
ಗಾಜರಕೋಟ: ವಾಸ್ತುಶಿಲ್ಪದ ಆಕರ್ಷಕ ‘ಆಸ್ಥಾನ’
ಗುರುಮಠಕಲ್: ತಾಲೂಕಿನ ಗಾಜರಕೋಟ ಗ್ರಾಮದ ಐದು ಶತಮಾನಗಳಷ್ಟು ಹಳೆಯ ರಾಚಪಯ್ಯ-ಕಡ್ಲಪ್ಪಯ್ಯ ಆಸ್ಥಾನವು (ದೇವಸ್ಥಾನ) ಗುರು-ಶಿಷ್ಯ ಪರಂಪರೆಯ ಪ್ರತೀಕವಾಗಿ ಎದ್ದುನಿಂತ ಶಿಲ್ಪಕಲೆಯ ದೃಶ್ಯಕಾವ್ಯವಾಗಿ ನೋಡುಗರ ಮನವನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಗುರು-ಶಿಷ್ಯ ಸಂಬಂಧದ ಪ್ರತೀಕ : ಸುಮಾರು ಐದು ಶತಮಾನಗಳ ಹಿಂದೆ ಚಿಂಚೊಳ್ಳಿ ತಾಲೂಕಿನ ಮಂಗಲಿಗಿ ಎನ್ನುವ ಗ್ರಾಮದಿಂದ ರಾಚಪ್ಪಯ್ಯ ಎನ್ನುವ ಶರಣರೊಬ್ಬರು ತಮ್ಮ ಶಿಷ್ಯನಾದ ಕಡ್ಲಪ್ಪಯ್ಯನೊಡನೆ ಪಾಳು ಬಿದ್ದಂತಿದ್ದ ಗಾಜರಕೋಟ ಗ್ರಾಮಕ್ಕೆ ಆಗಮಿಸಿದರು.
ಹಾಳು ಕೊಂಪೆಯಂತಿದ್ದ ಈ ಗ್ರಾಮದಲ್ಲಿನ ಜನರು ಹಾಗೂ ರೈತರಲ್ಲಿ ಒಂದಾಗಿ ಬೆರೆತ ರಾಚಪ್ಪಯ್ಯ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸುತ್ತಾ ಗ್ರಾಮಸ್ಥರಿಗೆ ಅಯ್ಯನಾದ (ತಂದೆ) ಗ್ರಾಮವು ಕೆಲದಿನಗಳಲ್ಲೇ ಲಕ್ಷಣವಾಗಿ ರೂಪುಗೊಂಡು ಶರಣ ರಾಚಪಯ್ಯನ ಕೀರ್ತಿಯನ್ನು ಹೆಚ್ಚಿಸಿತು. ರಾಚಪ್ಪಯ್ಯನ ಶಿಷ್ಯ ಕಡ್ಲಪ್ಪಯ್ಯ ತನ್ನ ಗುರುವಿಗಾಗಿ ಒಂದು ವ್ಯವಸ್ಥಿತ ಕಟ್ಟಡವನ್ನು ನಿರ್ಮಿಸಲು ಯೋಚಿಸಿದ ಪರಿಣಾಮವಾಗಿ ಇಲ್ಲಿ ಒಂದು ಅದ್ಬುತ ಶಿಲ್ಪಕಲೆಯ ಕಟ್ಟಡ ನಿರ್ಮಾಣವಾಯಿತು ಎನ್ನುತ್ತಾರೆ ಬಸಿರೆಡ್ಡಿ ಗುನ್ನಿ.
ಗುರು-ಶಿಷ್ಯ ಪರಂಪರೆಯ ಈ ಕಟ್ಟಡದಲ್ಲಿ ಗುರು-ಶಿಷ್ಯರಿಬ್ಬರ ಗದ್ದುಗೆಗಳನ್ನೂ ಕಾಣಬಹುದಾಗಿದ್ದು ಜನರು ಈ ದೇವಸ್ಥಾನವನ್ನು ರಾಚಪ್ಪಯ್ಯ ಹಾಗೂ ಕಡ್ಲಪ್ಪಯ್ಯರ ಆಸ್ತಾನವೆಂದೇ ಕರೆಯಲು ಆರಂಭಿಸಿದರು. ಹೀಗೆ ಮುಂದುವರೆದು ಇಂದಿಗೂ ಗುರು ಶಿಷ್ಯರಿಬ್ಬರ ಹೆಸರನ್ನು ಪಡೆದು ರಾಚಪ್ಪಯ್ಯ ಕಡ್ಲಪ್ಪಯ್ಯ ದೇವಸ್ಥಾನವಾಗಿದೆ ಎನ್ನುವುದು ಇಲ್ಲಿನ ಬಸ್ಸಯ್ಯ ಸ್ವಾಮಿ ಪತ್ರಿಮಠ ಅವರ ವಿವರಣೆ.
