
ಕಂಪ್ಲಿ : ಸರ್ಕಾರಿ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ಕಂಪ್ಲಿ ಪಟ್ಟಣದಲ್ಲಿ ಶಾಲಾ–ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಬಸ್‌ಗಳ ಬಾಗಿಲಲ್ಲಿ ಜೋತುಬಿದ್ದು ಅಪಾಯಕಾರಿಯಾಗಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಪರಿಸ್ಥಿತಿಗಳನ್ನು ನೋಡಿಯೂ ಸಹ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಕಂಪ್ಲಿ ಪಟ್ಟಣವು ತಾಲೂಕು ಶೈಕ್ಷಣಿಕ ಕೇಂದ್ರ ಎಂದು ಪ್ರಸಿದ್ಧಿ ಪಡೆದಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಪದವಿಯವರೆಗೆ ಕೋರ್ಸುಗಳು ಲಭ್ಯ ಇವೆ. ಶಿಕ್ಷಣ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳಿಗೆ, ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿದಿನವೂ ಸಾವಿರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಕಲಿಯಲು ಬರುತ್ತಾರೆ. ಆದರೆ ಈಚೆಗೆ ಬಸ್‌ಗಳ ಸಂಖ್ಯೆ ಕಡಿಮೆ ಆಗಿರುವ ಕಾರಣ ಜೋತು ಬಿದ್ದು ಪ್ರಯಾಣ ಮಾಡುತ್ತಿದ್ದಾರೆ.
ಶಾಲಾ–ಕಾಲೇಜುಗಳಿಗೆ ತೆರಳುವ ಸಮಯಕ್ಕೆ ಬಸ್ ಬರುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ಬರುವ ಯಾವುದಾದರೊಂದು ಬಸ್‌ಗೆ ವಿಪರೀತವಾಗಿ ಜನ ತುಂಬಿರುತ್ತಾರೆ. ಬಸ್ ನಲ್ಲಿ ಜಾಗ ಸಿಗದೆ ತರಗತಿಗಳನ್ನು ತಪ್ಪಿಸಿಕೊಂಡು ಶಿಕ್ಷಕರಿಂದ ಬೈಯಿಸಿಕೊಳ್ಳುವ ಘಟನೆಗಳು ಸಾಮಾನ್ಯವಾಗಿವೆ. ಅದರಲ್ಲೂ ಸಂಜೆ ವೇಳೆ ಬಸ್ ಸಂಖ್ಯೆ ಕಡಿಮೆಯಾಗಿರುವ ಕಾರಣ ವಿದ್ಯಾರ್ಥಿನಿಯರು ನಿಲ್ಲಲು ಜಾಗವಿಲ್ಲದೆ ಇದ್ದರು ಸಹ ಜೋತುಬಿದ್ದು ಮನೆಗೆ ಹೋಗುವ ಅನಿವಾರ್ಯತೆ ಉಂಟಾಗಿದೆ ಎಂದು ವಿದ್ಯಾರ್ಥಿನಿ ಕಾವೇರಿ ಸಣಾಪುರ ಹೇಳಿದರು.
ಬಸ್‌ಗಳಿಗೆ ಬಾಗಿಲುಗಳು ಇದ್ದರೂ, ಪದೇ ಪದೇ ತೆರೆದು ಮುಚ್ಚಬೇಕು ಎನ್ನುವ ಕಾರಣಕ್ಕೆ ಬಾಗಿಲನ್ನು ಮುಚ್ಚಿ ಬಿಟ್ಟಿರುತ್ತಾರೆ. ಇದರಿಂದ ಸಲೀಸಾಗಿ ಪ್ರಯಾಣಿಕರು ಹತ್ತಿ ಇಳಿಯಲು ಅನುಕೂಲವಿದೆ. ಆದರೆ, ಜೋತುಬಿದ್ದು ಪ್ರಯಾಣಿಸುವಾಗ ಬಸ್‌ನಿಂದ ಆಯತಪ್ಪಿ ಬಿದ್ದರೆ, ನೇರವಾಗಿ ಹೊರಗೆ ಬಂದು ಬೀಳುವ ಸಾಧ್ಯತೆಗಳಿವೆ. ಈ ಕುರಿತು ಸಾರಿಗೆ ಇಲಾಖೆಯವರು ಹಾಗೂ ಪೊಲೀಸ್ ಇಲಾಖೆಯವರು ಅಗತ್ಯ ಕ್ರಮವನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಕ.ರ.ವೇ ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಎಂ.ಎಸ್ ಮುನ್ನಾ ಆಗ್ರಹಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















