ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮರಳುಗಾಡಿನಿಂದ ವಿಶ್ವಸಂಸ್ಥೆಯವರೆಗೆ ಪಯಣ : ನೀರು ಯಾದವ್ ಅವರ ಯಶೋಗಾಥೆ

ರಾಜಸ್ಥಾನದ ಬುಹಾನಾ ಉಪವಿಭಾಗದ ಝುಂಝುನು ಜಿಲ್ಲೆಯ ಲಂಬಿ ಅಹಿರ್ ಎಂಬ ಹಳ್ಳಿ.
ಒಂದು ಕಾಲದಲ್ಲಿ ಈ ಹಳ್ಳಿ ಎಂದರೆ ಯಾರಿಗೂ ವಿಶೇಷವಾಗಿ ನೆನಪಾಗದ, ನಕ್ಷೆಯಲ್ಲೇ ಕಳೆದುಹೋಗುವಂತ ಒಂದು ಸಾಮಾನ್ಯ ಗ್ರಾಮ. ಆ ಹಳ್ಳಿಯ ಹೆಣ್ಣುಮಕ್ಕಳ ಬದುಕು ಇನ್ನೂ ಸರಳವಾಗಿತ್ತು. ಶಾಲೆ ಮುಗಿದರೆ ಮದುವೆ, ಮದುವೆಯಾದ ಮೇಲೆ ಮನೆ, ಮಕ್ಕಳು, ಅಡುಗೆ…ಇಷ್ಟೇ ಅವರ ಭವಿಷ್ಯ ಎಂದು ಸಮಾಜ ನಿರ್ಧರಿಸಿತ್ತು. ಅಲ್ಲಿನ ಗಾಳಿಯಲ್ಲಿ ಕೇವಲ ಮಣ್ಣಿನ ವಾಸನೆಯಿರಲಿಲ್ಲ, ಬದಲಾಗಿ ಶತಶತಮಾನಗಳಿಂದ ಬೆಳೆದು ಬಂದಿದ್ದ “ಹೆಣ್ಣುಮಕ್ಕಳು ಅಡುಗೆಮನೆಗಷ್ಟೇ ಸೀಮಿತ” ಎಂಬ ಸಂಪ್ರದಾಯದ ಧೂಳೂ ಇತ್ತು.

ಕನಸಿನಿಂದ ಆರಂಭವಾದ ಪಯಣ :
ಹರಿಯಾಣದ ನಾರ್ನಲ್ನಲ್ಲಿ ಮೇ ೭, ೧೯೯೦ ರಲ್ಲಿ ಜನಿಸಿದ ನೀರು ಯಾದವ್, ಸಾಮಾನ್ಯ ಕುಟುಂಬದ ಹುಡುಗಿ. ಆದರೆ ಅವರ ಮನಸ್ಸಿನಲ್ಲಿ ಒಂದು ಅಸಾಮಾನ್ಯ ಕನಸು ಇತ್ತು. “ನನ್ನ ಬದುಕು ನನ್ನಗಷ್ಟೇ ಅಲ್ಲ… ಇತರರ ಬದುಕಿಗೂ ಬೆಳಕು ತರಬೇಕು.” ಈಕೆ ಗಣಿತದಲ್ಲಿ ಪದವಿ ಮತ್ತು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ ಎಡ್ ಪದವೀಧರೆ ಕೂಡಾ. ೨೦೨೦ರಲ್ಲಿ ರಾಜಸ್ಥಾನದ ಝುಂಝುನು ಜಿಲ್ಲೆಯ ಅಶೋಕ್ ಯಾದವ್ ಅವರನ್ನು ಮದುವೆಯಾದ ನೀರು ಯಾದವ್ ಎಂಬ ಯುವತಿ ಆ ಹಳ್ಳಿಯ ಮಣ್ಣಿಗೆ ಕಾಲಿಟ್ಟಾಗ, ಅಲ್ಲಿನ ಇತಿಹಾಸವೇ ಬದಲಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
೨೦೨೦ರಲ್ಲಿ ಅವರು ರಾಜಸ್ಥಾನದ ಝುಂಝುನು ಜಿಲ್ಲೆಯ ಲಂಬಿ ಅಹಿರ್ ಗ್ರಾಮದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ೧೨೪೦ ಮತ ಪಡೆದು ಸರ್ಪಂಚ್ ಆಗಿ ಆಯ್ಕೆಯಾದಾಗ, ಅನೇಕರು ಅಂದುಕೊಂಡರು: “ಒಬ್ಬ ಯುವ ಸರ್ಪಂಚ್… ಏನು ಮಾಡಬಲ್ಲಳು?” ಆದರೆ ನೀರು ಯಾದವ್ ಅವರ ಮನಸ್ಸಿನಲ್ಲಿ ಆಗಲೇ ಒಂದು ಕ್ರಾಂತಿಯ ನಕ್ಷೆ ಸಿದ್ಧವಾಗಿತ್ತು. ಅಧಿಕಾರಕ್ಕೆ ಬಂದ ತಕ್ಷಣ ಅವರ ಕಣ್ಣಿಗೆ ಬಿದ್ದಿದ್ದು ಗ್ರಾಮದ ಹೆಣ್ಣುಮಕ್ಕಳ ಮುದುಡಿಹೋದ ಕನಸುಗಳು. ಮದುವೆ, ಮಕ್ಕಳು ಮತ್ತು ಹೊಲದ ಕೆಲಸಗಳ ನಡುವೆ ಕಳೆದುಹೋಗುತ್ತಿದ್ದ ಆ ಕಣ್ಣುಗಳಲ್ಲಿ ಹೊಳಪು ತರಲು ಅವರು ಕಂಡುಕೊಂಡ ದಾರಿ ‘ಹಾಕಿ’.

