
ಮಾತಾಜಿ ಅವರ ಹೆಸರಿನಲ್ಲಿ ಇವರ ಕುತಂತ್ರ ನಡೆಯಲ್ಲ – ಪ್ರಕಾಶರೆಡ್ಡಿ ಯಾನಾಗುಂದಿ.
ಕಲಬುರಗಿ/ ಸೇಡಂ (ಯಾನಾಗುಂದಿ): ಡಿ 28. ಯಾನಾಗುಂದಿ ಮಾತಾ ಮಾಣಿಕೇಶ್ವರಿ ಅವರ ವಿಷಯದಲ್ಲಿ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಶಿವಯ್ಯ ಅವರು ಯಾನಾಗುಂದಿ ಅಮ್ಮನವರ ಟ್ರಸ್ಟನ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮಗ ಸುಮನ್ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾನಾಗುಂದಿ ಬಿಟ್ಟು ತೊಲಗಲಿ, ಎಲ್ಲದಕ್ಕೂ ಅಮ್ಮನವರು ಹೇಳಿದ್ದಾರೆ ಎಂದು ಇವರು ಕುತಂತ್ರ ಮಾಡುವುದು ಇನ್ನು ನಡೆಯುವುದಿಲ್ಲ ಎಂದು ಪ್ರಕಾಶರೆಡ್ಡಿ ಪಟೇಲ್ ಹೇಳಿದರು.
ಮುಂದುವರೆದು ಆಶ್ರಮದ ಟ್ರಸ್ಟ್ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಯಾನಾಗುಂದಿ ಅಮ್ಮನವರ ಜೊತೆ ಆಶ್ರಮದ ಅಭಿವೃದ್ಧಿಗೆ ಸಹಕರಿಸಿದ ಸ್ಥಳೀಯರಾದ ರಾಮಿರೆಡ್ಡಿ ಸೇರಿದಂತೆ ಹಲವರ ಹೆಸರನ್ನು ಹೇಳಲು ಇವರಿಗೆ ನೋವಾಗುತ್ತದೆ, 1967 ರಿಂದ ಇಲ್ಲಿಯವರೆಗೆ ಶ್ರೀ ಕ್ಷೇತ್ರ ಅಭಿವೃದ್ಧಿಗೆ ಮೈಸೂರು ಸರಕಾರದ ಜೊತೆ ಮಾತುಕತೆ ನಡೆಸಿ ಅಗತ್ಯ ದಾಖಲಾತಿಗಳನ್ನು ಒದಗಿಸಿ, ಸುಮಾರು ನಲವತ್ತು ವರ್ಷಗಳ ಕಾಲ ಸೇವೆ ನೀಡಿರುವ ವ್ಯಕ್ತಿಗಳನ್ನು ಕಡೆಗಣಿಸುವ ಪ್ರಯತ್ನ ಬೇಕಂತಲೇ ಶಿವಯ್ಯಸ್ವಾಮಿ ಹಾಗೂ ಅವರ ಹಿಂಬಾಲಿಕರಿಂದ ಆಗುತ್ತಿದೆ ಎಂದು ಹೇಳಿದರು.
ರಘು ಪಟೇಲ್ ಮಾತನಾಡಿ ನಮ್ಮ ಅಜ್ಜ 1967 ರ ಸಮಯದಲ್ಲಿ ಅಮ್ಮನವರಿಗೆ ಯಾನಾಗುಂದಿ ಊರಿನ ಒಳಗಡೆ ಇರುವ ರಾಮ ಮಂದಿರದಲ್ಲಿ ಇರಲು ಸ್ಥಳ ನೀಡಿ, ಅಲ್ಲಿಂದ ಮಾತಾ ಮಾಣಿಕೇಶ್ವರಿ ಅಮ್ಮನವರ ಆಜ್ಞೆಯಂತೆ ಅವರ ಅಧ್ಯಾತ್ಮಿಕ ಸಾಧನೆಗೆ ಯಾನಾಗುಂದಿ ಗುಡ್ದ ಆಗಿನ ಸಿದ್ದೇಶ್ವರ ಮಂದಿರದ ಸ್ಥಳದಲ್ಲಿ ವ್ಯವಸ್ಥೆ ಮಾಡಿದ್ದಾರೆ.
ಯಾನಾಗುಂದಿ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯರಾದ ಮೇಲಿಂದ ಆಗಿನ ಸಮಯದಲ್ಲಿ ಅಮ್ಮನವರ ಜೊತೆ ಕ್ಷೇತ್ರ ಅಭಿವೃದ್ಧಿಗೆ ದುಡಿದಿರುವ ನಮ್ಮ ತಾತನವರ ಸೇವೆಯನ್ನು ಇವರು ಮರೆಮಾಚಿ ಆಶ್ರಮದ ಖಜಾನೆ ಲೂಟಿ ಯತ್ನಕ್ಕೆ ಇಳಿದಿರುವುದು ಅಮ್ಮನವರ ಭಕ್ತರಿಗೆ ಹಾಗೂ ನಮ್ಮ ಕುಟುಂಬದ ಸದಸ್ಯರಿಗೆ ಅತೀವ ನೋವುಂಟು ಮಾಡಿದೆ ಎಂದರು.