ಆಕರ್ಷಕ ಶಿಲ್ಪಕಲೆ : ದೇವಸ್ಥಾನದ ಮುಖ್ಯ ದ್ವಾರ ಸುಮಾರು 12 ರಿಂದ 15 ಅಡಿಗಳ ಎತ್ತರ 5 ಅಡಿಗಳಷ್ಟು ವಿಶಾಲವಾಗಿದ್ದು, ಇದು ದೇವಳದ ಅತ್ಯಂತ ಆಕರ್ಷಣೀಯ ಭಾಗವೆನ್ನಬಹುದು. ದ್ವಾರವು ಶಿಲ್ಪಿಯ ಕಲಾ ಶ್ರೇಷ್ಟತೆಯ ಕುರುಹಾಗಿದ್ದು ನೋಡುಗರ ಮನಸೆಳೆಯುತ್ತದೆ. ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳಿಂದ ಕೆತ್ತಲ್ಪಟ್ಟ ಮುಖ್ಯದ್ವಾರವು ಶಿಲ್ಪಯ ಕಲಾವಂತಿಕೆಯ ಸಾಕ್ಷಿಯಾಗಿದೆ.
ದೇವಸ್ಥಾನದ ಪ್ರಾಂಗಣದಲ್ಲಿ ನಿರ್ಮಿಸಿದ ನೀರಿನ ಕಾರಂಜಿಯು ಅಂದಿನ ಕಾಲದ ಶಿಲ್ಪಕಾರರ ಹಾಗೂ ಕಟ್ಟಡ ನಿರ್ಮಾಣಕಾರರ ಕೌಶಲ್ಯದ ಪ್ರತಿಬಿಂಬವೇ ಸರಿ. ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಮೇಲಿನ ಅಂತಸ್ಥಿಗೆ ಹತ್ತಲು ಮೆಟ್ಟಿಲುಗಳಿಂದ ಸುರಂಗದಂತಹ ಅತ್ಯಂತ ಕಿರಿದಾದ ಮಾರ್ಗದ ಮೂಲಕ ಮೇಲಿನ ಅಂತಸ್ತಿಗೆ ಹತ್ತಿ ಅಲ್ಲಿ ಬಂಡೆಗಳಿಂದ ನಿರ್ಮಿಸಿದ ತೊಟ್ಟಿಯಲ್ಲಿ ನೀರನ್ನು ತುಂಬಿದರೆ ಕಾರಂಜಿಯಿಂದ ನೀರು ಚಿಮ್ಮುವಂತೆ ಅದನ್ನು ನಿರ್ಮಿಸಲಾಗಿದೆ.
ದೇವಸ್ಥಾನದಲ್ಲಿ ಸುಮಾರು 28 ಇಂಡೋ ಪರ್ಷಿಯನ್ ಮಾದರಿಯ ಕಮಾನುಗಳನ್ನು ನಿರ್ಮಿಸಲಾಗಿದೆ, ಒಳಾಂಗಣದ ಗೋಡೆಗಳ ಮೇಲೆ ದಶಾವತಾರದ ಚಿತ್ರಗಳು ಸೇರಿದಂತೆ ಹಲವು ಕೆತ್ತನೆಗಳಿಂದ ಕೂಡಿದೆ.
ದೇವಳದ ಮುಂದೆ ಹಾಗೂ ಬಲ ಬದಿಗೆ ಎರಡು ಬಾವಿಗಳನ್ನು ನಿರ್ಮಿಸಲಾಗಿದೆ. ಮುಂದುಗಡೆ ನಿರ್ಮಿಸಿರುವ ದೀಪಸ್ಥಂಭವು ವರ್ಷದಲ್ಲಿ ಎರಡುಬಾರಿ ಜರುಗುವ ದೀಪಾರಾಧನೆಯ ಸಮಯದಲ್ಲಿ ಆಕರ್ಷಿಸುತ್ತದೆ.
ವಿದ್ಯಾಕೇಂದ್ರ: ನಿರ್ಮಾಣದ ಕಾಲದಿಂದಲೂ ಇದು ಕೇವಲ ಆಧ್ಯಾತ್ಮಿಕ ಕೇಂದ್ರವಾಗಿರದೆ ವಿದ್ಯಾಕೇಂದ್ರವೂ ಆಗಿದೆ ಹಿಂದೆ ಕೃಷಿ ಚಟುವಟಿಕೆಗಳನ್ನು ಕಲಿಸಲಾಗುತಿತ್ತು, ಗ್ರಾಮದಲ್ಲಿ ಮೊದಲ ಬಾರಿಗೆ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭವಾದಾಗ ನಂತರ ಸರ್ಕಾರಿ ಪ್ರೌಡ ಶಾಲೆಯ ಕಟ್ಟಡ ನಿರ್ಮಾಣ ವಾಗುವವರೆಗೂ ಇದೀಗ ರಾಚಪ್ಪಯ್ಯ ಕಡ್ಲಪ್ಪಯ್ಯ ಶಿಕ್ಷಣ ಸಂಸ್ಥೆಯ ಶಾಲೆಯ ಕಟ್ಟಡವಾಗಿ ನಿರಂತರವಾಗಿ ಜ್ಞಾನ ದಾಸೋಹನ್ನು ಮಾಡುತ್ತಿದೆ ಎಂದು ಬಸವರಾಜ ಪರಡಿ ಯವರು ತಿಳಿಸುತ್ತಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