“ಹಾಕಿ ಸರ್ಪಂಚ್” ಎಂಬ ಹೆಸರಿನ ಹುಟ್ಟು :
ಒಂದು ದಿನ ಅವರು ಗ್ರಾಮದ ಹುಡುಗಿಯರನ್ನು ನೋಡಿದರು. ಯಾರೋ ನೀರಿನ ಕೊಡ ಹೊತ್ತು, ಯಾರೋ ಅಡುಗೆ ಮನೆಗೆ, ಯಾರೋ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುತ್ತಾ…ಅವರು ಕೇಳಿದರು: “ನಿಮಗೆ ಆಟವಾಡಬೇಕು ಅನ್ನಿಸಲ್ಲವೇ?” ಹುಡುಗಿಯರು ನಗುತ್ತಲೇ ಹೇಳಿದರು: “ಅದು ನಮ್ಮಂಥವರಿಗೆಲ್ಲ ಇಲ್ಲ…”ಆ ಕ್ಷಣದಲ್ಲೇ ನೀರು ಯಾದವ್ ಒಂದು ನಿರ್ಧಾರ ಮಾಡಿದರು: “ಈ ಹಳ್ಳಿಯಲ್ಲಿ ಹುಡುಗಿಯರ ಹಾಕಿ ತಂಡ ಮಾಡುತ್ತೇನೆ.” ಆದರೆ ದಾರಿ ಸುಲಭವಿರಲಿಲ್ಲ. ಮನೆಮನೆಗೆ ಹೋಗಿ ಪೋಷಕರನ್ನು ಮನವೊಲಿಸಿದರು. ಕೆಲವರು ನಕ್ಕರು. ಕೆಲವರು ವಿರೋಧಿಸಿದರು. ಕೆಲವರು ಗದರಿಸಿದರು.
ಆಟವಾಡುವುದಾ? ಮೈದಾನಕ್ಕೆ ಹೋಗುವುದಾ? : ಅದು “ನಮ್ಮಂಥ ಹುಡುಗಿಯರಿಗಲ್ಲ” ಎಂಬ ಉತ್ತರವೇ ಎಲ್ಲರ ಬಾಯಲ್ಲಿತ್ತು. ಆದರೆ ಒಂದು ದಿನ, ಅದೇ ಹಳ್ಳಿಯಲ್ಲಿ ಒಬ್ಬ ಯುವತಿ ಪ್ರಶ್ನೆ ಕೇಳಿದರು: “ಹೆಣ್ಣುಮಕ್ಕಳಿಗೆ ಕನಸು ಕಾಣುವ ಹಕ್ಕಿಲ್ಲವೇ?” ಆ ಪ್ರಶ್ನೆಯೇ ಒಂದು ಹಳ್ಳಿಯ ಇತಿಹಾಸವನ್ನು ಬದಲಾಯಿಸಿತು. ಆ ಯುವತಿಯೇ ನೀರು ಯಾದವ್.
“ಹೆಣ್ಣುಮಕ್ಕಳು ಚಡ್ಡಿ ತೊಟ್ಟು ಮೈದಾನಕ್ಕೆ ಇಳಿಯುವುದಾ?” ಎಂದು ಹಳ್ಳಿಯ ಹಿರಿಯರು ಹುಬ್ಬೇರಿಸಿದರು. ಆದರೆ ನೀರು ಯಾದವ್ ದೃತಿಗೆಡಲಿಲ್ಲ. ಅವರು ಮನೆಮನೆಗೆ ಹೋದರು, ಪೋಷಕರ ಕೈಹಿಡಿದು ಕೇಳಿಕೊಂಡರು. “ನಿಮ್ಮ ಮಗಳಿಗೆ ಸ್ಟಿಕ್ ಹಿಡಿಯಲು ಕಲಿಸಿ, ಅವಳು ಇಡೀ ದೇಶವನ್ನೇ ಮುನ್ನಡೆಸುತ್ತಾಳೆ” ಎಂದು ಭರವಸೆ ನೀಡಿದರು.
