ಕೊಪ್ಪಳ/ ಸಿದ್ದಾಪುರ: ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2025ನೇ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬುಡ್ಗ ಜಂಗಮ ಸಮುದಾಯದ ಹಗಲು ವೇಷ ಕಲಾವಿದ ರಾಮಣ್ಣ ಕಲ್ಕೇರಿ ಅವರು ಭಾಜನವಾಗಿದ್ದು, ಇದು ಸಿದ್ದಾಪುರ ಗ್ರಾಮಕ್ಕೆ ಸಿಕ್ಕ ಜಾನಪದ ಅಕಾಡೆಮಿಯ ಎರಡನೇಯ ಪ್ರಶಸ್ತಿಯಾಗಿದೆ.

ಈ ಹಿಂದೆ 2021 ರಲ್ಲಿ ಇದೆ ಸಮುದಾಯದ ಶಿವಲಿಂಗಪ್ಪ ಮೀರಾಲಿಯವರಿಗೆ ಈ ಪ್ರಶಸ್ತಿ ದೊರೆತಿತ್ತು, ಈಗ 3 ವರ್ಷದ ಬಳಿಕ 2025 ನೇ ಸಾಲಿನಲ್ಲಿ ಮೋತ್ತೊಮ್ಮೆ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಸಿದ್ದಾಪುರದ ರಾಮಣ್ಣನವರಿಗೆ ದೊರೆತಿರುವುದು ಡಬ್ಬಲ್ ಸಂತೋಷದ ಜೊತೆಗೆ ಕಲೆಗೆ ಸಿಕ್ಕ ಗೌರವವಾಗಿದೆ.

ಬಾಲ್ಯದಿಂದಲೇ ಕಲೆಯ ಕರಗತ:
ರಾಮಣ್ಣ 01-06-1954ರಂದು ಜನಿಸಿದ್ದಾರೆ. ಬಾಲ್ಯದಿಂದಲೇ ಇವರು ಹಗಲು ವೇಷಕ್ಕೆ ಮಾರು ಹೋಗಿದ್ದರು. ಚಿಕ್ಕಂದಿನಿಂದ ಶುರುವಾದ ಇವರ ಕಲಾ ಪ್ರೇಮ ಈಗ 71ನೇ ವಯಸ್ಸಿಗೆ ಬಂದು ನಿಂತಿದೆ. ಇವರು ಕಲಾ ಸೇವೆ ಹಗಲು ವೇಷಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಗೀತ ಕ್ಷೇತ್ರದಲ್ಲೂ ಇವರು ಛಾಪು ಮೂಡಿಸಿದ್ದಾರೆ. ಹಾರ್ಮೋನಿಯಂ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಸೇರಿ ಅನೇಕ ವಿಧಗಳಲ್ಲಿ ಸಹ ಇವರು ಪ್ರಾವಿಣ್ಯತೆ ಹೊಂದಿದ್ದಾರೆ. ಇದಲ್ಲದೆ, ತಬಲ, ಹಾರ್ಮೋನಿಯಂ ವಾದನದಲ್ಲೂ ರಾಮಣ್ಣ ಸೈ ಎನಿಸಿಕೊಂಡಿದ್ದಾರೆ. ಅಷ್ಟೇನು ಓದದಿದ್ದರೂ ಸಹ ಕಲಾವಿದನಾಗಿ ರಾಮಣ್ಣ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಇನ್ನೂ ನಮ್ಮ ಪುರಾತನ ಹಾಗೂ ಸಾಂಪ್ರಾದಾಯಿಕ ಕಲೆಗಳಾದ ತತ್ವಪದ, ಭಜನೆ ಪದಗಳ ಸೊಬಗನ್ನು ಇಂದಿಗೂ ಜನರಿಗೆ ಊಣ ಬಡಿಸುತ್ತಿದ್ದಾರೆ. ರಾಮಾಯಣ ಹಾಗೂ ಮಹಾಭಾರತದಲ್ಲಿ ಬರುವ ಅನೇಕ ಪಾತ್ರಗಳನ್ನು ಹಗಲು ವೇಷದ ಮೂಲಕ ಪ್ರದರ್ಶನ ನೀಡಿ ಜನರಿಂದ ಶಹಭ್ಬಾಸ್ ಗಿರಿ ಪಡೆದಿದ್ದಾರೆ.

