
ಬಳ್ಳಾರಿ / ಕಂಪ್ಲಿ: ಮೂರ್ತಿ ಸಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಕಲಿಕಾ ಹಂತದಲ್ಲಿ ಯೋಗಪಟು ಕಂಪ್ಲಿಯ ಎಸ್. ಪೂಜಾ ಎಂಬ ವಿದ್ಯಾರ್ಥಿನಿ ಯೋಗ ಸೇರಿದಂತೆ ನಾನಾ ರಂಗದಲ್ಲಿ ಸಾಧನೆ ಮಾಡುವ ಮೂಲಕ ಸೈ ಎನ್ನಿಸಿಕೊಂಡಿದ್ದಾಳೆ.

ಕಂಪ್ಲಿಯ 16ನೇ ವಾರ್ಡಿನಲ್ಲಿ ನೆಲೆಸಿರುವ ಎಸ್. ಶಿವಲಿಂಗಮ್ಮ ಯಮನಪ್ಪ ದಂಪತಿಯ ದ್ವಿತೀಯ ಸುಪತ್ರಿ ಪೂಜಾ ಎಂಬ ಪುಟ್ಟ ವಿದ್ಯಾರ್ಥಿನಿ ಮಕ್ಕಳಂತೆ ಇದ್ದರೂ, ಸಾಧನೆ ಮಾತ್ರ ಶಿಖರದಂತಿದೆ.
ಪ್ರತಿಭೆಗೆ ಬಡತನ ಸಾಟಿ ಇಲ್ಲ ಎಂಬಂತೆ ಮನೆಯಲ್ಲಿ ಬಡತನವಿದ್ದರೂ ಲೆಕ್ಕಿಸದೇ, ಇಚ್ಚಾಶಕ್ತಿಯೊಂದಿಗೆ ಶಾಲೆಯ ಕಲಿತಾ ಹಂತದಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಯೋಗ ಸೇರಿದಂತೆ ಇನ್ನಿತರೆ ಕ್ಷೇತ್ರದಲ್ಲಿಯೂ ನಮ್ಮದೇ ಸ್ಥಾನ ಇರಬೇಕೆಂಬ ಹೆಬ್ಬಯಕೆಯೊಂದಿಗೆ ಸಾಧನೆಯ ಮೆಟ್ಟಿಲು ಏರುತ್ತಿದ್ದಾಳೆ.
ಕಂಪ್ಲಿ ನಿವಾಸಿಯಾದರೂ ಹೊಸಪೇಟೆಯ ಎ. ಪಿ. ಜೆ. ಅಬ್ದುಲ್ ಕಲಾಂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಇಲ್ಲಿನ ಕಲಿಕೆಯ ಜೊತೆ ಜೊತೆಗೆ ಯೋಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ. ಈ ಸಾಧನೆಯೊಂದಿಗೆ ಕಂಪ್ಲಿಗೆ ಕೀರ್ತಿ ತರುವ ಜೊತೆಗೆ ಶಿಕ್ಷಣ ಮತ್ತು ಯೋಗಪಟುಗಳ ಮನ ಗೆದ್ದಿದ್ದಾಳೆ.
2022ರಲ್ಲಿ ಬಳ್ಳಾರಿ ನಗರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಸಾಧನೆಯ ಪಟಾಕಿ ಸಿಡಿಸಿದ್ದಾಳೆ. ನಂತರ 2023ರಲ್ಲಿ ಕಲಬುರ್ಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಯೋಗದಲ್ಲಿ ಪ್ರಥಮ ಸ್ಥಾನದ ಸಾಧನೆ ಮಾಡಿದ್ದಾಳೆ. 2025ರ ಮೈಸೂರು ದಸರಾ (ಸಿ. ಎಂ. ಕಪ್) ಕ್ರೀಡಾಕೂಟದ ಯೋಗದಲ್ಲಿ ಅದ್ವಿತೀಯ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ ಕೀರ್ತಿ ಪತಾಕಿ ಹಾರಿಸಿದ್ದಾಳೆ. ಹೀಗೆ ಹಲವು ಸಾಧನೆಗಳ ರಾಜ್ಯ ಮಟ್ಟದಲ್ಲಿ ಪಸರಿಸಿದ ಕೀರ್ತಿ ಪೂಜಾಳದ್ದಾಗಿದೆ.
ಯೋಗ ಅಭ್ಯಾಸ ಪ್ರಾರಂಭ : ಕಂಪ್ಲಿ ನಗರದಲ್ಲಿರುವ ಯಕ್ಷಾ ಯೋಗ ಅಕಾಡೆಮಿಯಲ್ಲಿ 2022ರ ಜೂನ್ ತಿಂಗಳಲ್ಲಿ ಯೋಗ ಅಭ್ಯಾಸಕ್ಕೆ ಸೇರಿದ್ದಾಳೆ. ಸಂಸ್ಥಾಪಕಿ ಎಂ. ಶಾಮಲಮ್ಮ ಅವರ ತರಬೇತಿ ಹಾಗೂ ಮಾರ್ಗದರ್ಶನದಲ್ಲಿ ದಿನದಿಂದ ದಿನಕ್ಕೆ ಯೋಗಭ್ಯಾಸ ಮಾಡುತ್ತಾ, ಕಿರು ವಯಸ್ಸಿನಲ್ಲಿ ಸಾಧನೆ ಮಾಡಲು ಪ್ರೇರಣೆ ಸಿಕ್ಕಂತಾಗಿದೆ. ಮೊದಲ ಹೆಜ್ಜೆಯಲ್ಲೇ ಕಂಪ್ಲಿಯಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ಸಾಧನೆಯೊಂದಿಗೆ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ನಂತರದಲ್ಲಿ ಗಣಿನಾಡು ಕಣ್ಮಣಿ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಕಂಪ್ಲಿ ಕಲಾರತಿ ಪ್ರಶಸ್ತಿ, ಹೀಗೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಸಾಧನೆಯ ಹಾದಿ ಸಾಗಿದೆ.