ಆದರೂ ಅವರು ಹಿಂದೆ ಸರಿಯಲಿಲ್ಲ. ತಮ್ಮ ಎರಡು ವರ್ಷದ ಸಂಪೂರ್ಣ ಸರಪಂಚ್ ಸಂಬಳವನ್ನೇ ಹಾಕಿ: ಹಾಕಿ ಸ್ಟಿಕ್, ಶೂ, ಸಮವಸ್ತ್ರ, ಕಿಟ್ ಬ್ಯಾಗ್, ತರಬೇತಿ ವ್ಯವಸ್ಥೆ, ಮೈದಾನ ನಿರ್ಮಾಣಎಲ್ಲವನ್ನೂ ಒದಗಿಸಿದರು. ಸ್ವಲ್ಪ ದಿನಗಳಲ್ಲೇ ಲಂಬಿ ಅಹಿರ್ ಹಳ್ಳಿಯ ಹುಡುಗಿಯರು ಮೈದಾನದಲ್ಲಿ ಓಡಾಡಲು ಆರಂಭಿಸಿದರು. ಅಂದು ಯಾರೂ ಊಹಿಸಿರಲಿಲ್ಲ. ಒಂದು ದಿನ ಈ ಹಳ್ಳಿ “ಹಾಕಿ ಹಳ್ಳಿ” ಎಂದು ಕರೆಸಿಕೊಳ್ಳುತ್ತದೆ ಎಂದು. ಇಲ್ಲಿಂದಲೇ ದೇಶ ಅವರನ್ನು ಕರೆಯಲಾರಂಭಿಸಿತು: “ಹಾಕಿ ವಾಲಿ ಸರ್ಪಂಚ್”
ಕ್ರೀಡೆಯ ಜೊತೆ ಶಿಕ್ಷಣ – ಆದಿತ್ರಿ ಫೌಂಡೇಶನ್ : ನೀರು ಯಾದವ್ ಅವರಿಗೆ ಗೊತ್ತಿತ್ತು. ಕೇವಲ ಆಟ ಸಾಕಾಗುವುದಿಲ್ಲ. ಶಿಕ್ಷಣವೇ ನಿಜವಾದ ಶಕ್ತಿ. ಅದಕ್ಕಾಗಿ ಅವರು “ಆದಿತ್ರಿ ಫೌಂಡೇಶನ್” ಸ್ಥಾಪಿಸಿದರು.
ಈ ಸಂಸ್ಥೆಯ ಮೂಲಕ ಹಿಂದುಳಿದ ಹುಡುಗಿಯರ ಶಿಕ್ಷಣ, ಕೌಶಲ್ಯ ತರಬೇತಿ, ಆತ್ಮವಿಶ್ವಾಸ ಬೆಳೆಸುವ ಕಾರ್ಯಾಗಾರಗಳು, ನೂರಾರು ಹುಡುಗಿಯರ ಜೀವನದ ದಿಕ್ಕನ್ನೇ ಬದಲಾಯಿಸಿದರು.
“ಸಚ್ಚಿ ಸಹೇಲಿ ಮಹಿಳಾ ಆಗ್ರೋ” – ರೈತ ಮಹಿಳೆಯರ ಶಕ್ತಿ : ರೈತರು ದುಬಾರಿ ಬೀಜ ಮತ್ತು ಗೊಬ್ಬರಕ್ಕೆ ಪರದಾಡುವುದನ್ನು ನೋಡಿ ಅವರು ಮತ್ತೊಂದು ಹೆಜ್ಜೆ ಇಟ್ಟರು: “ಸಚ್ಚಿ ಸಹೇಲಿ” ರೈತ ಉತ್ಪಾದಕ ಸಂಸ್ಥೆ ಇದರ ಮೂಲಕ: ಕಡಿಮೆ ದರದಲ್ಲಿ ಬೀಜ ಮತ್ತು ಗೊಬ್ಬರ, ರೈತರಿಗೆ ಅಗತ್ಯ ವಸ್ತುಗಳು, ಮಹಿಳಾ ರೈತರ ಆರ್ಥಿಕ ಸಬಲೀಕರಣದ ಮೂಲಕ ಗ್ರಾಮದ ಆರ್ಥಿಕತೆಗೆ ಹೊಸ ಉಸಿರು ತುಂಬಿದರು.

