ಅತ್ತಿಮನಿ ಸೊಸಿ ನಾ ಶಿಸ್ತಿನಾಕಿ
ತವರು ಮನೆಯ ಬಿಟ್ಟು ಬಂದಾಕಿ
ಗಂಡನ ಮನೆಗೆ ಬೆಳಕಾಗಿ ಬೆಳಗಾಕಿ.
ಗಂಡನಗೂಡ ಬಾಳ್ವೆ ಮಾಡಾಕಿ
ವಂಶಾಕ ಎರಡು ಮಕ್ಕಳ ಹೆರುವಾಕಿ
ಕೈಹಿಡಿದ ಗಂಡನೇ ದೇವರೆಂದು ನಂಬಿದಾಕಿ.
ಅತ್ತೆಮಾವನ ಸೇವೆ ಮಾಡಾಕಿ
ಬಡತನದಾಗ ಹುಟ್ಟಿ ನಾ ಬೆಳೆದಾಕಿ
ಗಂಡಗ ಬೆನ್ನೆಲುಬಾಗಿ ಸಂಸಾರ ಮಾಡಾಕಿ.
ಕಷ್ಟ ಸುಖದಾಗ ಭಾಗಿಯಾಗಾಕಿ
ಕೊಟ್ಟಮನಿಗೆ ಒಳ್ಳೆ ಹೆಸರು ತರುವಾಕಿ
ಗಂಡಾನ ಹೆಜ್ಜಾಗ ಹೆಜ್ಜಿಯಿಟ್ಟು ನಡೆವಾಕಿ.
ಮೂಡಲಕ ನಾ ಏಳುವಾಕಿ
ಮುಂಜಾನೆದ್ದು ಕಸ ಕಡ್ಡಿ ಬಳಿವಾಕಿ
ಕೋಳಿ ಕೂಗಿದಾಗ ರಂಗೋಲಿ ಬಿಡುವಾಕಿ.
ಹಸುವಿಗಿ ಹಾಲ ಕರೆವಾಕಿ
ಹಾಲಿಗಿ ಹೆಪ್ಪಾಕಿ ಬೆಣ್ಣೆ ಹೊಸೆಯಾಕಿ
ಮನಿ ಮಂದಿಗೆಲ್ಲ ಬೆಣ್ಣೆ ತುಪ್ಪ ತಿನಿಸಾಕಿ.
ಆಸರಕಿ ಬ್ಯಾಸರಕಿ ಬದಿಗಿಡುವಾಕಿ
ಮೈ ಮುರಿದು ಹೊಲದಾಗ ದುಡಿವಾಕಿ
ಹುಲ್ಲಿನ ಹೊರೆಹೊತ್ತು ಮನಿಗೆ ಬರುವಾಕಿ.
ಹೆತ್ತವರ ನೆನಪಲ್ಲೆ ಇರುವಾಕಿ
ಹುಟ್ಟಿದ ಮನಿಗಿ ಹೂವು ತರುವಾಕಿ
ಪಂಚಮಿ ಹಬ್ಬಕ ತವರಿಗಿ ಹೋಗಿ ಬರುವಾಕಿ.
ಗುಡಿಸಲ ಮನ್ಯಾಗ ಇರುವಾಕಿ
ಗುಡಿಸಲೆ ಗುಡಿಯೆಂದು ನಂಬಿದಾಕಿ
ಬಾಳ ಬಂಡಿಯ ನೊಗವ ಹೊರುವಾಕಿ.
ಸುಖ ಸಂಸಾರಕ ಕಣ್ಣಾಗಿರುವಾಕಿ
ಗವಿ ವೀರಭದ್ರನ ಕರುಣೆಗೆ ಕೈ ಮುಗಿವಾಕಿ
ಚೆಂದಾದ ಮೀನಕೇರಿ ಊರಾಗ ಬಾಳ್ವೆ ಮಾಡಾಕಿ.
- ಡಾ. ಅಶೋಕ ಕುಮಾರ ಎಸ್. ಮಟ್ಟಿ ಮೀನಕೇರಿ, ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ, ಯಾದಗಿರಿ.




















