ಭಾರತದ ಹೃದಯ ಭಾಗದಲ್ಲಿ ‘ಅಜ್ಞಾನಪುರ’ ಎಂಬ ಗ್ರಾಮವಿದೆ.
ಇಲ್ಲಿನ ಜನರ ಬದುಕು ಸಾವಿರಾರು ವರ್ಷಗಳಿಂದ ‘ಜಾತಿ-ಧರ್ಮ, ಮೇಲು-ಕೀಳು, ವರ್ಣ, ಅಸ್ಪೃಶ್ಯತೆ’ ಎಂಬ ಕೊಳಕು ವೈರಸ್‌ಗೆ ಬಲಿಯಾಗಿದೆ.
ಈ ವೈರಸ್ ಅನ್ನು ದುಷ್ಟ ಪಾಪಿಗಳು ತಮ್ಮ ಸ್ವಾರ್ಥಕ್ಕಾಗಿ ಸೃಷ್ಟಿಸಿ, ವಿಷ್ಣು ಪುರಾಣ, ಶಿವ ಪುರಾಣ, ಗರುಡ ಪುರಾಣದಂತಹ ಕಥೆಗಳ ಮೂಲಕ ಜನರಿಗೆ ಮಂಕು ಬೂದಿ ಎರಚಿ ಮರುಳು ಮಾಡಿದ್ದಾರೆ.
ಗ್ರಾಮದ ಮುಖ್ಯಸ್ಥ-ದೇವಸ್ಥಾನದ ಪೂಜಾರಿ ಮಂಕೇಶ್ವರ, ಈ ಅಜ್ಞಾನದ ಸಾಮ್ರಾಜ್ಯದ ಸೂತ್ರಧಾರನಾಗಿದ್ದಾನೆ!
ಆತ ಪ್ರತಿದಿನ ದೇವಾಲಯದ ಅಂಗಳದಲ್ಲಿ ಪುರಾಣ ಕಥೆಗಳನ್ನು ಹೇಳುತ್ತಿರುತ್ತಾನೆ.
ಪುರಾಣಗಳ ಮೂಲಕ ಅಜ್ಞಾನದ ಕಗ್ಗತ್ತಲೆಯನ್ನು ತುಂಬುತ್ತಿರುತ್ತಾನೆ.
ಅದೇ ಅವನ ಕುಲ ಕಸುಬು ಆಗಿದೆ!
ಅದೇ ಅವನ ದಂಧೆಯ ಬಂಡವಾಳವಾಗಿದೆ!
ಮಂಕೇಶ್ವರ ಉದ್ವೇಗದಿಂದ –
“ಕೇಳಿರಿ! ನಮ್ಮ ಪುರಾಣಗಳು ಹೇಳುತ್ತವೆ, ಈ ‘ವರ್ಗ’ದ ಗಡಿ ಮೀರುವುದು ಪಾಪ. ದೈವ ಇಚ್ಛೆಯಂತೆ ಈ ನಿಯಮಗಳನ್ನು ಮುರಿದರೆ, ಮುಂದಿನ ಜನ್ಮದಲ್ಲಿ ಜಂತುಗಳಾಗಿ ಹುಟ್ಟುತ್ತೀರಿ! ಇದು ವಿಷ್ಣು ಪುರಾಣದ ವಚನ!”
ಜನರು ಹೆದರಿ ತಲೆ ಬಾಗಿದರು.
ಆದರೆ ಆ ಗುಂಪಲ್ಲಿದ್ದ ಒಬ್ಬ ಯುವಕ ಸತ್ಯ.. ಸತ್ಯಮೂರ್ತಿ ಮಾತ್ರ ತಲೆಬಾಗಲಿಲ್ಲ.
ಮಂಕೇಶ್ವರನ ಪುರಾಣದ ಆ ಭಯೋತ್ಪಾದನೆಗೆ ಹೆದರಲಿಲ್ಲ ಸತ್ಯ.