ಪರಿಸರ ಪ್ರೀತಿ – ಹಸಿರು ಕ್ರಾಂತಿ : ೨೧,೦೦೦ ಸಸಿಗಳ ವಿತರಣೆ ಮಾಡಿದರು . ನೀರು ಯಾದವ್ ಅವರ ಹೋರಾಟ ಕೇವಲ ಮೈದಾನಕ್ಕೆ ಸೀಮಿತವಾಗಲಿಲ್ಲ. ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಅವರು ೫,೦೦೦ ಸ್ಟೀಲ್ ಪಾತ್ರೆಗಳ ‘ಬರ್ತನ್ ಬ್ಯಾಂಕ್’ “ಪಾತ್ರೆ ಬ್ಯಾಂಕ್” ಸ್ಥಾಪಿಸಿದರು.

ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ :
ಮದುವೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ತಟ್ಟೆಗಳ ಬದಲಿಗೆ ಸ್ಟೀಲ್ ಪಾತ್ರೆಗಳನ್ನು ಬಳಸುವಂತೆ ಮಾಡಿ ಪರಿಸರ ಕಾಳಜಿ ಮೆರೆದರು. ಬಟ್ಟೆ ಚೀಲಗಳ ಬಳಕೆ – ಮಹಿಳೆಯರಿಗೆ ಉದ್ಯೋಗ, ಲಂಬಿ ಅಹಿರ್ ಇಂದು ಸ್ವಚ್ಛ ಮತ್ತು ಹಸಿರು ಗ್ರಾಮದ ಮಾದರಿ ಆಗಿದೆ.

ಡಿಜಿಟಲ್ ಗ್ರಾಮ :
ಸರ್ಕಾರಿ ಶಾಲೆಗೆ ಡಿಜಿಟಲ್ ಸೌಲಭ್ಯ, ಪಂಚಾಯತ್ ಕೆಲಸಗಳಲ್ಲಿ ಪಾರದರ್ಶಕತೆ, ಆನ್ಲೈನ್ ಸೇವೆಗಳು ಒಂದು ಕಾಲದಲ್ಲಿ ಹಿಂದುಳಿದಂತೆ ಕಂಡ ಹಳ್ಳಿ. ಇಂದು ಡಿಜಿಟಲ್ ವಿಲೇಜ್ ಆಗಿ ಬದಲಾಗಿದೆ.

ಹಳ್ಳಿಯಿಂದ ವಿಶ್ವಸಂಸ್ಥೆಯವರೆಗೆ :
೨೦೨೩ – ಪುಣೆಯ MIT ವಿಶ್ವವಿದ್ಯಾಲಯದಲ್ಲಿ ಮುಖ್ಯ ಅತಿಥಿ, ೨೦೨೪ ರಲ್ಲಿ ನ್ಯೂಯಾರ್ಕ್ನ ವಿಶ್ವಸಂಸ್ಥೆ (UN CPD ೫೭ನೇ ಅಧಿವೇಶನ) ಅಲ್ಲಿ ಅವರು ಮಾತನಾಡಿದರು: “ಭಾರತದಲ್ಲಿ ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕತ್ವ”. ಭಾರತದಿಂದ ಆಯ್ಕೆಯಾದ ಕೇವಲ ಮೂವರು ಮಹಿಳಾ ಸರ್ಪಂಚರಲ್ಲಿ ಇವರೂ ಒಬ್ಬರು.
‘ಕೌನ್ ಬನೇಗಾ ಕರೋಡ್ಪತಿ’ಯ ಸೀಸನ್ ೧೫ ರಲ್ಲಿ ಅಮಿತಾಭ್ ಬಚ್ಚನ್ ಅವರ ಎದುರು ಕುಳಿತು ತನ್ನ ಹಳ್ಳಿಯ ಕಥೆ ಹೇಳುವಾಗ, ಇಡೀ ಭಾರತ ಹೆಮ್ಮೆಯಿಂದ ಕಣ್ಣೀರು ಹಾಕಿತು. ಈ ಸಾಧನೆಯನ್ನು ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಮತ್ತು ಉಪಮುಖ್ಯಮಂತ್ರಿ ದಿಯಾ ಕುಮಾರಿ ಅವರು ಶ್ಲಾಘಿಸಿದರು.

