
ಬೆಂಗಳೂರು: ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಪುಟಾಣಿಗಳಾದ ಚಿರಂಜೀವಿ ಆರ್ಯ ಮತ್ತು ಕುಮಾರಿ ಗಾರ್ಗಿ ನೆರೆದವರ ಮನಮುಟ್ಟುವಂತೆ ವಾಚಿಸಿ ಮತ್ತು ವ್ಯಾಖ್ಯಾನ ಮಾಡಿದ್ದು, ಮಾತಿನ ಮನೆಯ 114ನೆಯ ಕಾರ್ಯಕ್ರಮದ ವೈಶಿಷ್ಠ್ಯವಾಗಿತ್ತು.

ಸುಮಾರು ಒಂದು ಗಂಟೆಯ ಕಾಲ ನಡೆದ ಈ ಪುಟಾಣಿಗಳ ವಾಗ್ಝರಿಗೆ ಸಭಿಕರು ತಲೆದೂಗಿದರು.
ಕುಮಾರಿ ಗಾರ್ಗಿ ಮತ್ತು ಚಿರಂಜೀವಿ ಆರ್ಯಾರವರ ಪ್ರತಿಭೆ ಕುರಿತು ಮಾತನಾಡಿ ಶ್ರೀ ಸತ್ಯಪ್ರಸಾದ್ ಶ್ರೀ ಅಜಿತ್ ಕಾರಂತ ಇಬ್ಬರನ್ನೂ ಮುಕ್ತ ಕಂಠದಿಂದ ಪ್ರಶಂಶಿಸಿದರು.

ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜಿಸುತ್ತಿರುವ ಮಾತಿನ ಮನೆಯ ಸಂಸ್ಥಾಪಕ ಶ್ರೀ ರಾ.ಸು. ವೆಂಕಟೇಶ ಅವರನ್ನು ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಅಭಿನಂದಿಸಿದರಲ್ಲದೆ ಇಷ್ಟು ಎಳೆಯ ಪ್ರಾಯದಲ್ಲಿ ಕ್ರಮಬದ್ಧವಾಗಿ ವಿವರಣೆ ನೀಡುವ ಮಕ್ಕಳಿಬ್ಬರ ಜಾಣ್ಮೆಗೆ ವಿಸ್ಮಯಗೊಂಡಿದ್ದೇನೆ ಎಂದು ತಿಳಿಸಿದರು.
ಆರಂಭದಲ್ಲಿ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ, ಮಾತಿನ ಮನೆಯ ರಾ. ಸು. ವೆಂಕಟೇಶ ಅವರ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳೊಂದಿಗೆ ನಡೆದು, ಕಾರ್ಯಕ್ರಮದ ಕೊನೆಯಲ್ಲಿ ಈರ್ವರನ್ನೂ ಮಾತಿನ ಮನೆಯ ಪರವಾಗಿ ಗೌರವಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶೈಲಸುತೆ ರಂಜಿತಾ ನಿರ್ವಹಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