ಸತ್ಯ… ಸತ್ಯಮೂರ್ತಿ ದೃಢವಾಗಿ –
“ಮುಖ್ಯಸ್ಥರೇ, ಒಂದು ಪ್ರಶ್ನೆ. ನಾವು, ಬಹುಜನರು, ಬೆವರು ಸುರಿಸಿ ಶ್ರಮ ಹಾಕಿ ದೇವಾಲಯದ ಗೋಡೆ ಕಟ್ಟುತ್ತೇವೆ. ಆದರೆ ನಾವು ಹೊರಗೆ ನಿಲ್ಲಬೇಕು, ನಮ್ಮನ್ನು ‘ಅಸ್ಪೃಶ್ಯರು’ ಎಂದು ಕರೆಯುವ ಕಾರಣ ಏನು? ನಮ್ಮ ಬೆವರು ಮತ್ತು ಶ್ರಮಕ್ಕೆ ಬೆಲೆ ಇಲ್ಲದಿರುವುದು ಏಕೆ?”ಎಂದು ಕೇಳಿದನು.
ಅದಕ್ಕೆ ದೇವಸ್ಥಾನದ ಪೂಜಾರಿ ಮಂಕೇಶ್ವರ ಕೋಪದಿಂದ –
“ಸತ್ಯಮೂರ್ತಿ! ಪ್ರಶ್ನೆ ಕೇಳಬೇಡ. ಈ ವಿಚಾರಗಳು ನಿನ್ನ ತಿಳುವಳಿಕೆಗೆ ಮೀರಿದ್ದು. ಈ ‘ಮೇಲು-ಕೀಳು’ ಇರುವುದು ಬ್ರಹ್ಮನ ಸೃಷ್ಟಿ. ಇದನ್ನು ಪ್ರಶ್ನಿಸುವುದು ದೇವರಿಗೆ ಮಾಡಿದ ಅಪಚಾರ!”
”ಕ್ಷಮಿಸಿ, ಮುಖ್ಯಸ್ಥರೇ. ಸ್ವಾರ್ಥ ಸಾಧನೆಗಾಗಿ ತಮ್ಮ ಮನಸ್ಸಿಗೆ ಬಂದಿದ್ದೆಲ್ಲವನ್ನೂ ಬರೆದು ‘ದೈವ ಇಚ್ಛೆ’ ಎಂದು ಹೇಳುವ ‘ಆ ಪುರಾಣ-ಈ ಪುರಾಣ’ದ ಕಥೆಗಳು ಕೇವಲ ಅಮಾಯಕ ಮುಗ್ಧ ಜನರನ್ನು ಮೋಸಗೊಳಿಸಲು ಸೃಷ್ಟಿಸಿದ ಹಾದರದ ಕಥೆಗಳು!” ಎಂದು ಹೇಳಿದನು ಸತ್ಯ.
ಸತ್ಯಮೂರ್ತಿಯ ಮಾತುಗಳು ಜನರ ಮನಸ್ಸಿನಲ್ಲಿ ಕ್ರಾಂತಿಯ ಕಿಡಿ ಹಚ್ಚಿದವು.
ಸತ್ಯಮೂರ್ತಿ ಮಂಕೇಶ್ವರನ ಸಭೆಯಿಂದ ಹೊರಬಂದಾಗ, ಹಿರಿಯ ಜ್ಞಾನಿಗಳಾದ ಪ್ರೊಫೆಸರ್ ಕೆ ಎಸ್ ಭಗವಾನ್, ಸತ್ಯ ಪ್ರಕಾಶ್ ಸ್ವಾಮೀಜಿ, ಮಹೇಶಚಂದ್ರ ಗುರು ಹಾಗೂ ಜಿ ಎಲ್ ನಾಗೇಶ್ (ಸತ್ಯವನ್ನು ಅರಿತ ಸಾಮಾಜಿಕ ವಿಜ್ಞಾನಿಗಳು) ಆತನಿಗೆ ಭೇಟಿಯಾದರು.
