
ಬಳ್ಳಾರಿ ಕಂಪ್ಲಿ : ಪಟ್ಟಣದ ಶ್ರೀ ಓದ್ಸೊ ಜಡಿಯಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆಯ ವೀರಶೈವ ಭವನದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀಮತಿ ಲಕ್ಷ್ಮೀದೇವಿ ಮತ್ತು ಭೋಜನಗೌಡ ಸ್ಮರಣಾರ್ಥ, ದಿ. ಶ್ರೀ ಗೊಣೀರು ಮಾತೃಶ್ರೀ ಗಂಗಮ್ಮ ಸಿದ್ದಪ್ಪ ದತ್ತಿ ಕಾರ್ಯಕ್ರಮ ನಡೆಯಿತು.
ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ ಕಸಾಪ ಕಂಪ್ಲಿ ತಾಲೂಕಿನ ಅಧ್ಯಕ್ಷರಾದ ಶ್ರೀ ಎಸ್. ಜಿ. ಚಿತ್ರಗಾರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಮತ್ತು ಇತಿಹಾಸದ ವಿವಿಧ ವಿಷಯಗಳ ಕುರಿತು ದತ್ತಿ ದಾನಿಗಳ ನೆರವಿನೊಂದಿಗೆ ನಿಯಮಿತವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಗಳು ಜ್ಞಾನ ವಿಸ್ತರಣೆ ಮತ್ತು ಕನ್ನಡ ಭಾಷಾ ಪ್ರಸಾರಕ್ಕೆ ಪೂರಕವಾಗಿದ್ದು, ತಜ್ಞರಿಂದ ಉಪನ್ಯಾಸಗಳನ್ನು ಹಮ್ಮಿಕೊಳ್ಳುತ್ತವೆ.
ಸಾಹಿತ್ಯ, ಸಂಗೀತ, ಕಲೆ, ಮತ್ತು ಸಂಸ್ಕೃತಿಯ ಸಂರಕ್ಷಣೆ ಮತ್ತು ವಚನ ಸಾಹಿತ್ಯ, ಕನ್ನಡ ಇತಿಹಾಸ, ಸಂಶೋಧನೆ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತು ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಜೆ.ವಿ.ಸಿ. ಪಿ.ಯು.ಕಾಲೇಜ್ ಪ್ರಾಂಶುಪಾಲ ಬಸವರಾಜ ನಾಯಕ “ಅಕ್ಕಮಹಾದೇವಿಯವರ ಜೀವನ ಚರಿತ್ರೆ” ಕುರಿತು ದತ್ತಿ ಉಪನ್ಯಾಸ ನೀಡಿ ಅಕ್ಕಮಹಾದೇವಿ 12ನೇ ಶತಮಾನದ ಪ್ರಸಿದ್ಧ ಕನ್ನಡ ವಚನಕಾರ್ತಿ, ಶಿವಶರಣೆ ಮತ್ತು ಕನ್ನಡದ ಪ್ರಥಮ ಮಹಿಳಾ ಕವಯತ್ರಿ. ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಜನಿಸಿದ ಇವರು, ಚೆನ್ನಮಲ್ಲಿಕಾರ್ಜುನನನ್ನು ಪತಿಯೆಂದು ಭಾವಿಸಿ ಲೌಕಿಕ ಜೀವನವನ್ನು ತ್ಯಜಿಸಿ, ಕೇಶಾಂಬರೆಯಾಗಿ ಬದುಕಿದವರು. ಬಸವಣ್ಣ, ಅಲ್ಲಮಪ್ರಭುಗಳ ಸಮಕಾಲೀನರಾಗಿದ್ದ ಇವರು, ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ಚರ್ಚೆಗಳಲ್ಲಿ ಪಾಲ್ಗೊಂಡು ಕದಳಿ ವನದಲ್ಲಿ ಶಿವನಲ್ಲಿ ಲೀನರಾದರು ಎಂದು ತಿಳಿಸಿದರು.
ಓದ್ದೋ ಜಡಿಯಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆಯ ಉಪಧ್ಯಾಯಿನಿ ಸಂಗೀತಾ
“ಶ್ರೀ ಕನಕದಾಸರ ಜೀವನ ಮತ್ತು ಸಾಹಿತ್ಯ” ಕುರಿತು
ದತ್ತಿ ಉಪನ್ಯಾಸ ನೀಡಿ ಕನಕದಾಸರು 16ನೇ ಶತಮಾನದ ಪ್ರಸಿದ್ಧ ಕನ್ನಡ ಹರಿದಾಸ, ಕವಿ ಮತ್ತು ಸಮಾಜ ಸುಧಾರಕ. ಹಾವೇರಿ ಜಿಲ್ಲೆಯ ಬಾಡಾದಲ್ಲಿ ಬೀರಪ್ಪನಾಯಕ-ಬಚ್ಚಮ್ಮ ದಂಪತಿಗೆ ಜನಿಸಿದ ಇವರ ಮೂಲ ಹೆಸರು ತಿಮ್ಮಪ್ಪನಾಯಕ. ಯುದ್ಧವೊಂದರಲ್ಲಿನ ಪವಾಡಸದೃಶ ಪಾರುಗಾಣಿಕೆಯ ನಂತರ ವೈರಾಗ್ಯ ಹೊಂದಿ, ವ್ಯಾಸತೀರ್ಥರ ಶಿಷ್ಯರಾಗಿ ಕಾಗಿನೆಲೆಯ ಆದಿಕೇಶವನ ಭಕ್ತರಾದರು. ಕೀರ್ತನೆ, ಉಗಾಭೋಗ, ಮುಂಡಿಗೆಗಳ ಮೂಲಕ ಸಾಮಾಜಿಕ ಅಸಮಾನತೆಯನ್ನು ಖಂಡಿಸಿದರು. ಕುಲ-ಕುಲ ಕುಲವೆಂದು ಹೊಡೆದಾಡದಿರಿ” ಎಂಬ ಕೀರ್ತನೆಯ ಮೂಲಕ ಜಾತಿ ಪದ್ಧತಿಯನ್ನು, ಅಸಮಾನತೆಯನ್ನು ಕಠಿಣವಾಗಿ ಟೀಕಿಸಿದರು.
ಕರ್ನಾಟಕ ಸಂಗೀತಕ್ಕೆ ತಮ್ಮ ಕೀರ್ತನೆಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಾಗೀಶ್ ಪಂಡಿತಾರಾಧ್ಯ, ವಿ.ವಿದ್ಯಾಧರ, ಚಂದ್ರಶೇಖರ ಎಂ, ಬಂಗಿ ದೊಡ್ಡ, ಅಂಬಿಗರ ಮಂಜುನಾಥ, ಎಲಿಗಾರ ವೆಂಕಟರೆಡ್ಡಿ, ಎಸ್.ಡಿ. ಬಸವರಾಜ, ಎಸ್. ಶ್ಯಾಮ್ ಸುಂದರ್, ಅಶೋಕ ಕುಕನೂರ್, ಹಾಗೂ ಕ.ಸಾ.ಪ. ಕಾರ್ಯಕಾರಿಣಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















