಸಿಕೊಂಡವರಾಗಿದ್ದರು ಎಂದರಲ್ಲದೆ ಬಸವ ತತ್ವವನ್ನು ಉಚ್ರಾಯ ಸ್ಥಿತಿಗೆ ತಂದಿದ್ದಾರೆಂದು ವಿವರಿಸಿದರು.
ಗದುಗಿನ ವೀರೇಶ್ವರ ಪುಣ್ಯಾಶ್ರಮದ
ಶಿವಕುಮಾರ ಶಾಸ್ತ್ರಿಗಳು ಹಿರೇಮಠ ಮೊದಲ ದಿನದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಮುರುಘೇಂದ್ರ ಮಹಾಶಿವಯೋಗಿಗಳು ನುಡಿದಂತೆ ನಡೆದು ಸಮಾಜಕ್ಕೆ ಮಾದರಿಯಾದರು. ೨೦ನೇ ಶತಮಾನದ ಅಲ್ಲಮಪ್ರಭುಗಳೆಂದರೆ ಮುರುಘೇಂದ್ರ ಶಿವಯೋಗಿಗಳು. ಜನಸಾಮಾನ್ಯರಿಗೆ ಸನ್ಮಾರ್ಗ ತೋರಿಸಿ ಅವರ ನೋವಿಗೆ ಸ್ಪಂದಿಸಿ, ಸೇವಾ ಕಾರ್ಯ ಮಾಡಿ ನಿಜ ಶಿವಾರಾಧನೆ ಮಾಡಿದ ಶಿವಯೋಗಿಗಳು. ನಮಗೆಲ್ಲಾ ಪುಣ್ಯದ ಕಣಜವನ್ನೆ ಬಿಟ್ಟಿದ್ದಾರೆ. ಅಂತಹವರು ನೀಡಿದ ಜ್ಞಾನದ ನುಡಿಗಳಿಂದ ಸನ್ಮಾರ್ಗದಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದರು. ಆಳಂದ ತಾಲೂಕಿನ ಶಾಬಾದಿನ ಅಪ್ಪಣ್ಣ ಪೀಠದ ರಾಜಶೇಖರ್ ಸ್ವಾಮಿಗಳು ಯಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶಿವಕುಮಾರ ಹಿರೇಮಠ ಸೇವಾ ಸಮಿತಿಯ ಕಾರ್ಯಧ್ಯಕ್ಷ ಕುಮಾರ ಹಿರೇಮಠ ಚಿತ್ತರಗಿ ಗ್ರಾಮದ ಹಿರಿಯರಾದ ರಾಮಣ್ಣ ಕಾಮ ಗೌಡಪ್ಪ ಬೇವೂರ ಶಿವು ಗಾದಿ ಬಸಪ್ಪ ಬೇವೂರ ಯಂಕಣ್ಣ ಬೇವೂರ ಸಂಗಪ್ಪ ಕಾಮ , ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕುಮಾರಿ ಸೀತಮ್ಮ ಕಾಮ ಕಾರ್ಯಕ್ರಮವನ್ನು ಉದ್ಘಾಟಿಸಿದರು ಸಂಗಣ್ಣ ನಿಂಗನಗೌಡ್ರು ನಿರೂಪಿಸಿದರು. ಬಸವರಾಜ ಬೇವೂರ ವಂದಿಸಿದರು, ಇದೇ ಸಂದರ್ಭದಲ್ಲಿ ಪುರಾಣ ಪ್ರವಚನದ ಮೊದಲ ದಿನ ಪ್ರಾರಂಭೋತ್ಸವಕ್ಕೆ ಆಗಮಿಸಿದ್ದ ಶಿವಕುಮಾರ ಶಾಸ್ತ್ರಿಗಳನ್ನು ಶ್ರೀ ಮಠದ ವತಿಯಿಂದ ಸನ್ಮಾನಿಸಲಾಯಿತು.
- ಕರುನಾಡ ಕಂದ




