“ವೇದ- ಪುರಾಣ, ಇಂದ್ರ ಲೋಕ, ಬ್ರಹ್ಮ ಲೋಕ, ಸ್ವರ್ಗ- ನರಕ, ದೇವರು- ಧರ್ಮ… ಎಲ್ಲಾ ಕಲ್ಪನೆಯ ಕಂತೆಗಳು! ಮನುಷ್ಯರು ಇತರೆ ಮನುಷ್ಯರಿಗೆ ಮುಟ್ಟಿಸಿಕೊಳ್ಳಬಾರದು ಎಂಬುದು ಧರ್ಮವಲ್ಲ! ಅದು ದುಷ್ಟ ಪಾಪಿಗಳ ಷಡ್ಯಂತರ! ಹಿಂದೂ ಧರ್ಮ ಅಂದರೆ ಬ್ರಾಹ್ಮಣ ಧರ್ಮ! ಅದು ನಮ್ಮದಲ್ಲ. ಆ ಧರ್ಮವನ್ನು ತ್ಯಜಿಸಿ. ಅದರಿಂದ ಹೊರಬಂದು ಮುಕ್ತರಾಗಿ. ಬ್ರಾಹ್ಮಣ ಧರ್ಮ ಅಂದರೆ ಅದೊಂದು ವೈರಸ್ ಇದ್ದಹಾಗೆ. ಈ ವೈರಸ್‌ಗೆ ಬಲಿಯಾದ ಬಹುಜನ ಭಾರತೀಯರು ಬುದ್ಧ ಬಸವ ಅಂಬೇಡ್ಕರ್ ಫುಲೆ ಪೆರಿಯಾರ್ ಕುವೆಂಪು ಎಂಬ ಹೆಸರಿನ ಮಹಾ ಮೇಧಾವಿಗಳು, ಸೋಶಿಯಲ್ ಸೈಂಟಿಸ್ಟುಗಳು ಕಂಡುಹಿಡಿದ ಜ್ಞಾನವೆಂಬ ವ್ಯಾಕ್ಸಿನ್ ಟ್ರೀಟ್ಮೆಂಟ್ ನಿಂದ ಗುಣಮುಖ ಹೊಂದಬಹುದಾಗಿದೆ”ಎಂದು ಪ್ರೊಫೆಸರ್ ಕೆ ಎಸ್ ಭಗವಾನ್ ಅವರು ಕ್ರಾಂತಿಕಾರಕವಾಗಿ ಹೇಳಿದರು.
ಜಿ ಎಲ್ ನಾಗೇಶ್ ಶಾಂತವಾಗಿ –
“ಹೌದು.. ಪ್ರೊಫೆಸರ್ ಸಾಹೇಬರು ಹೇಳಿದ್ದು ಸತ್ಯವಾಗಿದೆ. ಸತ್ಯಮೂರ್ತಿ, ನಿನ್ನ ಪ್ರಶ್ನೆಗಳು ಸರಿಯಾಗಿವೆ. ಆದರೆ ಈ ವೈರಸ್‌ಗೆ ಕೇವಲ ಪ್ರಶ್ನೆಯಿಂದ ಉತ್ತರ ಸಿಗುವುದಿಲ್ಲ. ನಿನ್ನ ಪೂರ್ವಜರು ಮತ್ತು ನೀನು ಮೋಸ ಹೋಗುತ್ತಲೇ ಇದ್ದೀರ. ಈ ಮೋಸದ ಜಾಲದಿಂದ ಹೊರಬರಬೇಕೆಂದರೆ ಬಹುಜನರು ಬರೆದ ನಿಜ ಇತಿಹಾಸ ಓದಿ ತಿಳಿದುಕೊಳ್ಳಬೇಕಾಗಿದೆ ಎಚ್ಚೆತ್ತುಕೊಳ್ಳಬೇಕಾಗಿದೆ.”
ನಾಗೇಶ್ ಒಂದು ಹಳೆಯ ಗ್ರಂಥಗಳ ಪೆಟ್ಟಿಗೆಯನ್ನು ಸತ್ಯಮೂರ್ತಿಯ ಕೈಗಿತ್ತರು.
ನಾಗೇಶ್ ವಿವರಿಸುತ್ತಾ –
“ನೋಡು ಮಗನೆ, ಈ ವೈರಸ್‌ಗೆ ಬೇಕಾದ ಟ್ರೀಟ್‌ಮೆಂಟ್ ಇಲ್ಲಿದೆ. ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್… ಎಂಬ ಪುಣ್ಯ ಪುರುಷರು-ಸೋಷಿಯಲ್ ಸೈಂಟಿಸ್ಟ್ಗಳು ಕಂಡುಹಿಡಿದಿದ್ದೇ ಈ ‘ಜ್ಞಾನವೆಂಬ ವ್ಯಾಕ್ಸಿನ್’! ನೀನು ಇದನ್ನು ಓದಿ, ಸಂಪೂರ್ಣ ಗುಣಮುಖ ಹೊಂದಬೇಕು “ಎಂದು ಹೇಳಿದರು.
ಅದು ಸತ್ಯ ಮೂರ್ತಿಯ ಮನೆ!
