ಬಳ್ಳಾರಿ / ಕಂಪ್ಲಿ: ರಾಜ್ಯ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ದೃಷ್ಠಿಯಿಂದ ಸಂಚಾರಿ ಚಿಕಿತ್ಸಾಲಯ ಬಸ್ ಪ್ರಾರಂಭಿಸಿದೆ. ಆದರೆ, ಕಂಪ್ಲಿ ತಾಲೂಕಿನಲ್ಲಿ ಬಹಳಷ್ಟು ಕಾರ್ಮಿಕರಿಗೆ ಸಂಚಾರಿ ಚಿಕಿತ್ಸೆ ಸಮರ್ಪಕವಾಗಿ ದೊರೆಯುತ್ತಿಲ್ಲ, ಕಾರ್ಮಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲೆಂದು ಕಂಪ್ಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಸಂಚಾರ ಚಿಕಿತ್ಸಾಲಯ ನಾಮಿಕಾವಸ್ಥೆಗೆ ಇದೆ ಎನ್ನುವಂತಾಗಿದೆ.
ಕಂಪ್ಲಿ ಪಟ್ಟಣ ಹಾಗೂ ಗ್ರಾಮೀಣ ಸೇರಿದಂತೆ ಒಟ್ಟಾರೆ ಸುಮಾರು 6 ಸಾವಿರಕ್ಕೂ ಹೆಚ್ಚು ವಿವಿಧ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅತಿ ಹೆಚ್ಚಾಗಿ ಬಡ ಹಾಗೂ ಮಧ್ಯಮ ವರ್ಗದ ಕಾರ್ಮಿಕರಿದ್ದಾರೆ. ಇಲ್ಲಿನ ಕಾರ್ಮಿಕರಿಗೆ ಉಚಿತವಾಗಿ ಸಿಗಬೇಕಾದ ಚಿಕಿತ್ಸಾ ಸೌಲಭ್ಯವು ಮರೀಚಿಕೆಯಾಗಿದೆ.
ಸಂಚಾರಿ ಚಿಕಿತ್ಸಾಲಯ ಬಸ್ ಕೇವಲ ಪ್ರಮುಖ ರಸ್ತೆಗಳಲ್ಲಿ ಮಾತ್ರ ಸಂಚರಿಸಿ, ಮೈಕ್ ಅನೌನ್ಸ್ ಮಾಡಿ ತೆರಳುವುದು ಸಾಮಾನ್ಯವಾಗಿದೆ. ಇಲ್ಲಿನ ಕಟ್ಟಡ ಹಾಗೂ ಇತರೆ ನಿರ್ಮಾಣದಲ್ಲಿ ತೊಡಗಿರುವ ಸ್ಥಳಕ್ಕೆ ಸಂಚಾರಿ ಬಸ್ ಬಾರದೇ, ಎಲ್ಲೆಂದರಲ್ಲಿ ನಿಲ್ಲಿಸಿ, ಬೇಕಾಬಿಟ್ಟಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವು ಬಲವಾಗಿ ಕೇಳಿ ಬರುತ್ತಿದೆ.
ಇಲ್ಲಿನ ಸಂಚಾರಿ ಬಸ್ ನಲ್ಲಿ ಜ್ವರ, ತಲೆನೋವು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗೆ ಸರಿಯಾದ ಔಷಧಿಗಳಿಲ್ಲ ಮತ್ತು ತಜ್ಞ ವೈದ್ಯರು ಸಹ ಇಲ್ಲದಂತಾಗಿದೆ.