ಇಂದು ನೀರು ಯಾದವ್ ಎಂದರೆ: ಒಬ್ಬ ಸರ್ಪಂಚ್ ಅಲ್ಲ. ಒಬ್ಬ ಸಾಮಾಜಿಕ ಪರಿವರ್ತಕಿ. ಒಬ್ಬ ಕ್ರೀಡಾ ಪೋಷಕಿ, ಒಬ್ಬ ಪರಿಸರ ಹೋರಾಟಗಾರ್ತಿ, ಲಕ್ಷಾಂತರ ಗ್ರಾಮೀಣ ಹುಡುಗಿಯರ ಕನಸಿನ ಪ್ರತೀಕ. ಒಂದು ಕಾಲದಲ್ಲಿ, ಲಂಬಿ ಅಹಿರ್ ಹಳ್ಳಿಯ ಹುಡುಗಿಯರು ಕನಸು ಕಾಣುವುದಕ್ಕೂ ಹೆದರಿದ್ದರು. ಇಂದು, ಅದೇ ಹುಡುಗಿಯರು ದೇಶಕ್ಕೆ ಆಟವಾಡುವ ಕನಸು ಕಾಣುತ್ತಿದ್ದಾರೆ. ಅದಕ್ಕೆ ಕಾರಣ. ನೀರು ಯಾದವ್ ಎಂಬ ಒಬ್ಬ ಮಹಿಳೆಯ ಅಚಲ ನಂಬಿಕೆ. “ಒಬ್ಬ ವ್ಯಕ್ತಿಯ ದೃಢಸಂಕಲ್ಪ, ಒಂದು ಹಳ್ಳಿಯ ಭವಿಷ್ಯವನ್ನೇ ಅಲ್ಲ . ಒಂದು ತಲೆಮಾರಿನ ದಿಕ್ಕನ್ನೇ ಬದಲಾಯಿಸಬಲ್ಲದು.” ಇದೇ ಹಾಕಿ ವಾಲಿ ಸರ್ಪಂಚ್ ನೀರು ಯಾದವ್ ಅವರ ಕಥೆ. ಒಂದು ಸಾಮಾನ್ಯ ಹುಡುಗಿಯಿಂದ ಅಸಾಧಾರಣ ನಾಯಕಿಯಾಗುವ ಪಯಣ.

ನೀರು ಯಾದವ್ ಅವರ ಕಥೆ ನಮಗೆ ಕಲಿಸುವುದು ಒಂದೇ:
“ಬದಲಾವಣೆ ಬರಬೇಕೆಂದರೆ ಯಾರೋ ಬರುತ್ತಾರೆ ಎಂದು ಕಾಯಬೇಡಿ, ನೀವೇ ಆ ಬದಲಾವಣೆಯಾಗಿ ನಿಲ್ಲಿ.” ಇಂದು ಲಂಬಿ ಅಹಿರ್ ಕೇವಲ ರಾಜಸ್ಥಾನದ ಒಂದು ಹಳ್ಳಿಯಲ್ಲ, ಅದು ಭಾರತದ ಪ್ರತಿ ಹೆಣ್ಣುಮಗಳ ಕನಸುಗಳು ನನಸಾಗಬಲ್ಲವು ಎಂಬುದಕ್ಕೆ ಸಾಕ್ಷಿಯಾದ ಒಂದು ‘ಮಾದರಿ’. “ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದು, ಮನದಲ್ಲಿ ದೃಢ ಸಂಕಲ್ಪ ಹೊತ್ತು ಹೊರಟರೆ, ವಿಶ್ವವೇ ನಿಮಗೆ ದಾರಿ ಮಾಡಿಕೊಡುತ್ತದೆ.”

  • ಡಾ. ಪ್ರಸನ್ನ ದೇವರಮಠ ಅನಿಲಕುಮಾರ್, ಮಾಗಳ
    ಪದವೀಧರ ಪ್ರಾಥಮಿಕ ಶಿಕ್ಷಕರು
    ಸ.ಹಿ.ಪ್ರಾ.ಶಾಲೆ ಮುದೇನೂರು
    ತಾ. ಹೂವಿನ ಹಡಗಲಿ ಜಿ.ವಿಜಯನಗರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!