ಸತ್ಯಮೂರ್ತಿ ತಮ್ಮ ಗುಡಿಸಲು ಮನೆಯಲ್ಲಿ ಕುಳಿತು ಸೋಶಿಯಲ್ ಸೈಂಟಿಸ್ಟ್ ಜಿ ಎಲ್ ನಾಗೇಶ್ ನೀಡಿದ ಆ ಗ್ರಂಥಗಳನ್ನು ಓದಲು ಶುರು ಮಾಡಿದ್ದಾನೆ.
ಕತ್ತಲ ಕೋಣೆಗೆ ಸೂರ್ಯನ ಕಿರಣ ಬಂದಂತೆ ಅವನಿಗೆ ಜ್ಞಾನೋದಯವಾಗುತ್ತಿದೆ!
ಬುದ್ಧ ಮತ್ತು ಬಸವ –
“ಮನುಷ್ಯನನ್ನು ನಡತೆ ನಿರ್ಧರಿಸುತ್ತದೆ, ಹುಟ್ಟಲ್ಲ. ಕಾಯಕವೇ ಕೈಲಾಸ.”
ಫುಲೆ ಮತ್ತು ಪೆರಿಯಾರ್ –
“ಸಮಾನತೆಗಾಗಿ, ಈ ಅಸಮಾನತೆಯ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಬೇಕು.”
ಅಂಬೇಡ್ಕರ್ –
“ಶಿಕ್ಷಣ, ಸಂಘಟನೆ, ಹೋರಾಟ – ಈ ವೈರಸ್‌ಗೆ ಅಂತಿಮ ಪರಿಹಾರ. ಸಂವಿಧಾನವೇ ನಮ್ಮ ಶಕ್ತಿ.”
ಸತ್ಯಮೂರ್ತಿ ಅರಿತುಕೊಂಡ, ತಾನು ಕೇವಲ ಮೋಸ ಹೋಗುತ್ತಿರಲಿಲ್ಲ, ತನ್ನನ್ನು ತಾನೇ ಗುಲಾಮಗಿರಿಗೆ ಒಪ್ಪಿಸುತ್ತಿದ್ದೆ.
ಸತ್ಯಮೂರ್ತಿ ಎಚ್ಚೆತ್ತು ಕೊಂಡಿದ್ದಾನೆ.
ಆತ ಈಗ ತಕ್ಷಣವೇ ‘ಜ್ಞಾನದ ವ್ಯಾಕ್ಸಿನ್ ಕೇಂದ್ರ’ (ಪುಟ್ಟ ಗ್ರಂಥಾಲಯ)ವನ್ನು ತೆರೆದಿದ್ದಾನೆ.
ಬಹುಜನರನ್ನು ಒಟ್ಟುಗೂಡಿಸುತ್ತಿದ್ದಾನೆ.
ಕ್ರಾಂತಿಕಾರಿ ಉಪದೇಶ ನೀಡುತ್ತಿದ್ದಾನೆ.
ಸತ್ಯಮೂರ್ತಿ ಜನರನ್ನು ಉದ್ದೇಶಿಸಿ –
“ಸಹೋದರ-ಸಹೋದರಿಯರೇ! ನಾವು ಮಾಡಿದ ಯಾವ ಪಾಪವೂ ಇಲ್ಲ! ನಾವು ಬಲಿಯಾಗಿರುವುದು ದುಷ್ಟ ಪಾಪಿಗಳು ಸೃಷ್ಟಿಸಿದ ಈ ‘ಜಾತಿ-ಧರ್ಮ’ದ ಕೊಳಕು ವೈರಸ್‌ಗೆ! ನಮಗೆ ಈಗ ಬೇಕಾಗಿರುವುದು ಧರ್ಮ ಗ್ರಂಥಗಳಲ್ಲ, ಬದಲಾಗಿ ನಮ್ಮ ಪುಣ್ಯ ಪುರುಷರು ನೀಡಿದ ‘ಜ್ಞಾನವೆಂಬ ವ್ಯಾಕ್ಸಿನ್ ಟ್ರೀಟ್‌ಮೆಂಟ್’! ಇಂದಿನಿಂದ ನೀವು ನಿಮ್ಮ ಮಕ್ಕಳಿಗೆ ಹಾದರದ ಕಥೆಗಳ ಬದಲಿಗೆ, ಡಾ. ಅಂಬೇಡ್ಕರ್ ಸಂವಿಧಾನದ ಮಹತ್ವ, ಬಸವಣ್ಣನ ವಚನಗಳು ಮತ್ತು ಬುದ್ಧನ ತತ್ವಗಳ ಬಗ್ಗೆ ಕಲಿಸಿ. ಈ ಜ್ಞಾನದಿಂದಲೇ ನಾವು ಈ ವೈರಸ್‌ನಿಂದ ಸಂಪೂರ್ಣ ಗುಣಮುಖ ಹೊಂದುತ್ತೇವೆ!”
