ಬಳ್ಳಾರಿ/ ಕಂಪ್ಲಿ : ತಮ್ಮ ಸಾವಿರಾರು ವಚನಗಳ ಮೂಲಕ ಸಾಮಾಜಿಕ ಬದಲಾವಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಡಿವಾಳ ಮಾಚಿದೇವರ ಕೊಡುಗೆ ಈ ನಾಡಿಗೆ ಅಪಾರವಾಗಿದೆ ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ತಿಳಿಸಿದರು.
ಅವರು ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ವೀರಗಣಾಚಾರಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಣೆಯಲ್ಲಿ ಮಾತನಾಡಿ, ಸಮಾಜದಲ್ಲಿ ತೀರಾ ಹಿಂದುಳಿದಿರುವ ಹಾಗೂ ಇಂದಿಗೂ ತಮ್ಮ ಪುರಾತನ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಮಡಿವಾಳ ಸಮುದಾಯಕ್ಕೆ ಸರ್ಕಾರದಿಂದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಿಕೊಡುವುದಾಗಿ ತಿಳಿಸಿದ ಅವರು ಮಹಾನ್ ಕಾಯಕಯೋಗಿಯಾಗಿದ್ದ ಮಡಿವಾಳ ಮಾಚಿದೇವರ ಜಯಂತಿ ಆಚರಿಸಿದರೆ ಸಾಲದು ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಕಂಪ್ಲಿ ತಾಲ್ಲೂಕು ಮಡಿವಾಳರ ಸಂಘದ ಅಧ್ಯಕ್ಷ ಎಚ್.ಹುಲುಗಪ್ಪ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಮಡಿವಾಳ ಸಮುದಾಯಕ್ಕೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಪಟ್ಟಣದಲ್ಲಿ ಸೂಕ್ತ ಸ್ಥಳಗಳಲ್ಲಿ ಧೊಬಿಘಾಟ್‌ಗಳನ್ನು ನಿರ್ಮಿಸಿಕೊಡಬೇಕು. ಮಡಿವಾಳ ಸಮುದಾಯಕ್ಕೆ ಅವರ ಕಾಯಕಗಳಿಗೆ ನೆರವಾಗುವಂತಹ ಆಧುನಿಕ ಸಲಕರಣೆಗಳನ್ನು ಒದಗಿಸಿಕೊಡಬೇಕೆಂದು ಹೇಳಿದರು.
ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಪುಷ್ಪಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳು, ಮಡಿವಾಳ ಸಮುದಾಯದ ಮುಖಂಡರಾದ ವಿರೂಪಾಕ್ಷಿ, ಹುಲುಗೇಶ್, ಬಸವರಾಜ, ಎಲ್‌ಐಸಿ ಈರಣ್ಣ, ಸಣ್ಣಈರಣ್ಣ, ರಾಜೇಶ್, ಎ.ರಾಜು, ಈರಣ್ಣ, ಕನಕರಾಜ್, ಬಸವರಾಜ ಸೇರಿದಂತೆ ಮಡಿವಾಳ ಸಮಾಜದ ಮುಖಂಡರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