ಸಂಚಾರಿ ಬಸ್ ಗ್ರಾಮೀಣ ಭಾಗಕ್ಕೆ ಬಂದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆರೋಗ್ಯ ತಪಾಸಣೆ ಮಾಡುವ ಜೊತೆಗೆ ಸರಿಯಾಗಿ ಕಾರ್ಮಿಕರ ತಪಾಸಣೆ ಮಾಡದೇ, ಜಿಲ್ಲಾ ನಗರಕ್ಕೆ ತೆರಳುತ್ತಿದೆ. ಇದರಿಂದ ಇಲ್ಲಿನ ಕಾರ್ಮಿಕರಿಗೆ ಆರೋಗ್ಯ ಸೇವೆ ದೊರಕದಂತಹ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸ್ ಸಂಚಾರ ಮುಖ್ಯರಸ್ತೆಗೆ ಮಾತ್ರ ಸೀಮಿತವಾಗಿದೆ. ಸರ್ಕಾರ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ನೀಡುವ ಯೋಜನೆ ಹಳ್ಳ ಹಿಡಿಯುವತ್ತ ಸಾಗಿದೆನಾ ಎಂಬ ಅನುಮಾನ ಮೂಡಿದೆ. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಸುವ ನಿಟ್ಟಿನಲ್ಲಿ ಅಧಿಕಾರಿಗಳ ಪಾತ್ರ ಅತಿ ಮುಖ್ಯವಾಗಿದ್ದು, ಕೆಲ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿಗೆ ಸೌಲಭ್ಯಗಳು ಹಳ್ಳ ಹಿಡಿಯುತ್ತಿವೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕಾರ್ಮಿಕರಿಗೆ ಆರೋಗ್ಯ ಸೌಲಭ್ಯವನ್ನು ಸಕಾಲದಲ್ಲಿ ಕಲ್ಪಿಸಲು ಕ್ರಮ ವಹಿಸಬೇಕೆಂಬುದು ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕ ನಿರ್ಮಾಣ ಸಂಘದ ದೇವಲಾಪುರ ಗ್ರಾಮ ಘಟಕ ಅಧ್ಯಕ್ಷ ಕಾನೀರು ಮಲ್ಲೆಪ್ಪ, ಕಾರ್ಯದರ್ಶಿ ಹೆಚ್.ಪರಶುರಾಮ, ಉಪಾಧ್ಯಕ್ಷ ಕಾಡಳ್ಳಿ ಬಸವರಾಜ, ಖಜಾಂಚಿ ಗೊರವರ ನಾಗರಾಜ ಸೇರಿದಂತೆ ಕಾರ್ಮಿಕರ ಹಕ್ಕೊತ್ತಾಯವಾಗಿದೆ.
ಕಾರ್ಮಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸಂಚಾರಿ ಚಿಕಿತ್ಸಾಲಯವನ್ನು ಸರ್ಕಾರ ಆರಂಭಿಸಿದೆ. ಆದರೆ, ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮಕ್ಕೆ ಬರುವ ಸಂಚಾರಿ ಬಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮುಖ್ಯರಸ್ತೆ ಬದಿ ನಿಂತು ತೆರಳುತ್ತಿದ್ದು, ಇದರಿಂದ ಬಹಳಷ್ಟು ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ. ಕಾರ್ಮಿಕರಿಗೆ ಸಂಚಾರಿ ಚಿಕಿತ್ಸಾ ವಲಯದ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಸರ್ಕಾರಿ ಸೌಲಭ್ಯ ಮರಿಚಿಕೆಯಾಗುತ್ತಿವೆ. ಸಂಚಾರಿ ಬಸ್ನಲ್ಲಿ ಸರಿಯಾಗಿ ವೈದ್ಯರಿಲ್ಲ. ಅನಾರೋಗ್ಯಕ್ಕೆ ತಕ್ಕಂತೆ ಔಷಧಿಗಳಿಲ್ಲ. ಯಾವುದೋ ಒಂದು ಔಷಧ ನೀಡುತ್ತಿದ್ದಾರೆ. ಕಾರ್ಮಿಕರಿಗೆ ಉಚಿತ ಚಿಕಿತ್ಸೆ ದೊರಕುತ್ತಿಲ್ಲ. ಇದರಿಂದ ಕಾರ್ಮಿಕರಿಗೆ ತುಂಬಾ ಸಮಸ್ಯೆ ಉಂಟಾಗಿದೆ. ಆದ್ದರಿಂದ ಸಂಬಂಧಿಸಿದ ಮೇಲಿನ ಅಧಿಕಾರಿಗಳು ಗಮನ ಹರಿಸಿ, ಆರೋಗ್ಯ ಸೌಲಭ್ಯ ಒದಗಿಸಲು ಸೂಕ್ತ ಕ್ರಮ ವಹಿಸಬೇಕಾಗಿದೆ. ಮತ್ತು ಕಂಪ್ಲಿ ತಾಲೂಕಿನಲ್ಲಿ ಕಾರ್ಮಿಕರಿಗಾಗಿ ಪ್ರತ್ಯೇಕವಾದ ಆಸ್ಪತ್ರೆ ನಿರ್ಮಿಸಬೇಕು.
- ಕಾನೀರು ಮಲ್ಲೆಪ್ಪ
ಅಧ್ಯಕ್ಷರು, ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕ ನಿರ್ಮಾಣ ಸಂಘದ ದೇವಲಾಪುರ ಗ್ರಾಮ ಘಟಕ.
ವರದಿ ಜಿಲಾನಸಾಬ್ ಬಡಿಗೇರ



















