ತುಮಕೂರು/ ಮಧುಗಿರಿ :ನವೋದಯ, ಸೈನಿಕ, ಮೊರಾರ್ಜಿ ದೇಸಾಯಿ, ಕಸ್ತೂರಿಬಾ ಹಾಗೂ ಇತರೆ ವಸತಿ ಶಾಲೆಗಳ ಉಚಿತ ಪ್ರವೇಶ ಕುರಿತಾಗಿ ಗ್ರಾಮಾಂತರ ಹಾಗೂ ಹಳ್ಳಿಗಾಡಿನ ಬಡ ಜನತೆಗೆ ಮಾಹಿತಿ ನೀಡುವ ಉದ್ದೇಶದಿಂದ ಮಧುಗಿರಿಯ ಮಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಕೌಶಲ್ಯ ಅಭಿವೃದ್ಧಿ ಇಲಾಖೆಯ ಮುಖಂಡರಾದ ಮುರಳೀಧರ ಹಾಲಪ್ಪ ಅವರು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಮಕ್ಕಳು ಪ್ರತಿಭಾವಂತರಾಗಿದ್ದರೂ ಸರಿಯಾದ ಮಾಹಿತಿ ಇಲ್ಲದೆ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳು ನವೋದಯ ಮತ್ತು ಸೈನಿಕ ಶಾಲೆಗಳಂತಹ ಪ್ರತಿಷ್ಠಿತ ವಸತಿ ಶಾಲೆಗಳ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ವೇಳೆ ಸಾರ್ವಜನಿಕರಿಗೆ ತಮ್ಮ ಮಕ್ಕಳನ್ನು ಯಾವ ರೀತಿ ನೋಂದಾಯಿಸಬೇಕು, ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಅಗತ್ಯ ದಾಖಲೆಗಳು ಹಾಗೂ ಕೊನೆಯ ದಿನಾಂಕಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು. ಅಲ್ಲದೇ, ಸ್ಥಳದಲ್ಲೇ ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದ ಸಂಶಯಗಳಿಗೆ ಉತ್ತರ ನೀಡಿ ಮಾರ್ಗದರ್ಶನ ಮಾಡಲಾಯಿತು.
ಈ ಜಾಗೃತಿ ಸಭೆಯಲ್ಲಿ ಅನೇಕ ಗ್ರಾಮಾಂತರ ಪ್ರದೇಶದ ಪೋಷಕರು ಭಾಗವಹಿಸಿ, ತಮ್ಮ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು. ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿವೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ ದಿನೇಶ್ ಕೆ.




















