ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಜಿಲ್ಲೆಗಳಲ್ಲಿ ವಿಚಾರಣೆ : ಟಿ.ಶ್ಯಾಮ್ ಭಟ್

ಶಿವಮೊಗ್ಗ : ಮಾನವ ಹಕ್ಕುಳಗ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಹಾಗೂ ಜನರು ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ವಿಚಾರಣೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ತಿಳಿಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣ ವಿಲೇವಾರಿ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈಗಾಗಲೇ 24 ಜಿಲ್ಲೆಗಳಲ್ಲಿ ವಿಚಾರಣೆ ನಡೆಸಿದ್ದು ಇನ್ನು 8 ಜಿಲ್ಲೆಗಳು ಬಾಕಿ ಇದೆ ಎಂದರು.
ಮಾನವ ಹಕ್ಕುಗಳ ಸಂರಕ್ಷಣೆ ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಆಯೋಗವು ಸರ್ಕಾರ/ಸರ್ಕಾರಿ ಸಂಸ್ಥೆಗಳಿAದ ಆಗಿರುವ ಮಾನವ ಹಕ್ಕುಗಳ ಕುರಿತಾದ ದೂರನ್ನು ಸ್ವೀಕರಿಸಿ, ವಿಚಾರಣೆ ನಡೆಸಿ, ತೀರ್ಮಾನ ಕೈಗೊಂಡು ಶಿಸ್ತಿನ ಕ್ರಮಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಹಾಗೂ ಕೆಲವು ಪ್ರಕರಣಗಳಲ್ಲಿ ದೂರುದಾರರು, ನೊಂದವರಿಗೆ ಪರಿಹಾರ ನೀಡಲು ಶಿಫಾರಸು ಮಾಡುತ್ತದೆ ಎಂದರು.
ಮಾನವ ಹಕ್ಕುಗಳ ವ್ಯಾಪ್ತಿ ಅತಿ ವಿಸ್ತಾರವಾಗಿರುವುದರಿಂದ ದೂರುಗಳ ಸಂಖ್ಯೆ ಸಹ ಹೆಚ್ಚಿದೆ. ಆದ್ದರಿಂದ ಜಿಲ್ಲೆಗಳಿಂದ ವಾಸ್ತವಿಕ ವರದಿಗಳನ್ನು ಬೇಗ ಕಳುಹಿಸಿದರೆ ಶೀಘ್ರ ವಿಲೇವಾರಿ ಸಾಧ್ಯವಾಗುತ್ತದೆ ಎಂದರು.
ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡಿದ ಸಮಯದಲ್ಲಿ ಅಧಿಕಾರಿ/ಸಿಬ್ಬಂದಿ ಸೌಜನ್ಯದಿಂದ ಮಾತನಾಡಿದರೆ ಶೇ.50 ಸಮಸ್ಯೆ ಬಗೆಹರಿಯುತ್ತದೆ ಎಂದ ಅವರು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದರು.
ಮೆಗ್ಗಾನ್ ಆಸ್ಪತ್ರೆ ಭೇಟಿ ಸಮಯದಲ್ಲಿ ರೋಗಿ ಜೊತೆ ಇರುವ ಸಹಾಯಕರಿಗೆ ರಾತ್ರಿ ತಂಗಲು ಡಾರ್ಮಿಟರಿ ಅವಶ್ಯವಿದೆ ಎಂದು ಸಾರ್ವಜನಿಕರು ತಿಳಿಸಿದ್ದು, ಈ ಕುರಿತು ಚರ್ಚಿಸಲಾಗಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಶೀಘ್ರದಲ್ಲೇ ರೂ.5 ಕೋಟಿ ಅನುದಾನದಲ್ಲಿ ಡಾರ್ಮಿಟರಿ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಹಾಗೂ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಸಮಸ್ಯೆ ಕುರಿತು ಬಸ್ ಮಾಲೀಕರು ತಮ್ಮ ಗಮನಕ್ಕೆ ತಂದಿದ್ದು, ಪಾಲಿಕೆ ಆಯುಕ್ತರು ಅವರೊಂದಿಗೆ ಒಂದು ಸಭೆ ನಡೆಸಿ ಚರ್ಚಿಸುವಂತೆ ಸೂಚಿಸಿದರು.