ನಮ್ಮ ತಂದೆಯವರಾದ ಶ್ರೀ ರಾಮಣ್ಣ ಕಲ್ಕೇರಿ ಇವರು ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗುವಲ್ಲಿ ಸಹಕರಿಸಿದ ಗೌರವಾನ್ವಿತ ಶ್ರೀ ಜೀವನ್ ಸಾಬ್ ವಾಲಿಕಾರ್ ಬಿನ್ನಾಳ ಇವರಿಗೆ ತುಂಬು ಹೃದಯದ ಕೃತಜ್ಞತೆಗಳು.
- ಶಂಕ್ರಪ್ಪ
ರಾಜ್ಯವಲ್ಲದೆ ಹೊರ ರಾಜ್ಯದಲ್ಲಿಯೂ ಕಲೆ ಪ್ರದರ್ಶನ :
ಇವರು ಕರ್ನಾಟಕ ಸೇರಿ ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳು ನಾಡು, ಕೇರಳ, ಗೋವಾ ಸೇರಿ ಇತರೆ ರಾಜ್ಯದಲ್ಲೂ ಸಹ ಹಗಲು ವೇಷದ ಕಲಾ ಪ್ರದರ್ಶನ ಮಾಡಿ ಶಹಬ್ಬಾಶ್ ಗಿರಿ ಪಡೆದಿದ್ದಾರೆ.
ಅನೇಕ ಪ್ರಶಸ್ತಿ: ರಾಮಣ್ಣ ಅವರು ಸಾಹಿತ್ಯ ಸಮ್ಮೇಳನ, ಹಂಪಿ, ಆನೆಗುಂದಿ, ಕನಕಗಿರಿ ಉತ್ಸವ ಸೇರಿದಂತೆ ನಾಡಿನ ವಿವಿಧ ಜಯಂತಿಗಳಲ್ಲಿ ಹಾಗೂ ದೊಡ್ಡ, ದೊಡ್ಡ ಜಾತ್ರೋತ್ಸವದಲ್ಲಿ ಪಾಲ್ಗೊಂಡು ತಮ್ಮ ಕಲೆಯನ್ನು ಪ್ರದರ್ಶಿಸಿ ವಿವಿಧ ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ. ಈಗ ಇವರ ಕಲಾ ಸೇವೆ ಗುರುತಿಸಿ ಜಾನಪದ ಆಕಾಡೆಮಿ ಬೆಂಗಳೂರು ಕೊಪ್ಪಳ ಜಿಲ್ಲೆಯ ಪೈಕಿ ಹಿರಿಯ ಜೀವ ರಾಮಣ್ಣನಿಗೆ ಪ್ರಶಸ್ತಿ ನೀಡಿರುವುದು ಜಿಲ್ಲೆ ಮತ್ತು ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದೆ.
ನನ್ನ ಅನೇಕ ವರ್ಷಗಳ ಹಗಲುವೇಷದ ಕಲಾ ಸೇವೆಯನ್ನು ಗುರುತಿಸಿ ಜಾನಪದ ಆಕಾಡೆಮಿ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ. ಕಲಾವಿದರಿಗೆ ಪ್ರಶಸ್ತಿ ದೊರೆತರೆ ಅವರ ಕಲಾ ಸೇವೆ ಮಾಡುವ ಹುಮ್ಮಸ್ಸು ಮತ್ತಷ್ಟು ಹೆಚ್ಚಿಸುತ್ತದೆ. ಹಗಲು ವೇಷದ ಮೇಲಿನ ನನ್ನ ಪ್ರೀತಿ ಹಾಗೂ ಗೌರವ ಎಂದಿಗೂ ಕಡಿಮೆಯಾಗಲ್ಲ.
- ರಾಮಣ್ಣ, ಜಾನಪದ ಆಕಾಡೆಮಿ ವಾರ್ಷಿಕ
ಪ್ರಶಸ್ತಿ ಪುರಸ್ಕೃತರು, ಸಿದ್ದಾಪುರ.
ವರದಿಗಾರರು ಅಮರೇಶ ನಾಯಕ



















