ಕಂಪ್ಲಿ: ಕಂಪ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯದ ಜೊತೆಗೆ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಹೊರತು ಜನಾರ್ಧನರೆಡ್ಡಿ ಅವರ ಹೇಳಿಕೆಗಳಿಗೆ ಕಿವಿಗೊಡುವುದಿಲ್ಲ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಸ್ಥಳೀಯ ಬಳ್ಳಾರಿ ರಸ್ತೆಯ ಎಚ್‌ಪಿ ಪೆಟ್ರೋಲ್ ಬಂಕ್ ಎದುರುಗಡೆಯ 22ನೇ ವಾರ್ಡಿನಲ್ಲಿ 2024-25ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯಡಿ ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಸಿಸಿ ಚರಂಡಿ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿದ ಮಾತನಾಡಿ, ಜನಾರ್ಧನರೆಡ್ಡಿ ಬಹಳ ದೊಡ್ಡವರು. ರಾಜ್ಯ ಮತ್ತು ಕೇಂದ್ರದ ನಾಯಕರಾಗಿದ್ದಾರೆ. ಅವರು ಏನಾದರೂ ಮಾತಾಡುತ್ತಾರೆ. ಅವರಿಗೆ ಮಾಧ್ಯಮದಲ್ಲಿ ಮಾತನಾಡುವ ಚಟವಿದೆ. ಆದರೆ, ನಾನು ಮಾಧ್ಯಮದಿಂದ ದೂರವಿರುತ್ತೇನೆ. ಇಂತಹ ಮಾತುಗಳಿಗೆ ಕಿವಿಗೊಡುವುದಿಲ್ಲ. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದರೆ, ಮತದಾರರು ಕೈಹಿಡಿಯಲಿದ್ದಾರೆ ಬೈದವರೇ ದೊಡ್ಡವರಾಗಲಿ ಎಂದು ಹೇಳಿದರು.
ಉತ್ಸವ ಮಾಡಿದರೆ, ಕಂಪ್ಲಿ ಮತ್ತು ಕುರುಗೋಡು ಎರಡು ಉತ್ಸವಗಳನ್ನು ಮಾಡುತ್ತೇನೆ. ಓಬಿಸಿ ಹಾಸ್ಟೆಲ್ ನಿರ್ಮಿಸಬೇಕೆಂಬುದು ಬಹುದಿನದ ಬೇಡಿಕೆಯಾಗಿತ್ತು. ಆದರೆ, ಈಗ ಕಾಲ ಕೂಡಿ ಬಂದಿದೆ ಈಗಾಗಲೇ ಕಟ್ಟಡ ನಿರ್ಮಾಣಕ್ಕಾಗಿ 3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇನ್ನೂ ಮೂರು ಕೋಟಿ ಬರುವದಿದ್ದು, ಒಟ್ಟಾರೆ 6 ಕೋಟಿ ವೆಚ್ಚದಲ್ಲಿ ಹಾಸ್ಟರ್ ಕಾಮಗಾರಿ ಆರಂಭಗೊಂಡಿದೆ. ಈಗಾಗಲೇ ಎಸ್ ಸಿ, ಓಬಿಸಿ, ಅಲ್ಪಸಂಖ್ಯಾತರ ಹಾಸ್ಟೆಲ್ ಆಗಿದೆ. ಬರುವ ದಿನದಲ್ಲಿ ಸುಮಾರು 5.50 ಕೋಟಿಯಲ್ಲಿ ಎಸ್ ಟಿ ಹಾಸ್ಟೆಲ್ ಆಗಲಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೊದಲಿಂದಲೂ ಹೆಚ್ಚಿನ ಆಧ್ಯತೆ ನೀಡಲಾಗಿದೆ.
ಈ ಭಾಗದಲ್ಲಿ ರೈತಾಪಿ ಜನರಿದ್ದಾರೆ. ಆದ್ದರಿಂದ ಮಕ್ಕಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ, ಮುಂದಿನ ದಿನದಲ್ಲಿ ಓಬಿಸಿ ಮಹಿಳಾ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು.
ನಂತರ ಓಬಿಸಿ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ಶಾಸಕ ಗಣೇಶ ಅಡಿಗಲ್ಲು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಇಇ ಚಂದ್ರಕಾಂತ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ನಿಲಯ ಪಾಲಕರಾದ ಎಂ.ಗಾದಿಲಿಂಗಪ್ಪ, ವಿರುಪಾಕ್ಷಿ, ಮುಖಂಡರಾದ ಕೆ.ಶ್ರೀನಿವಾಸರಾವ್, ಭಟ್ಟ ಪ್ರಸಾದ್, ಸಿ.ಆರ್.ಹನುಮಂತ, ಎಲ್.ರಾಮನಾಯ್ಡು, ಕರಿಬಸವನಗೌಡ, ಜಾಫರ್, ಹಬೀಬ್ ರೆಹಮಾನ್, ಕೆ.ಷಣ್ಮುಕಪ್ಪ, ನಾಯಕರ ತಿಮ್ಮಪ್ಪ, ಗೋಪಾಲ, ಯಾಳ್ಪಿ ಅಬ್ದುಲ್ ಮುನಾಫ್, ಕರೇಕಲ್ ಮನೋಹರ, ಮೆಹಬೂಬ್, ಡೆಕೋರೇಷನ್ ನಾಗರಾಜ, ಡಿಸ್ ಪ್ರಸಾದ್, ಹನುಮಂತಪ್ಪ, ಅಕ್ಕಿ ಜಿಲಾನ್ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