ಪ್ರಕಾಶರೆಡ್ಡಿ ಮುಂದುವರೆಸಿ ಶಿವಯ್ಯಸ್ವಾಮಿ ಇತಿಹಾಸ ನೋಡಿದರೆ ಅವರ ಮೇಲೆ ತೆಲಂಗಾಣ ರಾಜ್ಯದಲ್ಲಿ 2011 ರಿಂದ ಕ್ರಿಮಿನಲ್ ಮೊಕದ್ದಮೆ, ಹಲ್ಲೆ ಪ್ರಕರಣ, ಟ್ರಸ್ಟ್ ಸದಸ್ಯರ ಪೋರ್ಜರಿ ಸಹಿ ಸೇರಿದಂತೆ ಹಲವೆಡೆ ಪ್ರಕರಣ ದಾಖಲಾಗಿವೆ. ಶಿವಯ್ಯಸ್ವಾಮಿ ಅವರ ಮಗ ಸುಮನ್ ಅವರ ಮೇಲೆ ಸಹ ಪತ್ನಿಯ ಸೇರಿದಂತೆ ಆಶ್ರಮದ ಸೇವಕರ ಮೇಲೆ ಹಲ್ಲೆ ಮಾಡಿರುವ ವಿಷಯ ಎಲ್ಲರಿಗೂ ತಿಳಿದಿದೆ, ಮಾತಾ ಮಾಣಿಕೇಶ್ವರಿ ಅಮ್ಮನವರ ಟ್ರಸ್ಟ್ ಅಧ್ಯಕ್ಷ ಸ್ಥಾನಕ್ಕೆ ಶಿವಯ್ಯಸ್ವಾಮಿ ಹಾಗೂ ಸುಮನ್ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದರು.
ಶಿವಯ್ಯಸ್ವಾಮಿ ಯಾನಾಗುಂದಿ ಆಶ್ರಮಕ್ಕೆ ಸೇರಿದ ವಾಣಿಜ್ಯ ಮಳಿಗೆಗಳು, ಕಲ್ಯಾಣಮಂಟಪ, ಶಾಲಾ ಕಾಲೇಜು, ಕೋಟಿ ಲಿಂಗ ಪ್ರತಿಷ್ಠಾನ, ದೇಣಿಗೆ, ಹೊಲಗಳ ಆದಾಯ ಸೇರಿದಂತೆ ಎಲ್ಲಾ ಮೂಲಗಳ ಆದಾಯ ಎಲ್ಲರಿಗೂ ಬಹಿರಂಗ ಪಡಿಸಲು ಒತ್ತಾಯ ಮಾಡಿದರು.
ಕೊನೆಯದಾಗಿ ಈಗಿರುವ ಟ್ರಸ್ಟ್ ರದ್ದು ಪಡಿಸಿ ಹೊಸ ಟ್ರಸ್ಟ್ ಪುನರ್ ರಚನೆ ಮಾಡಿ ನಮ್ಮ ಕುಟುಂಬದ ಹಿರಿಯರು ಅಣ್ಣನವರಾದ ಬ್ರಹ್ಮನಂದರೆಡ್ಡಿಯವರಿಗೆ ನೀಡಲು, ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ ನಮ್ಮ ಕುಟುಂಬದ ಸದಸ್ಯರನ್ನು ಟ್ರಸ್ಟ್ ಒಳಗೆ ಸೇರ್ಪಡೆ ಮಾಡಿಕೊಳ್ಳಬೇಕು ಇಲ್ಲವಾದರೆ ಸ್ಥಳೀಯ ಗ್ರಾಮಸ್ತರೊಂದಿಗೆ ಉಗ್ರ ರೂಪದ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಗನ್ನಾಥರೆಡ್ಡಿ, ಬ್ರಹ್ಮನಂದರೆಡ್ಡಿ, ನರಸರೆಡ್ಡಿ, ಮಾಣಿಕ್ ರೆಡ್ಡಿ, ಶಿವಶಂಕರ್ ರೆಡ್ಡಿ, ರಾಮ್ ರೆಡ್ಡಿ ಸೇರಿದಂತೆ ಸ್ಥಳೀಯರು ಇದ್ದರು.
ವರದಿ- ಜಗದೀಶ್ ಕುಮಾರ್ ಭೂಮಾ



















