ಕೊಪ್ಪಳ, ನವೆಂಬರ್ 1, : ಎಲ್ಲರೂ ಭಾಷೆ ಪ್ರೇಮ ಬೆಳಸಿಕೊಳ್ಳಿ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲಿ ಕನ್ನಡ ಸಂಘಟನೆಗಳನ್ನು ರಚಿಸಿಕೊಂಡು ರಾಜ್ಯೋತ್ಸವ ಆಚರಣೆ ಮಾಡುತ್ತಾ ಕನ್ನಡ ಭಾಷೆಯ ಪ್ರೇಮವನ್ನು ಮೆರೆಯುತ್ತಾರೆ. ಕನ್ನಡದಲ್ಲಿ ನೊಬೆಲ್ ಪ್ರಶಸ್ತಿಗೆ ಅರ್ಹವಾದ ಸಾಹಿತ್ಯ ಕನ್ನಡದಲ್ಲಿ ಇದೆ. ಸರಕಾರವು ಕನ್ನಡ ಶಾಲೆಗಳಿಗೆ ಉತ್ತೇಜನ ನೀಡುತ್ತಿದೆ. ಎಲ್ಲರೂ ಕನ್ನಡ ಸಾಹಿತ್ಯವನ್ನು ಓದಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಮುಖ್ಯಸ್ಥ ಡಾ. ಗವಿಸಿದ್ದಪ್ಪ ಮುತ್ತಾಳ ಅವರು ಮಾತನಾಡಿ ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ ಅದೊಂದು ಜೀವನ ಕ್ರಮವಾಗಿದೆ. ಕನ್ನಡ ಭಾಷೆ ಹೋರಾಟಗಾರರ ಆದರ್ಶಗಳನ್ನು, ಚಿಂತನೆಗಳನ್ನು ಜೀವನದಲ್ಲಿ ನಾವು ಅಳವಡಿಸಿಕೊಳ್ಳೋಣ. ತಮಿಳುನಾಡಿನಲ್ಲಿ ಹೆಚ್ಚು ಭಾಷಾಭಿಮಾನ ಇದೆ. ಅವರ ರೀತಿ ನಾವೆಲ್ಲರೂ ಭಾಷ ಪ್ರೇಮವನ್ನು ಬೆಳಸಿಕೊಳ್ಳೋಣ.
ಕನ್ನಡ ಬಹಳ ಮೌಲಿಕ ಭಾಷೆಯಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಕನ್ನಡ ಬಹಳ ಪ್ರಾಚಿನ ಬಾಷೆ ಎಂಬುದು ಹಲ್ಮಿಡಿ ಶಾಸನ ನಿದರ್ಶನವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ಮುಖ್ಯಸ್ಥ ವಿಠೋಬ ಎಸ್ ಮಾತನಾಡಿ ಕನ್ನಡ ಸಾಹಿತ್ಯದಲ್ಲಿ ದ. ರಾ. ಬೇಂದ್ರೆ, ಕುವೆಂಪು, ಸಿದ್ದಲಿಂಗಯ್ಯ ಸೇರಿದಂತೆ ಹಲವಾರು ಸಾಹಿತಿಗಳು ಕನ್ನಡಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಕನ್ನಡಕ್ಕೆ ಸೌಹಾರ್ದತೆ ಬೆಳೆಸುವ ಶಕ್ತಿ ಇದೆ. ಕನ್ನಡಗರು ಬಹು ಭಾಷೆ ಪ್ರೀತಿಸುವ ಅಭಿಮಾನಿಗಳಾಗಿದ್ದಾರೆ. ಸಿದ್ದಲಿಂಗಯ್ಯ ಹಾಡು, ಕಥೆ, ಕವನ, ಪುಸ್ತಕ, ಲೇಖನ, ನಾಟಕಗಳ ದಲಿತ ಸಾಹಿತ್ಯದ ಮುಖಾಂತರ ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯಕ್ಕೆ ಶಕ್ತಿ ತುಂಬಿದರು. ಕನ್ನಡಕ್ಕೆ ಎಂಟು ಜ್ಞಾನ ಪೀಠ ಪ್ರಸಸ್ತಿಗಳು ಬಂದಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಹುಲಿಗೆಮ್ಮ, ಡಾ. ಮಲ್ಲಿಕಾರ್ಜುನ, ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ, ಡಾ. ಅಶೋಕ ಕುಮಾರ್, ಹನುಮಪ್ಪ ಮೇಟಿ, ಡಾ. ಪ್ರಕಾಶ್ ಹುಲ್ಲೂರ್, ಶಿವಪ್ಪ ಬಡಿಗೇರ್, ಕಲ್ಲಯ್ಯ ಪೂಜಾರ್, ನಿಂಗಪ್ಪ, ಶ್ರೀ ಕಾಂತ್ ಕಾಲೇಜಿನ ಭೋಧಕ ಮತ್ತು ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹುಲಿಗೆಮ್ಮ ನಿರೂಪಿಸಿದರು. ಡಾ. ನರಸಿಂಹ ವಂದಿಸಿದರು.
- ಕರುನಾಡ ಕಂದ ಪತ್ರಿಕೆ



















