
ತುಮಕೂರು/ ಮಧುಗಿರಿ ತಾಲೂಕು ಮಿಡಿಗೇಶಿ ಹೋಬಳಿ ವ್ಯಾಪ್ತಿಯ ಛತ್ರಪಾಳ್ಯ ಗ್ರಾಮದ ಶ್ರೀ ಸಪ್ಲಮ್ಮ ದೇವಸ್ಥಾನ ಹಾಗೂ ಹನುಮಂತಪುರದಲ್ಲಿರುವ ಈರದಿಮ್ಮಮ್ಮ ದೇವಾಲಯಗಳಲ್ಲಿ ಕಳ್ಳರು ಬೀಗ ಮುರಿದು ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ ಭಕ್ತಿಭಾವದ ಕೇಂದ್ರಗಳಾಗಿರುವ ಈ ದೇವಾಲಯಗಳಲ್ಲಿ ದೇವಿಯ ಅಲಂಕಾರಕ್ಕೆ ಬಳಸಲಾಗುತ್ತಿದ್ದ ಅಮೂಲ್ಯ ಬೆಳ್ಳಿ ಹಾಗೂ ಚಿನ್ನದ ಆಭರಣಗಳು ಕಳ್ಳತನವಾಗಿವೆ. ಸೋಮವಾರ ಬೆಳಿಗ್ಗೆ ದೇವಾಲಯಕ್ಕೆ ಪೂಜೆಗೆ ಬಂದ ಗ್ರಾಮಸ್ಥರಿಗೆ ಕಳ್ಳತನ ನಡೆದಿರುವುದು ತಿಳಿದು ಬಂದಿದ್ದು, ತಕ್ಷಣವೇ ಈ ವಿಷಯ ಗ್ರಾಮದಲ್ಲಿ ಹರಡಿದೆ.
ಘಟನೆ ತಿಳಿದ ಕೂಡಲೇ ಛತ್ರಪಾಳ್ಯ ಹಾಗೂ ಹನುಮಂತಪುರ ಗ್ರಾಮದ ಗ್ರಾಮಸ್ಥರು ಮಿಡಿಗೇಶಿ ಪೊಲೀಸ್ ಠಾಣೆಗೆ ತೆರಳಿ ಕಳ್ಳತನದ ಕುರಿತು ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಈ ಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರತಿ ವರ್ಷ ಎರಡು–ಮೂರು ಬಾರಿ ದೇವಾಲಯಗಳು ಹಾಗೂ ಮನೆಗಳಲ್ಲಿ ಕಳ್ಳತನ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಭಕ್ತಿಭಾವದ ಕೇಂದ್ರಗಳಾಗಿರುವ ದೇವಾಲಯಗಳಲ್ಲಿಯೇ ಕಳ್ಳತನ ನಡೆಯುತ್ತಿರುವುದು ದುಃಖಕರ ಸಂಗತಿಯಾಗಿದ್ದು, ಕಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಕ್ತ ಸಮೂಹ ಒತ್ತಾಯಿಸಿದೆ.
ಮಧುಗಿರಿ ತಾಲ್ಲೂಕು ಫೋಟೋಗ್ರಾಫರ್ ಸಂಘದ ಅಧ್ಯಕ್ಷ ಚಿತ್ತಯ್ಯ ಮಾತನಾಡಿ, “ ಪುನಃ ಪುನಃ ಕಳ್ಳತನ ನಡೆಯುತ್ತಿದ್ದರೂ ಆರೋಪಿಗಳ ಪತ್ತೆ ವಿಳಂಬವಾಗುತ್ತಿರುವುದು ಖಂಡನೀಯ. ಪೊಲೀಸ್ ಇಲಾಖೆ ಗಸ್ತು ಹೆಚ್ಚಿಸಿ, ಕಳ್ಳರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ” ಎಂದು ಆಗ್ರಹಿಸಿದರು.
ಗ್ರಾಮಸ್ಥರು ದೇವಾಲಯಗಳ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಸಿಸಿ ಕ್ಯಾಮೆರಾ ಅಳವಡಿಸಲು ಸಹಾಯ ನೀಡುವಂತೆ ಪೊಲೀಸ್ ಇಲಾಖೆ ಹಾಗೂ ಆಡಳಿತವನ್ನು ಮನವಿ ಮಾಡಿದ್ದಾರೆ.
ವರದಿ ದಿನೇಶ್ ಕೆ



