ಜಿಲ್ಲಾ ಕಾರಾಗೃಹಕ್ಕೆ ಖೈದಿಗಳ ಬಂಧುಗಳು ಭೇಟಿ ನೀಡಲು ಬಸ್ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಕೇಳಿಕೊಂಡಿದ್ದು, ಕೆಎಸ್‌ಆರ್‌ಟಿಸಿ ವತಿಯಿಂದ ಖೈದಿಗಳ ಭೇಟಿ ಸಮಯದಲ್ಲಿ ಒಂದು ಬಸ್ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಪ್ರೊಫೆಸರ್ ಓರ್ವರ ವಿರುದ್ದ ಮಹಿಳೆಯೊಬ್ಬರು ಮಾಡಿರುವ ಲೈಂಗಿಕ ದೌರ್ಜನ್ಯ ಮತ್ತು ಹಣ ಪಡೆದ ಪ್ರಕರಣ ಗಂಭೀರವಾಗಿದ್ದು ಈ ಬಗ್ಗೆ ವಿಶ್ವವಿದ್ಯಾಲಯದ ವತಿಯಿಂದ ಒಂದು ಸಮಿತಿ ರಚಿಸಿ ಪರಿಶೀಲಿಸಬೇಕು ನಂತರ ಸಮರ್ಪಕವಾದ ವರದಿಯನ್ನು ಆಯೋಗಕ್ಕೆ ನೀಡಬೇಕೆಂದು ಸೂಚಿಸಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ, ಮಾನವ ಹಕ್ಕುಗಳ ಸಂಘ ಹೀಗೆ ಮಾನವ ಹಕ್ಕುಗಳ ಹೆಸರಿನ ನಕಲಿ ಸಂಸ್ಥೆಗಳು ಅಧಿಕಾರಿಗಳನ್ನು ಹೆದರಿಸಿ ಕೆಲಸ ಮಾಡಿಸುತ್ತಿವೆ. ಈ ಬಗ್ಗೆ ಅಧಿಕಾರಿಗಳು, ಸಾರ್ವಜನಿಕರು ಜಾಗೃತರಾಗಿರಬೇಕು. ಇಂತಹ ನಕಲಿ ಸಂಸ್ಥೆಗಳ ಕುರಿತು ಡಿಜಿಪಿ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಗಳ ಬಗ್ಗೆ ಚರ್ಚಿಸಿದ್ದೇವೆ. ಈ ರೀತಿ ನಕಲಿ ಸಂಸ್ಥೆಗಳು ತಮ್ಮ ಭೇಟಿ ಮಾಡಿದ್ದಲ್ಲಿ ನಮ್ಮ ಗಮನಕ್ಕೆ ತರಬೇಕೆಂದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ.ವಂಟಿಗೋಡಿ ಮಾತನಾಡಿ, ಮಾನವನಿಗೆ ಜನ್ಮತಃ ಬಂದಂತಹ ಹಕ್ಕುಗಳೇ ಮಾನವ ಹಕ್ಕುಗಳಾಗಿದ್ದು ಮೂಲಭೂತ ಹಕ್ಕೂಗಳೂ ಸೇರಿದಂತೆ ಇದರ ವ್ಯಾಪ್ತಿ ವಿಸ್ತಾರವಾಗಿದೆ. ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವುದು, ಈ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಹಾಗೂ ಉಲ್ಲಂಘನೆಯಾದಲ್ಲಿ ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡುವುದು ಆಯೋಗದ ಮುಖ್ಯ ಕಾರ್ಯವಾಗಿದೆ ಎಂದ ಅವರು ಸಾರ್ವಜನಿಕ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾದರೆ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಜಿಲ್ಲೆಯಲ್ಲಿ ಸಾರ್ವಜನಿಕ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಎಸ್‌ಪಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದರು.

ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳು ಉತ್ತಮವಾಗಿದ್ದು ತಾವು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಚ್ಚತೆ, ಇತರೆ ಸೌಲಭ್ಯ ಉತ್ತಮವಾಗಿದ್ದು ಸಿಬ್ಬಂದಿ ಕೊರತೆ ಇಲ್ಲ. ಸರ್ಕಾರಿ ವಿದ್ಯಾರ್ಥಿ ನಿಲಯಗಳು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕಾರಾಗೃಹ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಣ್ಣ ಪುಟ್ಟ ದೋಷಗಳಿದ್ದು ಅವುಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ.

  • ಶ್ಯಾಮ್ ಭಟ್, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು

ಸಭೆಯಲ್ಲಿ ದೂರುದಾರರೋರ್ವರು ಆಗಮಿಸಿ, ತಮ್ಮ ಜಮೀನಿಗೆ ತೆರಳಲು ರಸ್ತೆ ನೀಡದೇ ಪಕ್ಕದ ಜಮೀನಿನವರು ತೊಂದರೆ ನೀಡುತ್ತಿದ್ದು ಜಮೀನಿನಲ್ಲಿ ಕೆಲಸ ಮಾಡಲು ತುಂಬಾ ತೊಂದರೆಯಾಗುತ್ತಿದೆ. ಪಿಡಿಓ, ಪೊಲೀಸರ ರಕ್ಷಣೆಯಲ್ಲಿ ಜಮೀನಿಗೆ ಹೋಗಬೇಕಿದೆ ಎಂದು ದೂರಿತ್ತರು. ಅಧ್ಯಕ್ಷರು, ಸದಸ್ಯರು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆಯೋರ್ವರು ತಮ್ಮ ಭೋಗ್ಯದ ಮೊತ್ತ ನೀಡದೇ ಮನೆ ಮಾಲೀಕರು ಕಿರುಕುಳ ನೀಡುತ್ತಿದ್ದು, ದೌರ್ಜನ್ಯವೆಸಗಿ ಜಾತಿನಿಂದನೆ ಮಾಡಿದ್ದಾರೆಂದು ದೂರಿದರು. ಸದಸ್ಯರು, ಭೋಗ್ಯದ ಮೊತ್ತ ಪಡೆಯಲು ಸಿವಿಲ್ ದಾವೆ ಹೂಡಬೇಕು, ಇನ್ನು ಜಾತಿ ನಿಂದನೆ, ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿ, ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು. ಮತ್ತೋರ್ವ ಅರ್ಜಿದಾರರು ತಮಗೆ ನಿಗದಿತ ಸಮಯದೊಳಗೆ ನಿವೇಶನ ಮಂಜೂರು ಮಾಡಿಲ್ಲವೆಂದು ದೂರಿದರು. ರಸ್ತೆ, ಭೂಮಿ, ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ಆಯೋಗ ವಿಚಾರಣೆ ನಡೆಸಿತು.
ಹಾಗೂ ಜಿಲ್ಲಾಧಿಕಾರಿಗಳಿಗೆ ಸಂಬಂಧಿಸಿದ 26 ಪ್ರಕರಣ, ಎಸ್‌ಪಿ ಯವರಿಗೆ ಸಂಬಂಧಿಸಿದ 10, ಕೇಂದ್ರ ಕಾರಾಗೃಹ 04 , ಜಿ.ಪಂ ಸಿಇಓ ಯವರಿಗೆ ಸಂಬಂಧಿಸಿದ 03, ಡಿಡಿಪಿಐ ಗೆ ಸಂಬಂಧಿಸಿದ 02 ಹಾಗೂ ಇತರೆ ಇಲಾಖೆಗಳಿಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಬಾಕಿ ಇದ್ದ 50 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ವರದಿ ಸಲ್ಲಿಸದೇ ಇರುವ ಪ್ರಕರಣಗಳಿಗೆ ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಆಯೋಗ ಸೂಚನೆ ನೀಡಿತು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿ.ಪಂ. ಸಿಇಓ ಹೇಮಂತ್ ಎನ್, ಎಎಸ್ ಪಿ ಕಾರಿಯಪ್ಪ, ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ದೂರುದಾರರು ಹಾಜರಿದ್ದರು.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!