ವಿವಿಧ ಕ್ಷೇತ್ರದಲ್ಲಿ ಸಾಧನೆ : ಯೋಗ ಸಾಧನೆಯ ಜೊತೆಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಅಬಾಕಸ್‌ನಲ್ಲಿ ಚಾಂಪಿಯನ್ ಶಿಪ್ ಪ್ರಶಸ್ತಿ ಪುರಸ್ಕಾರ, ಸ್ವಾತಂತ್ರ್ಯ ಮತ್ತು ಗಣರಾಜ್ಯೋತ್ಸವ ದಿನಾಚರಣೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ, ಕಂಪ್ಲಿ ಕಲಾರತಿ ಉತ್ಸವದಲ್ಲಿ ಏಕಾಭಿನಯ ಪಾತ್ರಕ್ಕೆ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಸಾಧಕಿ ಗಾಯತ್ರಿ ಯೋಗದಿಂದ ಅಭಿನಂದನಾ ಪ್ರಶಸ್ತಿ, ಹೀಗೆ ಹತ್ತು ಹಲವು ಸಂಘ-ಸಂಸ್ಥೆಗಳಲ್ಲಿ ನೀಡಿದ ಪ್ರಶಸ್ತಿ ಮತ್ತು ಚಿನ್ನ, ಬೆಳ್ಳಿ ಪದಕಗಳು ಪೂಜಾಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಜೊತೆಗೆ ಮತ್ತಷ್ಟು ಸಾಧನೆಗೆ ಸ್ಪೂರ್ತಿದಾಯಕವಾಗಿವೆ.
ಒಟ್ಟಾರೆ ಕಿರು ವಯಸ್ಸಿನಲ್ಲಿ ಯೋಗ ಸೇರಿದಂತೆ ನಾನಾ ಸಾಧನೆಗಳ ಶಿಖರದೊಂದಿಗೆ ಪ್ರಶಸ್ತಿಗಳ ಗರಿಮೆ ತನ್ನದಾಗಿಸಿಕೊಂಡಿದ್ದು, ಮುಂದಿನ ಸಾಧನೆಗೆ ಕಂಪ್ಲಿ ಜನತೆಗೆ ಆಶಯ ದೊಡ್ಡದಾಗಿದೆ.
” ಅತಿ ಚಿಕ್ಕ ವಯಸ್ಸಿಯಲ್ಲಿ ಹಲವು ಪ್ರಶಸ್ತಿಗಳು ಒಲಿದು ಬಂದಿವೆ. ಮತ್ತು ನಾನಾ ಕ್ಷೇತ್ರದಲ್ಲಿ ಅವಾರ್ಡ್ ಗಳು ಅರಸಿ ಬಂದಿರುವುದು ಪೂಜಾ ಯೋಗ ಸಾಧನೆಗೆ ನಿದರ್ಶನ. ಯೋಗದಲ್ಲಿ ಸಾಧನೆ ಮಾಡುವ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದ್ದು, ಇತರರಿಗೆ ಮಾದರಿಯಾಗಿದ್ದಾಳೆ. ಇಂತಹ ಮಕ್ಕಳ ಸಾಧನೆ ಗುರುತಿಸಿ, ರಾಜ್ಯ ಮಟ್ಟದ ಪ್ರಶಸ್ತಿ ನೀಡಬೇಕು “.
– ಎಂ.ಶಾಮಲಮ್ಮ, ಸಂಸ್ಥಾಪಕಿ, ಯಕ್ಷಾ ಯೋಗ ಅಕಾಡೆಮಿ. ಕಂಪ್ಲಿ.
” ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡುವುದು ಅಷ್ಟು ಸುಲಭವಲ್ಲ. ಇಂತದರಲ್ಲಿ ನಮ್ಮ ಮಗಳು ಪೂಜಾ, ಯೋಗದಲ್ಲಿ ಒಂದೊಂದು ಮೆಟ್ಟಲುಗಳನ್ನು ಏರಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯಾಗಿದೆ. ಶಿಕ್ಷಣದ ಜೊತೆಗೆ ಯೋಗ ಸೇರಿದಂತೆ ಪ್ರತಿಯೊಂದು ರಂಗದಲ್ಲಿ ಮಕ್ಕಳು ಸಾಧನೆ ಮಾಡಿದಾಗ ಮಾತ್ರ ಮುಂದೊಂದು ದಿನದಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಮುನ್ನಡೆಯಲು ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತೇವೆ.
– ಎಸ್.ಶಿವಲಿಂಗಮ್ಮ, ತಾಯಿ, ಕಂಪ್ಲಿ.
” ಯೋಗ ಸ್ಪರ್ಧೆಯಲ್ಲಿ ಸಾಧನೆ ಮಾಡಲು ಹಾಗೂ ಪ್ರಶಸ್ತಿ ಲಭಿಸಲು ಯಕ್ಷಾ ಯೋಗ ಅಕಾಡೆಮಿಯ ಸಂಸ್ಥಾಪಕಿ ಹಾಗೂ ಗುರುಗಳಾದ ಶಾಮಲಮ್ಮ ಹಾಗೂ ಪ್ರತಿಯೊಂದು ಹಂತದಲ್ಲಿ ಪೋಷಕರು ನೀಡಿದ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಯಿತು “.
– ಎಸ್.ಪೂಜಾ, ಯೋಗ ಸಾಧಕಿ. ಕಂಪ್ಲಿ.
ವರದಿ : ಜಿಲಾನಸಾಬ್ ಬಡಿಗೇರ್



















