
ಬಳ್ಳಾರಿ / ಕಂಪ್ಲಿ : ಪಟ್ಟಣದ ಗಂಗಾನಗರದ ಗಂಗಾಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡ 185ನೇ ಮಹಾಮನೆ ಕಾರ್ಯಕ್ರಮ ಶನಿವಾರ ನಡೆಯಿತು.
ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಪ್ರಭಾರ ಪ್ರಾಚಾರ್ಯ ಸಿದ್ದಣ್ಣ ಪರಮೇಶ್ವರ ‘ಬಸವ ವಚನ ವಿಚಾರಧಾರೆ’ ಕುರಿತು ಉಪನ್ಯಾಸ ನೀಡಿ, ಜಗತ್ತಿನಲ್ಲಿ ಮೌಢ್ಯವನ್ನು ತೊಲಗಿಸಲು ಬಸವ ವಿಚಾರ ಧಾರೆ ಅನುಷ್ಟಾನ ಅಗತ್ಯವಿದೆ. ದೇಶದ ಭವಿಷ್ಯವನ್ನು ರೂಪಿಸಲು ಬಸವ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಕೆಗೊಳ್ಳಬೇಕಿದೆ,
ಕೇವಲ ಕಾನೂನಿನಿಂದ ಬಡತನ, ಅಜ್ಞಾನ, ಮೌಢ್ಯ ಆಚರಣೆ, ಭ್ರಷ್ಟಾಚಾರ, ಜಾತೀಯತೆ ಮೊದಲಾದ ಪಿಡುಗುಗಳನ್ನು ಓಡಿಸಲು ಸಾಧ್ಯವಿಲ್ಲ. ಮಹಿಳಾ ರಾಜಕೀಯ ಪ್ರಾತಿನಿಧ್ಯತೆ ಪುರಷರ ಪ್ರಾಬಲ್ಯದಿಂದ ಮಂಕಾಗುತ್ತಿದೆ. ಯುವಜನತೆ ದುಶ್ಚಟಗಳಿಂದ ವಿಮುಖರಾಗಿಸಲು ಶರಣ ಚಿಂತನೆಯನ್ನು ಪ್ರೇರೇಪಿಸಬೇಕಿದೆ. ಸಮಾಜವನ್ನು ಸೋಮಾರಿತನದಿಂದ ಪಾರು ಮಾಡಲು ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಯುವಜನತೆಯಲ್ಲಿ ಜಾಗೃತಿ ಮೂಡಿಸಬೇಕಿದೆ. ಆಡಳಿತ ಮತ್ತು ಜೀವನದಲ್ಲಿ ಬಸವ ತತ್ವ ಅನುಷ್ಠಾನದ ಅಗತ್ಯವಿದೆ ಎಂದರು.
ಪರಿಷತ್ ಅಧ್ಯಕ್ಷ ಜಿ. ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಗತ್ಯತೆಗಿಂತ ಹೆಚ್ಚಿನ ಸಂಗ್ರಹವು ಕಳ್ಳತನಕ್ಕೆ ಸಮವಾಗಿದ್ದು, ಮನುಷ್ಯ ಸಂಗ್ರಹ ಬುದ್ದಿ ತೊರೆದಾಗ ಸಮಾಜದಲ್ಲಿ ಮಾತ್ರ ಶಾಂತಿ ನೆಲಸಲು ಸಾಧ್ಯ. ಮನೆ ಮನೆಗಳಿಗೆ ಶರಣ ಸಾಹಿತ್ಯ ತಲುಪಿಸುವ ಅಗತ್ಯತೆಯಿದೆ ಎಂದರು.
ಶರಣ ಸಾಹಿತ್ಯ ಉಪನ್ಯಾಸಕ ಸಣಾಪುರದ ಗವಿ ವೀರನಗೌಡ, ನಿವೃತ್ತ ನೌಕರ ಸಜ್ಜೇದ ವೀರಭದ್ರಪ್ಪ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಎಸ್. ಶಾಮಸುಂದರರಾವ್, ಕೆ.ಚಂದ್ರಶೇಖರ, ಎಸ್.ರಾಮು, ಅಶೋಕ ಕುಕನೂರು, ಬಿ.ಎಂ.ರುದ್ರಯ್ಯ, ಜೀರು ಮಲ್ಲಿಕಾರ್ಜುನ, ಕೆ.ಯಂಕಾರೆಡ್ಡಿ, ಪಾಮಯ್ಯ ಶರಣ, ಮಡಿವಾಳ ಹುಲುಗಪ್ಪ, ಯು.ಎಂ.ವಿದ್ಯಾಶಂಕರ, ಸೋಗಿ ಸಂತೋಷ, ಶಂಕ್ರಪ್ಪ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