ಅವನ ಮಾತುಗಳು ಕೇಳುಗರ ಮನಸ್ಸಿನಲ್ಲಿ ಆಳವಾಗಿ ಬೇರೂರಿತು.
ಅವರು ಪುರಾಣಗಳನ್ನು ತಿರಸ್ಕರಿಸಿ, ಸತ್ಯವನ್ನು ಅರಸಿದರು.
ಮಂಕೇಶ್ವರ ಮತ್ತು ಅವನ ಅನುಯಾಯಿಗಳು ಪ್ರತಿಭಟಿಸಿದರು.
ಆದರೆ ಜನರ ಎಚ್ಚರಿಕೆಯು ಹಿಂತಿರುಗುವ ಸ್ಥಿತಿಯಲ್ಲಿರಲಿಲ್ಲ.
ಮಂಕೇಶ್ವರ ಕೀರಲು ಧ್ವನಿಯಲ್ಲಿ –
“ನೀವು ದ್ರೋಹ ಮಾಡುತ್ತಿದ್ದೀರಿ! ದೇವರು ನಿಮ್ಮನ್ನು ನಾಶ ಮಾಡುತ್ತಾನೆ!”
ಸತ್ಯಮೂರ್ತಿ ದೃಢವಾದ ನಗು ನಕ್ಕನು.
ನಂತರ ಹೇಳಿದನು –
“ಮುಖ್ಯಸ್ಥರೇ, ನೀವು ಸೃಷ್ಟಿಸಿದ ದೇವರು ನಾಶ ಮಾಡಲಿಕ್ಕೆ ಆಗುವುದಿಲ್ಲ. ಯಾಕೆಂದರೆ ನಾವು ಈಗ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳ ರಕ್ಷಣೆಯಲ್ಲಿ ಇದ್ದೇವೆ. ನಿಮ್ಮ ಪುರಾಣದ ಕಥೆಗಳು ಕೇವಲ ‘ಮಂಕು ಬೂದಿ’. ನಮ್ಮ ಕೈಯಲ್ಲಿ ಈಗ ನಿಜ ಇತಿಹಾಸದ ಪುಸ್ತಕಗಳಿವೆ.”
ಅಂತಿಮವಾಗಿ, ಬಹುಜನರು ಸಾಮೂಹಿಕವಾಗಿ ನಿರ್ಧರಿಸಿ ‘ಅಜ್ಞಾನಪುರ’ ಎಂಬ ಹೆಸರನ್ನು ಅಳಿಸಿ ಹಾಕಿ, ಆ ಊರಿಗೆ ‘ವಿವೇಕಪುರ’ ಎಂದು ನಾಮಕರಣ ಮಾಡಿದರು.
ವಿವೇಕಪುರದಲ್ಲಿ ಇನ್ನು ಮುಂದೆ ಮೇಲು-ಕೀಳು ಇಲ್ಲ.
ಅಲ್ಲಿ ಯಾರೂ ಅಸ್ಪೃಶ್ಯರಲ್ಲ.
ಎಲ್ಲರೂ ಸಮಾನರು!
ಎಲ್ಲರೂ ವೈಚಾರಿಕರು!!
ಆ ಗ್ರಾಮವು, ದುಷ್ಟ ಪಾಪಿಗಳು ಸೃಷ್ಟಿಸಿದ ಕೊಳಕು ವೈರಸ್‌ನಿಂದ ಹೊರಬಂದು, ಜ್ಞಾನ ಮತ್ತು ವಿವೇಕದ ಹಾದಿಯಲ್ಲಿ ನಡೆಯುವ ಎಲ್ಲ ಭಾರತೀಯರಿಗೂ ಒಂದು ಕ್ರಾಂತಿಕಾರಕ ಮಾದರಿಯಾಯಿತು.
- ಜಿ ಎಲ್ ನಾಗೇಶ್




















